ಸೋಮವಾರ, ಏಪ್ರಿಲ್ 19, 2021
24 °C
ಧಾರವಾಡ ಜಿಲ್ಲೆ

ಕೃಷಿ ಹೊಂಡ ನಿರ್ಮಿಸಿಕೊಂಡ ರೈತರ ಅಲೆದಾಟ | ನೀರೂ ಇಲ್ಲ; ಸಹಾಯಧನವೂ ಇಲ್ಲ

ಬಸವರಾಜ ಹವಾಲ್ದಾರ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಬಹುತೇಕ ಕೃಷಿ ಪ್ರದೇಶ ಮಳೆಯನ್ನೇ ಅವಲಂಬಿಸಿದೆ. ನಾಲ್ಕು ವರ್ಷಗಳಿಂದ ಜಿಲ್ಲೆ ಸತತ ಬರಗಾಲಕ್ಕೀಡಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಕೃಷಿ ಹೊಂಡ ನಿರ್ಮಿಸಿಕೊಂಡಿಸಿದ್ದಾರೆ. ಈಗ ಹೊಂಡವೂ ಅವರನ್ನು ಸಂಕಷ್ಟಕ್ಕೆ ದೂಡಿದೆ.

ಮಳೆ ಬಂದರೆ ಹೊಂಡದಲ್ಲಿನ ನೀರಿ ನಿಂದ ಒಂದೆರಡು ಸಲ ನೀರು ಹಾಯಿಸಿಕೊಳ್ಳಬಹುದು. ಅಂತರ್ಜಲ ಹೆಚ್ಚಳಕ್ಕೂ ಅನುಕೂಲ ಆಗುತ್ತದೆ ಎಂದು ಸಾಲ ಮಾಡಿ ರೈತರು ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಆದರೆ, ಸಹಾಯಧನ ಬಾರದ್ದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 20180–19ನೇ ಸಾಲಿನಲ್ಲಿ 4,099 ಕೃಷಿ ಹೊಂಡಗಳು ನಿರ್ಮಾಣವಾಗಿವೆ. 2,111 ಕೃಷಿ ಹೊಂಡಗಳನ್ನು ನಿರ್ಮಿಸಿದ ರೈತರಿಗೆ ಇನ್ನೂ ಸಹಾಯಧನ ಸಿಕ್ಕಿಲ್ಲ.

ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 90 ಹಾಗೂ ಇತರರಿಗೆ ಶೇ 80 ರಷ್ಟು ಸಹಾಯಧನ ನೀಡಲಾಗುತ್ತದೆ. ಕೃಷಿ ಹೊಂಡದ ಸೈಜಿನ ಆಧಾರದ ಮೇಲೆ ಸಹಾಯಧನದ ಮೊತ್ತದಲ್ಲಿ ವ್ಯತ್ಯಾಸವಾಗುತ್ತದೆ. ಜಿಲ್ಲೆಯ ರೈತರಿಗೆ ಬರಬೇಕಾದ ₹14 ಕೋಟಿ ಮೊತ್ತ ಬಾಕಿ ಇದೆ.

ನವಲಗುಂದ, ಕುಂದಗೋಳ ಸೇರಿದಂತೆ ಜಿಲ್ಲೆಯ ಬಹುತೇಕ ಕೃಷಿ ಪ್ರದೇಶ ಕಪ್ಪು ಮಣ್ಣಿನಿಂದ ಕೂಡಿದೆ. ಹೆಸರು, ಕಡಲೆ, ಮೆಕ್ಕೆಜೋಳ, ಗೋಧಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಮಳೆ ಸ್ವಲ್ಪ ವಿಳಂಬವಾದರೆ, ಒಂದು ನೀರು ಹಾಯಿಸಿಕೊಳ್ಳಲು ಕೃಷಿ ಹೊಂಡಗಳು ನೆರವಾಗುತ್ತಿದ್ದವು.

ಕೃಷಿ ಹೊಂಡದ ನೀರನ್ನು ಬಳಸಿಕೊಳ್ಳಲು ರೈತರು ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಅದಕ್ಕೂ ಹೆಚ್ಚುವರಿಯಾಗಿ ಹಣ ತೊಡಗಿಸಿಕೊಂಡಿದ್ದಾರೆ. ಮಳೆ ಸರಿಯಾಗಿ ಬಾರದ್ದರಿಂದ ನವಲಗುಂದ ಸೇರಿದಂತೆ ವಿವಿಧೆಡೆ ಕೃಷಿ ಹೊಂಡಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಹೀಗಾಗಿ, ಅತ್ತ ಹೊಂಡಗಳೂ ಭರ್ತಿಯಾಗಿಲ್ಲ, ಇತ್ತ ಸಹಾಯಧನವೂ ಲಭಿಸಿಲ್ಲ.

‘ಕೃಷಿ ಹೊಂಡ ಇದ್ದರೆ ಅನುಕೂಲ ಆಗುತ್ತದೆ ಎಂದು ಆರು ತಿಂಗಳ ಹಿಂದೆ ತೊಡಿಸಿದ್ದೇವೆ. ಇನ್ನೂ ಸಹಾಯಧನ ಬಂದಿಲ್ಲ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು. ಯಾವಾಗ ಅನುದಾನ ಬಿಡುಗಡೆಯಾಗುವುದೋ ಗೊತ್ತಿಲ್ಲ. ಅನುದಾನ ಬಿಡುಗಡೆಯಾದರೆ ಬೀಜ, ರಸಗೊಬ್ಬರ ಖರ್ಚಿಗಾದರೂ ಆಗುತ್ತಿತ್ತು. ಈಗ ಅದಕ್ಕೂ ಸಾಲ ಮಾಡಬೇಕಾಗಿದೆ’ ಎಂದು ಹೆಸರು ಹೇಳಲು ಬಯಸದ ರೈತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

* ಸಹಾಯಧನ ಬಿಡುಗಡೆ ಫೈಲ್‌ ಹಣಕಾಸು ಇಲಾಖೆ ಮುಂದಿದೆ. ಶೀಘ್ರದಲ್ಲಿಯೇ ಸಹಾಯಧನ ಬಿಡುಗಡೆಯಾಗುವ ವಿಶ್ವಾಸವಿದೆ.

ಟಿ.ಎಸ್‌. ರುದ್ರೇಶಪ್ಪ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ

ಅಂಕಿ ಅಂಶ

* 10,374 2015 ರಿಂದ ಇಲ್ಲಿಯವರೆಗೆ ನಿರ್ಮಾಣವಾಗಿರುವ ಕೃಷಿ ಹೊಂಡಗಳು

* 3,576 ನವಲಗುಂದ ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ಹೊಂಡಗಳು

* 2,111 ರೈತರಿಗೆ ಇನ್ನೂ ಬಂದಿಲ್ಲ ಸಹಾಯಧನ

* ₹ 14 ಕೋಟಿ ರೈತರಿಗೆ ಬರಬೇಕಿರುವ ಬಾಕಿ ಮೊತ್ತ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು