ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕೃಷ್ಣನ ಜನ್ಮಾಷ್ಟಮಿ l ಬೃಂದಾವನವಾಗಿಸಿದರು ಕೃಷ್ಣ ರಾಧೆಯರು

ವಿವಿಧೆಡೆ ಸಂಭ್ರಮದ ತೊಟ್ಟಿಲೋತ್ಸವ lಯುವಕರಲ್ಲಿ ಮೊಸರು ಗಡಿಗೆ ಒಡೆದ ಖುಷಿ
Last Updated 19 ಆಗಸ್ಟ್ 2022, 16:16 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧೋತಿ ಏರಿಸಿ, ವಲ್ಲಿ ಧರಿಸಿ, ಬರಿಮೈಲಿದ್ದರೂ ಕಿರೀಟ ತಲೆಗೇರಿಸಿದ ಮಕ್ಕಳು, ಮುದ್ದು ಕೃಷ್ಣನನ್ನು ಧರೆಗೆ ತಂದರು. ಹಣೆಮೇಲೆ ಕುಂಕುಮದೊಂದಿಗೆ ಹುಬ್ಬಿನುದ್ದಕ್ಕೂ ಸಿಂಗರಿಸಿಕೊಂಡು, ಬಿಂದಿಗೆ ಹಿಡಿದ ಮನೆಯ ಪುಟ್ತಾಯಿಯರೆಲ್ಲ ರಾಧೆಯರಾದರು. ಹುಬ್ಬಳ್ಳಿಯಲ್ಲಿ ಎಲ್ಲಿ ನೋಡಿದರಲ್ಲಿ ಈ ಪುಟ್ಟ ಬಾಲ–ಬಾಲೆಯರೆಲ್ಲ ರಾಧಾ ಕೃಷ್ಣನಾಗಿ ಬೃಂದಾವನ ಸೃಷ್ಟಿಸಿದರು.

ದೇವನ ಎತ್ತಿದ ಧನ್ಯಭಾವದಲ್ಲಿದ್ದ ಹೆತ್ತವರು, ಅವರ ಅಲಂಕಾರ ಹಾಳಾಗದಂತೆ, ದಣಿವಾಗದಂತೆ, ದೃಷ್ಟಿಯಾದೀತೋ ಎಂಬ ಆತಂಕವಿದ್ದರೂ, ಎಲ್ಲರ ಗಮನಸೆಳೆಯಲಿ ಎಂಬ ಆಸೆಯಿಂದ ಸಂಭ್ರಮದಲ್ಲಿದ್ದರು.

ಹುಬ್ಬಳ್ಳಿಯಲ್ಲಿ ಗೋಕುಲಾಷ್ಟಮಿ ಸಂಭ್ರಮ, ಸಡಗರ ಇಷ್ಟಕ್ಕೇ ಸೀಮಿತವಾಗಲಿಲ್ಲ. ಮನೆಯಲ್ಲಿ ಹಬ್ಬದಡುಗೆ ಮುಗಿಸಿ, ವಿವಿಧ ಬಗೆಯ ಸೀರೆಯನ್ನುಟ್ಟು ಕೋಲಾಡುತ್ತ, ಕೃಷ್ಣನನ್ನು ನೆನೆದ ಗೃಹಿಣಿಯರು ‘ಎಲ್ಲಕ್ಕೂ ಕೃಷ್ಣನೇ’ ಎಂದು ಅವನಿಗೆ ಮೊರೆ ಹೋದರು. ನವ ಯುವಕರು ತುಂಟ ಕೃಷ್ಣನನ್ನು ಆವಾಹಿಸಿಕೊಂಡಂತೆ ಮೊಸರು ಗಡಿಗೆ ಒಡೆಯಲು ಮಿನಾರು ಸೃಷ್ಟಿಸಿದರು.

ಬದುಕಿನ ಕಷ್ಟ ನಷ್ಟಗಳನ್ನು ನೆನಪಿಸುವಂತೆ ಸುತ್ತ ನೆರೆದಿರುವವರಲ್ಲಿ ಅವರ ಮೇಲೆ ನೀರನ್ನು ಉಗ್ಗುತ್ತಿದ್ದರೂ, ಉತ್ಸಾಹಕ್ಕೆ ಮೇರೆ ಎಲ್ಲಿ ಎಂಬಂತೆ ಮಿನಾರು ಹತ್ತಿ ಗಡಿಗೆ ಒಡೆದರು ಸೆಟ್ಲ್‌ಮೆಂಟ್‌ ಪ್ರದೇಶದ ಯುವಕರು.

ಮಕ್ಕಳನ್ನು ದೇವರಂತೆ ಕಾಣುವ ನಾವು, ವರ್ಷದಲ್ಲಿ ಒಂದೆರಡು ದಿನ ದೇವರನ್ನೇ ಶಿಶುವಾಗಿಸುತ್ತೇವೆ. ಹಾಗೆ ಕೃಷ್ಣನನ್ನು ಶಿಶುವಾಗಿಸಿ ದೇಶಪಾಂಡೆನಗರದ ರಾಧಾಕೃಷ್ಣಮಂದಿರ, ದೇಸಾಯಿ ಪಾರ್ಕ್‌ನ ಗೀತಾ ಮಂದಿರ, ಲ್ಯಾಮಿಂಗ್ಟನ್‌ ರಸ್ತೆಯ ಶ್ರೀಕೃಷ್ಣ ಶಿವಮಂದಿರದಲ್ಲಿ ತೊಟ್ಟಿಲಿಗೆ ಹಾಕಿ ತೂಗಲಾಯಿತು.

ಇನ್ನುಳಿದಂತೆ, ಜ‌ನ್ಮಾಷ್ಟಮಿ ಅಂಗವಾಗಿ ಕೇಶ್ವಾಪುರದ ದೇಸಾಯಿ ಪಾರ್ಕ್‌ನಲ್ಲಿರುವ ಗೀತಾ ಮಂದಿರದಲ್ಲಿ ಕೃಷ್ಣನಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು.

ಕೇಶ್ವಾಪುರದ ಬನಶಂಕರಿ ಬಡಾವಣೆಯಸೇವಾ ಸದನದಲ್ಲಿ ಕೃಷ್ಣ ಜನ್ಮಾಷ್ಟಮಿ ಅದ್ಧೂರಿಯಾಗಿ ಆಚರಿಸಲಾಯಿತು. ಸೇವಾಸದನದ ಮಕ್ಕಳು ನಡೆಸಿಕೊಟ್ಟ ಕೃಷ್ಣ ಜನ್ಮಾಷ್ಟಮಿ ಕೃಷ್ಣನ ರೂಪಕಗಳು ನೆರೆದಿದ್ದ ಜನಮನ ಸೂರೆಗೊಂಡವು. ಕೃಷ್ಣ ರಾಧೆಯರ ವೇಷವನ್ನು ಧರಿಸಿ ಕೃಷ್ಣನ ಹಾಡಿಗೆ ಕೋಲಾಟ ಹಾಗೂ ಭಜನೆಯೊಂದಿಗೆ ಬಡಾವಣೆ ಹಾಗೂ ಸುತ್ತಲಿನ ಮಹಿಳೆಯರು ಶೋಭಾಯಾತ್ರೆ ಮಾಡಿದ್ದು ವಿಶೇಷವಾಗಿತ್ತು.

ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷ ಶಿಲ್ಪಾ ಶೆಟ್ಟರ್, ಕಮಲಾ ಜೋಶಿ,‌‌ ಸವಿತಾ ಕರಮರಿ, ಮಂಜುಳಾ ಕೃಷ್ಣನ್, ಸೇವಾ ಸದನದ ರತ್ನಾ ಮಾತಾಜಿ, ರತ್ನವ್ವ, ವಿಜಯಲಕ್ಷ್ಮಿ ತಮ್ಮೋಲೆ ಇದ್ದರು.

ಹುಬ್ಬಳ್ಳಿ ನೇಕಾರನಗರ ವಿದ್ಯಾಚೇತನ್ ಪ್ರೀಸ್ಕೂಲ್, ಗೋಕುಲ ರಸ್ತೆಯ ಬಸವೇಶ್ವರ ನಗರದ ಡಿವೈನ್‌ ಕಿಡ್ಸ್‌ ಸ್ಕೂಲ್‌ನಲ್ಲಿ ಮಕ್ಕಳು ರಾಧಾಕೃಷ್ಣನ ವೇಷಗಳಲ್ಲಿ ಕಂಗೊಳಿಸಿದರು.

ಗೋಪಾಲನ ಭಕ್ತರು ಕೋವಿಡ್‌ ನೇಪಥ್ಯಕ್ಕೆ ಸರಿದಂತೆ ಜನ್ಮಾಷ್ಟಮಿ ಸಂಭ್ರಮದಲ್ಲಿ ಮಿಂದೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT