‘ರಾಹುಲ್‌, ಮೋದಿ ಮನೆ ಕಾಯುತ್ತಿರುವ ಕುಮಾರಸ್ವಾಮಿ’

7

‘ರಾಹುಲ್‌, ಮೋದಿ ಮನೆ ಕಾಯುತ್ತಿರುವ ಕುಮಾರಸ್ವಾಮಿ’

Published:
Updated:

ದಾವಣಗೆರೆ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವುದು ಬಿಟ್ಟು ರಾಹುಲ್‌ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಮನೆ ಕಾಯುತ್ತಾ ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷೆ ಪವಿತ್ರಾ ರಾಮಯ್ಯ ಆರೋಪಿಸಿದರು.

ಮುಖ್ಯಮಂತ್ರಿಯಾಗಿ 24 ಗಂಟೆಗಳೊಳಗೆ ಎಲ್ಲಾ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ಬಹುಮತ ಬಾರದೇ ಇದ್ದರೆ ಯಾವ ಪಕ್ಷದ ಜತೆಗೂ ಹೊಂದಾಣಿಕೆ ಮಾಡಿಕೊಳ್ಳದೆ ವಿರೋಧ ಪಕ್ಷವಾಗಿ ಕೆಲಸ ಮಾಡುವುದಾಗಿಯೂ ತಿಳಿಸಿದ್ದರು.

ಆದರೆ, ಚುನಾವಣೆ ಫಲಿತಾಂಶ ಬಂದ ಕೂಡಲೇ ಎಲ್ಲಿ ಕುಳಿತು ಮಾತನಾಡಿದರೋ ಗೊತ್ತಿಲ್ಲ; ಮುಖ್ಯಮಂತ್ರಿಯಾಗಿಬಿಟ್ಟರು. 24 ಗಂಟೆಗಳ ಒಳಗೆ ಸಾಲಮನ್ನಾ ಮಾಡಲಿಲ್ಲ. ರೈತರ ಸಭೆ ಕರೆದು 15 ದಿನಗಳ ಅವಕಾಶ ಕೇಳಿದರು. ಆ ಅವಧಿಯೂ ಮುಗಿದು ಹೋಗಿದೆ. ಈಗ ಬಜೆಟ್‌ ಮಂಡನೆಯಾದ ಬಳಿಕ ತೀರ್ಮಾನ ಕೈಗೊಳ್ಳುವೆ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

ಪ್ರಧಾನ ಮಂತ್ರಿ ಯನ್ನು ಭೇಟಿ ಮಾಡಿ ಸಾಲ ಮನ್ನಾಕ್ಕೆ ನೆರವು ಕೇಳಿದ್ದಾರೆ. ಅವರು ನೆರವು ನೀಡಿಲ್ಲ ಎಂದರೆ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ರಾಜಕೀಯ ಮಾಡುತ್ತಾರೆ. ಮೋದಿ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿರುವುದು ಇದೇ ಉದ್ದೇಶಕ್ಕೆ ಎಂದು ಹೇಳಿದರು.

ಈ ಹಿಂದೆ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡದೇ ವಚನಭ್ರಷ್ಟರಾಗಿದ್ದರು. ಈಗ ರೈತರಿಗೆ ನೀಡಿದ ಭರವಸೆ ಈಡೇರಿಸದೇ ವಚನಭ್ರಷ್ಟರಾಗಲು ಹೊರಟಿದ್ದಾರೆ. ರೈತರನ್ನು ಎದುರು ಹಾಕಿಕೊಂಡು ಯಾರೂ ಬದುಕಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಎಚ್ಚರಿಸಿದರು.

ರಾಜ್ಯ ಕಾರ್ಯದರ್ಶಿ ಬ್ಯಾಟ ರಂಗೇಗೌಡ, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ರೈತ ಮೋರ್ಚಾದ 6 ತಂಡಗಳನ್ನು ರಚಿಸಿದ್ದು, ಪ್ರತಿ ತಂಡಕ್ಕೆ ಐದು ಜಿಲ್ಲೆಗಳ ಜವಾಬ್ದಾರಿ ನೀಡಿದ್ದಾರೆ. ಪವಿತ್ರಾ ರಾಮಯ್ಯ ನೇತೃತ್ವದಲ್ಲಿ ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಪ್ರವಾಸ ಮಾಡುತ್ತಿದ್ದೇವೆ’ ಎಂದರು.

‘ವಾಜಪೇಯಿ ಬಳಿಕ ರೈತ ಪರ ಕ್ರಾಂತಿಕಾರಿ ನಿಲುವು ತೆಗೆದುಕೊಂಡವರು ಮೋದಿ. ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ, ತುಂತುರು ನೀರಾವರಿ ಯೋಜನೆ, ಸಾವಯವ ಕೃಷಿ, ಉದ್ಯೋಗ ಖಾತ್ರಿ ಒಳಗೊಂಡಂತೆ ಹಲವು ಯೋಜನೆಗಳ ಮೂಲಕ ಕೇಂದ್ರ ಸರ್ಕಾರ ರೈತರ ನೆರವಿಗೆ ನಿಂತಿದೆ. ಆದರೆ, ಅದನ್ನು ಸರಿಯಾಗಿ ಅನುಷ್ಠಾನಗೊಳಿಸದೇ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ.

ಈ ಮಾಹಿತಿಯನ್ನು ರೈತರಿಗೆ ತಿಳಿಸಿ ಜಾಗೃತಗೊಳಿಸಲು ನಮ್ಮ ತಂಡ ಹೊರಟಿದೆ’ ಎಂದರು. ರೈತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಲಿಂಗಾಮೂರ್ತಿ, ಸದಸ್ಯರಾದ ಸ್ಮಿತಾ ನಾಯ್ಡು, ಸುಶ್ಮಾ ಚಂದ್ರಶೇಖರ್‌, ಜಿಲ್ಲಾ ಘಟಕದ ಅಧ್ಯಕ್ಷ ಶಾಂತರಾಜ ಪಾಟೀಲ್‌, ಕಾರ್ಯದರ್ಶಿ ವೆಂಕಟಗಿರಿ ನಾಯ್ಕ ಅವರೂ ಇದ್ದರು.

**

ಬಜೆಟ್‌ ಮಂಡನೆ ಬಳಿಕ ರೈತರ ಸಾಲ ಮನ್ನಾ ಮಾಡುವುದಾಗಿ ಸರ್ಕಾರ ತಿಳಿಸಿದೆ. ಅಲ್ಲಿಯವರೆಗೆ ನಾವು ಕಾಯುತ್ತೇವೆ. ಇಲ್ಲದಿದ್ದರೆ ಹೋರಾಟ ಆರಂಭಿಸುತ್ತೇವೆ.

–ಬ್ಯಾಟರಂಗೇಗೌಡ, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !