ಕಾವೇರಿದ ಕುಂದಗೋಳ ಚುನಾವಣಾ ಕಣ

ಶನಿವಾರ, ಮೇ 25, 2019
22 °C
ಕಾಂಗ್ರೆಸ್‌–ಬಿಜೆಪಿ ಜಿದ್ದಾಜಿದ್ದು; ಪ್ರಚಾರಕ್ಕೆ ನಾಯಕರ ದಂಡು

ಕಾವೇರಿದ ಕುಂದಗೋಳ ಚುನಾವಣಾ ಕಣ

Published:
Updated:
Prajavani

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರಕ್ಕೆ ಮೇ 19ರಂದು ನಡೆಯಲಿರುವ ಉಪಚುನಾವಣಾ ಕಣ ರಂಗೇರಿದೆ.

ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಮತ್ತು ಬಿಜೆಪಿಯ ಎಸ್‌.ಐ.ಚಿಕ್ಕನಗೌಡ್ರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಕ್ಷೇತ್ರದಲ್ಲಿ ಅನುಕಂಪದ ಅಲೆ ಇದ್ದರೂ ಸಹ ಮೈಮರೆಯದ ಕಾಂಗ್ರೆಸ್‌ ಭರ್ಜರಿ ಪ್ರಚಾರಕ್ಕೆ ಸಿದ್ಧತೆ ಮಾಡಿಕೊಂಡಿದೆ. ಮೈತ್ರಿ ಪಕ್ಷ ಜೆಡಿಎಸ್‌ ಸಾಥ್‌ ನೀಡಿರುವುದು ಕಾಂಗ್ರೆಸ್‌ನ ಬಲ ಹೆಚ್ಚಿಸಿದೆ.

ವರ್ಷದ ಹಿಂದೆ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಕೈತಪ್ಪಿ ಹೋಗಿರುವ ಕ್ಷೇತ್ರವನ್ನು ಹೇಗಾದರೂ ಮಾಡಿ ತನ್ನ ವಶಕ್ಕೆ ಮರಳಿ ಪಡೆಯಲು ಬಿಜೆಪಿ ಕೂಡ ರಣತಂತ್ರ ಹೆಣೆದಿದೆ.

ಈ ಸಂಬಂಧ ಮೂರು ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಕ್ಷೇತ್ರಕ್ಕೆ ದಾಂಗುಡಿ ಇಡಲು ಅಣಿಯಾಗಿದ್ದಾರೆ.

ಅಂಕಿ–ಸಂಖ್ಯೆಯ ಆಧಾರದ ಮೇಲೆ ನಡೆಯುತ್ತಿರುವ ರಾಜ್ಯ ಸಮ್ಮಿಶ್ರ ಸರ್ಕಾರದ ಅಳಿವು–ಉಳಿವಿನ ಮೇಲೆ ಉಪ ಚುನಾವಣೆ ಫಲಿತಾಂಶ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮೂರು ಪಕ್ಷಗಳು ಪ್ರತಿಷ್ಠೆಯಾಗಿ ಸ್ವೀಕರಿಸಿವೆ.

ಉಪ ಚುನಾವಣೆಯಲ್ಲಿ ಅಕ್ರಮಗಳು ನಡೆಯದಂತೆ ತಡೆಯಲು ಚುನಾವಣಾ ಆಯೋಗವೂ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಚೆಕ್‌ ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಗೊಳಿಸಿದೆ.

ಪ್ರಚಾರಕ್ಕೆ ಚಾಲನೆ ಇಂದು: ಮೇ.3ರಂದು ಸಂಜೆ 4ಕ್ಕೆ ಸಂಶಿಯಲ್ಲಿ ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್‌ ಅಧಿಕೃತ ಚಾಲನೆ ನೀಡಲಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಮತ್ತು ಸಚಿವರಾದ ಜಮೀರ್‌ ಅಹ್ಮದ್‌, ಸತೀಶ್‌ ಜಾರಕಿಹೊಳಿ, ಡಿ.ಕೆ.ಶಿವಕುಮಾರ್‌ ಪಾಲ್ಗೊಳ್ಳುತ್ತಿದ್ದಾರೆ.

ವಿದೇಶ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಏ.6ಕ್ಕೆ ಜಿಲ್ಲೆಗೆ ಬರಲಿದ್ದು, ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಧಾರವಾಡ ಗ್ರಾಮೀಣ ಘಟಕದ ಅಧ್ಯಕ್ಷ ಅನೀಲ್‌ ಕುಮಾರ್‌ ಪಾಟೀಲ ‘ಪ್ರಜಾವಾಣಿ’ ತಿಳಿಸಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರಚಾರಕ್ಕೆ ಆಗಮಿಸಲಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದರು.

ಬಿಜೆಪಿ ಸಿದ್ಧತಾ ಸಭೆ ಇಂದು: ಉಪ ಚುನಾವಣಾ ‍‍ಪ್ರಚಾರದ ಸಿದ್ಧತೆ ಸಂಬಂಧ ಮೇ.3ರಂದು ಬಿಜೆಪಿ ಪ್ರಮುಖರ ಸಭೆ ಕರೆಯಲಾಗಿದೆ. ವರಿಷ್ಠರು ಯಾವ ಸ್ಥಳಗಳಲ್ಲಿ ಯಾವಾಗ ಪ್ರಚಾರ ನಡೆಸಬೇಕು ಎಂಬುದರ ಕುರಿತು ಸಮಯ ನಿಗದಿ ಮಾಡಲಾಗುವುದು ಎಂದು ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಈರಣ್ಣ ಜಡಿ ತಿಳಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ ಮತ್ತಿತರರು ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !