ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಗೊಳ ಟಿಕೆಟ್‌: ಗುಟ್ಟ ಬಿಡದ ನಾಯಕರು

ಏ. 24ಕ್ಕೆ ಸ್ಥಳೀಯ ನಾಯಕರೊಂದಿಗೆ ಸಮಾಲೋಚನೆ; ಟಿಕೆಟ್‌ಗೆ ಕುಸಮಾ ಬೆಂಗಲಿಗರ ಆಗ್ರಹ
Last Updated 17 ಏಪ್ರಿಲ್ 2019, 13:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಟಿಕೆಟ್‌ ಬಗ್ಗೆ ಗುಟ್ಟು ಬಿಡದ ಕಾಂಗ್ರೆಸ್ ಮುಖಂಡರು, ಏ. 24ಕ್ಕೆ ಸ್ಥಳೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ, 25ಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸಲು ನಿರ್ಧರಿಸಿದ್ದಾರೆ. ಸದ್ಯ, ಲೋಕಸಭಾ ಚುನಾವಣೆಯ ಜತೆಗೆ, ಉಪ ಚುನಾವಣೆಯ ಪ್ರಚಾರವನ್ನು ಬಿರುಸುಗೊಳಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ನಿಧನದಿಂದಾಗಿ ತೆರವಾಗಿರುವ ಕ್ಷೇತ್ರಕ್ಕೆ ಮೇ 19ರಂದು ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಚರ್ಚಿಸಲು ಕಾಂಗ್ರೆಸ್‌ನ ಹಿರಿಯ ಮುಖಂಡ ವಿ.ಆರ್. ಸುದರ್ಶನ್, ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಹಾಗೂ ಮಹಾನಗರ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ಕುಂದಗೋಳದ ಕಾಂಗ್ರೆಸ್ ಮುಖಂಡರೊಂದಿಗೆ ಮಂಗಳವಾರ ಸಬೆ ಕರೆದಿದ್ದರು.

ಸಭೆಯಲ್ಲಿ ಶಿವಳ್ಳಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅವರ ರಾಜಕೀಯ ಜೀವನವನ್ನು ಮೆಲುಕು ಹಾಕಿದ ಸುದರ್ಶನ್, ‘ಸದ್ಯ ಲೋಕಸಭಾ ಚುನಾವಣೆ ಇರುವುದರಿಂದ ಏ. 23ರವರೆಗೆ ಈ ಸಂಬಂಧ ಯಾವುದೇ ಚರ್ಚೆ ನಡೆಸುವುದಿಲ್ಲ. ಚುನಾವಣೆ ಮುಗಿದ ಮಾರನೇ ದಿನವೇ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ, ಏ. 25ಕ್ಕೆ ಅಭ್ಯರ್ಥಿ ಹೆಸರು ಘೋಷಿಸಲಾಗುವುದು’ ಎಂದರು.

‘ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಸೇರಿದಂತೆ, ಇತರ ಆಕಾಂಕ್ಷಿಗಳ ಪಟ್ಟಿಯನ್ನು ಕೆಪಿಸಿಸಿಗೆ ಕಳುಹಿಸಲಾಗುವುದು. ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಯ್ಯ ಅವರು ಹೆಸರುಗಳನ್ನು ಪರಿಶೀಲಿಸಿ ಎಐಸಿಸಿಗೆ ಕಳುಹಿಸಲಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು, ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಿದ್ದಾರೆ’ ಎಂದು ಹೇಳಿದರು.

ಸಭೆಯಲ್ಲಿ ಕುಂದಗೋಳ ಕ್ಷೇತ್ರದ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ,ಪಿಎಲ್‌ಡಿ ಬ್ಯಾಂಕ್‌, ಎಪಿಎಂಸಿ, ಬೂತ್ ಸಮಿತಿಯಲ್ಲಿ ಪಕ್ಷದ ಪ್ರಾಬಲ್ಯದ ಬಗ್ಗೆ ಸುದರ್ಶನ್ ಮಾಹಿತಿ ಸಂಗ್ರಹಿಸಿದರು.

ಬಳಿಕ, ಕುಸಮಾ ಶಿವಳ್ಳಿ ಅವರ ಕುಶಲೋಪರಿ ವಿಚಾರಿಸಿದರು. ಈ ವೇಳೆ ಕುಸುಮಾ ಅವರಿಗೆ ಟಿಕೆಟ್ ನೀಡುವಂತೆ, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಂತಾ ಗುಜ್ಜಾಳ ಹಾಗೂ ಈರಮ್ಮ ಬಾರ್ಕೆರ ಸುದರ್ಶನ್ ಅವರಿಗೆ ಮನವಿ ಸಲ್ಲಿಸಿದರು.

ಅನುರಣಿಸಿದ ಜೈ ಶಿವಳ್ಳಿ:

ಸಭೆ ಆರಂಭವಾಗುತ್ತಿದ್ದಂತೆ ವಾಹನಗಳಲ್ಲಿ ಬಂದ ಕುಸಮಾ ಶಿವಳ್ಳಿ ಅವರ ಬೆಂಬಲಿಗರು, ‘ಜೈ ಜೈ ಶಿವಳ್ಳಿ’, ‘ಕುಸುಮಾಕ್ಕಾಗೆ ಟಿಕೆಟ್ ಬೇಕು’ ಎಂದು ಘೋಷಣೆ ಕೂಗಿದರು. ಸಭೆ ಮುಗಿಸಿ ಬಂದ ಕುಸುಮಾ ಅವರು, ಬೆಂಬಲಿಗರತ್ತ ಕೈ ಬೀಸುತ್ತಾ ಗದ್ಗದಿತರಾದರು.

ಕೆಪಿಸಿಸಿ ಕುಂದಗೋಳ ಉಸ್ತುವಾರಿ ನಾಗರಾಜ ನಿಟುವಳ್ಳಿ, ಕೆಪಿಸಿಸಿ ಪರಿಶಿಷ್ಟ ಪಂಗಡದ ಪ್ರಧಾನ ಕಾರ್ಯದರ್ಶಿ ಅಶೋಕ ಹಾಗೂ ಧಾರವಾಡ ಜಿಲ್ಲಾ ಇಂಟೆಕ್ ಅಧ್ಯಕ್ಷ ಬಂಗಾರೇಶ ಹಿರೇಮಠ ಇದ್ದರು.

ರೇಸ್‌ನಲ್ಲಿ ಸುರೇಶ, ಜುಟ್ಟಲ, ಶಿವಾನಂದ...

ಉಪ ಚುನಾವಣೆಯ ಟಿಕೆಟ್‌ಗಾಗಿ ಸುರೇಶ ಸವಣೂರ, ಶಿವಾನಂದ ಬೆಂತೂರ ಹಾಗೂ ಚಂದ್ರಶೇಖರ ಜುಟ್ಟಲ ಕೂಡ ವಿ.ಆರ್‌. ಸುದರ್ಶನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮೂವರ ಪೈಕಿ ಸುರೇಶ ಸವಣೂರ ಹೆಸರು ಹಿಂದಿನ ವಿಧಾನಸಭಾ ಚುನಾವಣೆಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಅಂತಿಮವಾಗಿ ಟಿಕೆಟ್ ಸಿ.ಎಸ್. ಶಿವಳ್ಳಿಗೆ ಪಾಲಾಗಿತ್ತು. ಶಿವಾನಂದ ಬೆಂತೂರ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಅವರ ಪತ್ನಿ ಜ್ಯೋತಿ ಬೆಂತೂರ ಗುಡಗೇರಿ ಜಿಲ್ಲಾ ಪಂಚಾಯ್ತಿ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದಾರೆ. ಇನ್ನು ಚಂದ್ರಶೇಖರ ಜುಟ್ಟಲ ಅವರು ಮಾಜಿ ಶಾಸಕ ಗೋವಿಂದಪ್ಪ ಜುಟ್ಟಲ ಅವರ ಪುತ್ರ.

ಸಭೆ ಮುಗಿಯುತ್ತಿದ್ದಂತೆ, ಶಿವಾನಂದ ಬೆಂತೂರ ಬೆಂಬಲಿಗರು ತಮ್ಮ ನಾಯಕನಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ, ಅವರ ಪರ ಜೈಕಾರ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT