ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಧಾರವಾಡ | ಕೃಷಿ ಉತ್ಪನ್ನ ಮೌಲ್ಯವರ್ಧನೆ; ಗಳಿಕೆಗೆ ದಾರಿ: ಉಷಾ ಮಳಗಿ

Published : 24 ಸೆಪ್ಟೆಂಬರ್ 2024, 5:52 IST
Last Updated : 24 ಸೆಪ್ಟೆಂಬರ್ 2024, 5:52 IST
ಫಾಲೋ ಮಾಡಿ
Comments

ಧಾರವಾಡ: ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಿ ಹೆಚ್ಚು ಆದಾಯ ಗಳಿಸಬಹುದು. ಉತ್ಪನ್ನದಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು’ ಎಂದು ಕೃಷಿ ವಿಶ್ವವಿದ್ಯಾಲಯದ ಸಮುದಾಯ ವಿಜ್ಞಾನ ವಿದ್ಯಾಲಯದ ನಿವೃತ್ತ ಅಧಿಕಾರಿ ಉಷಾ ಮಳಗಿ ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ‘ಪರಿಕರಗಳ ಸಾಮರ್ಥ್ಯ ಹೆಚ್ಚಿಸಲು ಮತ್ತು ಉತ್ಪನ್ನಗಳ ಮೌಲ್ಯವರ್ಧನೆ ವೃದ್ಧಿಸಲು ದ್ವಿತೀಯ ಕೃಷಿ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಬೇಳೆ ಕಾಳು, ಎಣ್ಣೆಕಾಳು, ಕಿರುಧಾನ್ಯ, ತರಕಾರಿ, ಹಣ್ಣು ಮೊದಲಾದವುಗಳ ಮೌಲ್ಯವರ್ಧನೆ ನಿಟ್ಟಿನಲ್ಲಿ ರೈತರು ಗಮನ ಹರಿಸಬೇಕು. ಮಕ್ಕಳು, ಕ್ರೀಡಾಪಟುಗಳು, ವೃದ್ಧರು, ತೂಕ ಇಳಿಸುವವರು, ಮಧುಮೇಹಿಗಳಿಗೆ ಅನುಕೂಲಕರ ಮತ್ತು ಆರೋಗ್ಯಗರ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಬೇಕು. ಕೃಷಿ ವಿಶ್ವವಿದ್ಯಾಲಯದ ಆಹಾರ ತಾಂತ್ರಿಕತೆ ವಿಭಾಗ ಮೊದಲಾದ ಸಂಸ್ಥೆಗಳಿಂದ ಆಹಾರ ಪದಾರ್ಥ ಸಿದ್ಧತೆ ವಿಧಾನಗಳನ್ನು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಬೇಳೆ ಕಾಳುಗಳನ್ನು ಹುರಿಗಾಳು, ಮೊಳಕೆ ಕಾಳು ಮಾಡಿ, ತರಕಾರಿ (ಟೊಮೆಟೊ, ಬೀನ್ಸ್‌...) ಒಣಗಿಸಿ ಮೌಲ್ಯವರ್ಧನೆ ಮಾಡಬಹುದು. ಒಣಗಿದ ತರಕಾರಿಯನ್ನು ಸೂಪ್‌ ತಯಾರಿಸಲು ಬಳಸುತ್ತಾರೆ. ಹಣ್ಣಿನ ತಿರುಳಿನಿಂದ ಜಾಮ್, ಪಾನೀಯ ತಯಾರಿಸುತ್ತಾರೆ. ಮಸಾಲಾ ಪದಾರ್ಥ ಸಂಸ್ಕರಿಸಿ ಸಾರಿನ ಪುಡಿ ಮೊದಲಾದವನ್ನು ತಯಾರಿಸಬಹುದು. ಹಲವಾರು ಉತ್ಪನ್ನಗಳ ಮೌಲ್ಯ ವರ್ಧನೆ ಮಾಡಿ, ವಿದೇಶಗಳಿಗೂ ರಫ್ತು ಮಾಡುತ್ತಾರೆ’ ಎಂದು ತಿಳಿಸಿದರು.

‘ಮೌಲ್ಯವರ್ಧಿತ ಆಹಾರ ತಯಾರಿಸಲು ಸರ್ಕಾರವು ಬೆಂಬಲ ನೀಡುತ್ತಿದೆ. ಪ್ರಧಾನ ಮಂತ್ರಿ ಮೈಕ್ರೋ ಫುಡ್‌ ಪ್ರೊಸೆಸಿಂಗ್‌ ಎಂಟರ್‌ಪ್ರೈಸಸ್‌ ಯೋಜನೆ (ಪಿಎಂಎಫ್‌ಎಫ್‌ಇ) ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆ (ಎಫ್‌ಪಿಒ), ಸಹಕಾರ ಸಂಘ, ಸ್ವಸಹಾಯ ಗುಂಪುಗಳಿಗೆ (ಎಸ್‌‌ಎಚ್‌ಜಿ) ನೆರವು ನೀಡಲಾಗುತ್ತದೆ. ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯ ಉತ್ಪನ್ನ ಆಯ್ಕೆ ಮಾಡಿಕೊಂಡು ಆಹಾರ ಪದಾರ್ಥ ತಯಾರಿಸಬಹುದು. ಸರ್ಕಾರ ಕಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತದೆ ಮತ್ತು ಸಬ್ಸಿಡಿ ನೀಡುತ್ತದೆ’ ಎಂದು ತಿಳಿಸಿದರು.

‘ರೈತರಿಗೆ ತರಬೇತಿ ನೀಡಲಾಗುತ್ತದೆ. ಉತ್ಪನ್ನಗಳ ಪ್ರಮಾಣೀಕರಣ, ಬ್ರಾಂಡಿಂಗ್‌, ಲೇಬಲಿಂಗ್‌, ಮಾರುಕಟ್ಟೆ ಕುರಿತಂತೆ ಮಾರ್ಗದರ್ಶನ ನೀಡಲಾಗುತ್ತದೆ. ಇದು ಸಾಮರ್ಥ್ಯ ನಿರ್ಮಾಣ ಕ್ರಿಯೆ. ಎರಡು ಲಕ್ಷ ಜನರು ಈ ಯೋಜನೆ ಪ್ರಯೋಜನ ಪಡೆದುಕೊಂಡಿದ್ದಾರೆ. 2025ರವರೆಗೆ ಯೋಜನೆ ಮುಂದುವರಿಯಲಿದೆ’ ಎಂದು ವಿವರಿಸಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಲ್‌. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವೆ ಜಯಲಕ್ಷ್ಮಿ ರಾಯಕೊಡ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಜಯಕುಮಾರ್‌, ಪಾರ್ವತಿ ಕುರ್ಲೆ, ಶ್ರೀನಿವಾಸ ಕೋಟ್ಯಾನ್‌, ಕೃಷಿ ಮೇಳದ ಅಧ್ಯಕ್ಷ ಎಸ್‌.ಎಸ್‌. ಅಂಗಡಿ, ಉಪಾಧ್ಯಕ್ಷ ಪ್ರೊ. ಬಿ.ಡಿ. ಬಿರಾದಾರ ಪಾಲ್ಗೊಂಡಿದ್ದರು.

ಕೃಷಿ ಮೇಳದಲ್ಲಿ ಸೋಮವಾರ ಪಾಲ್ಗೊಂಡಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರ
ಕೃಷಿ ಮೇಳದಲ್ಲಿ ಸೋಮವಾರ ಪಾಲ್ಗೊಂಡಿದ್ದ ಜನಸ್ತೋಮ ಪ್ರಜಾವಾಣಿ ಚಿತ್ರ
ಕೃಷಿ ಮೇಳದ ಮಳಿಗೆಯೊಂದರಲ್ಲಿ ರೈತರು ಯಂತ್ರೋಪಕಣ ಖರೀದಿಯಲ್ಲಿ ತೊಡಗಿರುವುದು ಪ್ರಜಾವಾಣಿ ಚಿತ್ರ
ಕೃಷಿ ಮೇಳದ ಮಳಿಗೆಯೊಂದರಲ್ಲಿ ರೈತರು ಯಂತ್ರೋಪಕಣ ಖರೀದಿಯಲ್ಲಿ ತೊಡಗಿರುವುದು ಪ್ರಜಾವಾಣಿ ಚಿತ್ರ
ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಜನರು ಎತ್ತುಗಳನ್ನು ವೀಕ್ಷಿಸುತ್ತಿರುವುದು ಪ್ರಜಾವಾಣಿ ಚಿತ್ರ
ಕೃಷಿ ಮೇಳದ ಜಾನುವಾರು ಪ್ರದರ್ಶನದಲ್ಲಿ ಜನರು ಎತ್ತುಗಳನ್ನು ವೀಕ್ಷಿಸುತ್ತಿರುವುದು ಪ್ರಜಾವಾಣಿ ಚಿತ್ರ
ಕೃಷಿ ಮೇಳದ ಮಳಿಗೆಯೊಂದರಲ್ಲಿ ರೈತರು ಕೃಷಿ ಉಪಕರಣ ವೀಕ್ಷಿಸುತ್ತಿರುವುದು
ಕೃಷಿ ಮೇಳದ ಮಳಿಗೆಯೊಂದರಲ್ಲಿ ರೈತರು ಕೃಷಿ ಉಪಕರಣ ವೀಕ್ಷಿಸುತ್ತಿರುವುದು
ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಗಳನ್ನು ವಾಣಿಜ್ಯೀಕರಣಗೊಳಿಸಿ ಅದನ್ನು ರೈತರಿಗೆ ತಲುಪಿಸಬೇಕು. ರೈತರ ಲಾಭ ದ್ವಿಗುಣವಾಗಬೇಕು
ರವಿಕುಮಾರ ಮಾಳಿಗೇರ ಸದಸ್ಯ ವ್ಯವಸ್ಥಾಪನಾ ಮಂಡಳಿ ಕೃಷಿ ವಿಶ್ವವಿದ್ಯಾಲಯ
‘ಉತ್ಪನ್ನದ ಮೌಲ್ಯವರ್ಧನೆಯೇ ದ್ವಿತೀಯ ಕೃಷಿ’
‘ಬೆಳೆ ಕಟಾವು ಮಾಡಿ ಒಕ್ಕಣೆ ಮಾಡಿ ಉತ್ಪನ್ನ ತಯಾರಿಸುವುದು ಪ್ರಥಮ ಕೃಷಿ ಉತ್ಪನ್ನದ ಮೌಲ್ಯವರ್ಧನೆ ದ್ವಿತೀಯ ಕೃಷಿ. ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡಿದರೆ ಕಡಿಮೆ ಆದಾಯ ಸಿಗುತ್ತದೆ. ಉತ್ಪನ್ನದ ಮೌಲ್ಯ ವರ್ಧನೆ ಮಾಡಿ ಮಾರಾಟ ಮಾಡಿದರೆ ಹೆಚ್ಚು ಆದಾಯ ಸಿಗುತ್ತದೆ’ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ. ಹನುಮಂತಪ್ಪ ತಿಳಿಸಿದರು. ‘ತರಕಾರಿ ಮತ್ತು ಹಣ್ಣುಗಳನ್ನು ಮೌಲ್ಯವರ್ಧನೆ ಮಾಡಬೇಕು. ಹಾಲು ಮಾರಾಟ ಮಾಡಿದರೆ ಲಾಭ ಕಡಿಮೆ. ಹಾಲಿನಿಂದ ತುಪ್ಪ ಫೇಡಾ ತಯಾರಿಸಿ ಮಾರಾಟ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು’ ಎಂದು ತಿಳಿಸಿದರು. ಮೌಲ್ಯವರ್ಧನೆಗೆ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕು. ನವೋದ್ಯಮ (ಸ್ಟಾರ್ಟ್‌ಅಪ್‌) ಯೋಜನೆ ಪ್ರಯೋಜನ ಪಡೆದುಕೊಳ್ಳಬೇಕು. ನಿಮ್ಮದೇ ಬ್ರ್ಯಾಂಡ್‌ ಸೃಷ್ಟಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ಮೇಳ; ಸಮಾರೋಪ ಇಂದು
ಸೆ. 24ರಂದು ಬೆಳಿಗ್ಗೆ 10.30ಕ್ಕೆ ಕೃಷಿ ಮೇಳದ ವೇದಿಕೆಯಲ್ಲಿ ‘ಎಣ್ಣೆಕಾಳು ಹಾಗೂ ದ್ವಿದಳ ಧಾನ್ಯ ಉತ್ಪಾದನೆ ಹೆಚ್ಚಿಸಲು ಅಗತ್ಯ ಕೃಷಿ ತಾಂತ್ರಿಕತೆಗಳು’ ಗೋಷ್ಠಿ 11.30ಕ್ಕೆ ಕನ್ನಡ ಕೃಷಿ ಗೋಷ್ಠಿ ಮಧ್ಯಾಹ್ನ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT