ಗುರುವಾರ , ಸೆಪ್ಟೆಂಬರ್ 19, 2019
22 °C
ಶಿವಳ್ಳಿ ಹುಟ್ಟೂರು ಯರಗುಪ್ಪಿಯಲ್ಲಿ ಸಿದ್ದರಾಮಯ್ಯ ಪ್ರಚಾರ

ಕುಸುಮಾವತಿ ಗೆದ್ದರೆ, ಶಿವಳ್ಳಿ ಆತ್ಮಕ್ಕೆ ಶಾಂತಿ

Published:
Updated:
Prajavani

ಕುಂದಗೋಳ(ಹುಬ್ಬಳ್ಳಿ): ‘ಜನನಾಯಕನಾಗಿದ್ದ ಸಿ.ಎಸ್. ಶಿವಳ್ಳಿ ಆತ್ಮಕ್ಕೆ ಶಾಂತಿ ಸಿಗಬೇಕಾದರೆ, ಅವರ ಪತ್ನಿ ಕುಸುಮಾವತಿ ಶಿವಳ್ಳಿ ಅವರನ್ನು ಗೆಲ್ಲಿಸಬೇಕು’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಊರಾದ ಯರಗುಪ್ಪಿ ಹಾಗೂ ಹಿರೇನರ್ತಿಯಲ್ಲಿ ರೋಡ್ ಶೋ ಹಾಗೂ ‍ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿ ಒಳ್ಳೆಯವರು ಬೇಗ ಸಾಯ್ತಾರೆ. ರಾಜಕಾರಣಕ್ಕೆ ಬಂದವರೆಲ್ಲಾ ಜನಸೇವೆ ಮಾಡುವುದಿಲ್ಲ.‌ ಕೆಲವರು ಲೂಟಿ ಹೊಡೆಯಲು ಬರುತ್ತಾರೆ. ಆದರೆ, ಶಿವಳ್ಳಿಯ ಕೈ ಮತ್ತು ಬಾಯಿ ಎರಡೂ ಶುದ್ಧವಾಗಿತ್ತು’ ಎಂದು ಹೇಳಿದರು.

‘ಬಿಜೆಪಿಯವರು ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಹಾಗಾದರೆ, ಇವರ ಮುಖಕ್ಕೆ ಏನಾಗಿದೆ? ಕುಂದಗೋಳಕ್ಕೆ ಮೋದಿ ಬಂದು ಕೆಲಸ ಮಾಡ್ತಾರಾ. ಹೋಗಲಿ ಮೋದಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನೂ ಅವರು ಹೇಳುವುದಿಲ್ಲ. ಯಾಕೆಂದರೆ, ಅಭಿವೃದ್ಧಿ ಮಾಡಿದ್ದರೆ ತಾನೇ ಹೇಳೋದಿಕ್ಕೆ’ ಎಂದು ವ್ಯಂಗ್ಯವಾಡಿದರು.

ಶೋಭಾಕ್ಕ ಹೆಣ್ಣಲ್ಲವೇ?

ಕಾಂಗ್ರೆಸ್ ನಾಯಕಿ ಉಮಾಶ್ರೀ ಮಾತನಾಡಿ, ‘ಕುಸುಮಾವತಿ ಶಿವಳ್ಳಿಯ ಹೆಣ್ಣು. ಗೆದ್ದರೆ ಅವರೇನು ಕೆಲಸ ಮಾಡ್ತಾರೆ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಹಾಗಾದರೆ, ಆ ಪಕ್ಷದಲ್ಲಿರುವ ಶೋಭಾಕ್ಕ ಹೆಣ್ಣಲ್ಲವೆ? ನಾಯಕರ ನೆರವಿನಿಂದ ಹಂತ ಹಂತವಾಗಿ ಬೆಳೆಯಲಿಲ್ಲವೇ? ಕುಸುಮಾಕ್ಕ ಕೂಡ ಅದೇ ರೀತಿ ಬೆಳೆದು ಕೆಲಸ ಮಾಡುತ್ತಾರೆ. ಅವರ ಬೆನ್ನಿಗೆ ಇಡೀ ಸರ್ಕಾರವೇ ಇದೆ’ ಎಂದರು.

ಪ್ರಚಾರ ಸಭೆ ಮುಗಿದ ಬಳಿಕ ಜೆಡಿಎಸ್ ಮುಖಂಡ ಎಂ.ಎಸ್. ಅಕ್ಕಿ ಅವರ ಮನೆಗೆ ತೆರಳಿದ ಸಿದ್ದರಾಮಯ್ಯ, ಮುನಿಯಪ್ಪ ಹಾಗೂ ಮುಖಂಡರು ಅಲ್ಲೇ ರೊಟ್ಟಿ ಊಟ ಸವಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಅವರೊಂದಿಗೆ ಸೇರಿಕೊಂಡರು.

ಮುಖಂಡರಾದ ವಿನಯ ಕುಲಕರ್ಣಿ, ಐ.ಜಿ. ಸನದಿ, ವೀರಣ್ಣ ಮತ್ತೀಕಟ್ಟಿ, ಟಿ. ಈಶ್ವರ್, ಎಂ.ಎಸ್. ಅಕ್ಕಿ, ಶಿವಳ್ಳಿ ಸೋದರ ಅಡಿವೆಪ್ಪ ಶಿವಳ್ಳಿ, ಅಲ್ಕೊಡ್ ಹನುಮಂತಪ್ಪ, ಮಹೇಂದ್ರ ಸಿಂಘಿ ಹಾಗೂ ಮೋಹನ ಹಿರೇಮನಿ ಇದ್ದರು.

ಉಮಾಶ್ರೀ ಮಾತಿಗೆ ಜನ ಪಟ್ಟು

ಹಿರೇಗುಂಜಳ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ರೋಡ್‌ ಶೋನಲ್ಲಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡುವಾಗ ಗ್ರಾಮಸ್ಥರು, ಉಮಾಶ್ರೀ ಅವರು ಮಾತನಾಡಲಿ ಎಂದು ಕೂಗತೊಡಗಿದರು.

ಇದರಿಂದ ಸ್ವಲ್ಪ ಮುಜುಗರಕ್ಕೀಡಾದ ಸಿದ್ದರಾಮಯ್ಯ ವಾಹನದ ಹಿಂದೆ ಇದ್ದ ಉಮಾಶ್ರೀ ಅವರನ್ನು ಮುಂದಕ್ಕೆ ಕರೆಸಿಕೊಂಡು ಮಾತು ಮುಂದುವರಿಸಿದರು.

‘ತೀನ್ ದಿನ್‌ ಕಾ ಸುಲ್ತಾನ್’

‘ಹಸಿರು ಶಾಲು ಹೊದ್ದುಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪ ಒಮ್ಮೆ ಮೂರು ವರ್ಷ ಸಿ.ಎಂ ಆಗಿದ್ದರೆ, ಮತ್ತೊಮ್ಮೆ ಕೇವಲ ತೀನ್‌ ದಿನ್ ಕಾ ಸುಲ್ತಾನ್ ಆಗಿದ್ದರು. ಯಡಿಯೂರಪ್ಪ ಸೇರಿದಂತೆ, ಅವರ ಸರ್ಕಾರದಲ್ಲಿ 6 ಜನ ಜೈಲಿಗೆ ಹೋಗಿದ್ದರು. ಈ ಸತ್ಯವನ್ನು ಜನರ ಮುಂದೆ ಹೇಳುವ ನನ್ನನ್ನು ಕಂಡರೆ ಅವರಿಗೆ ಹೊಟ್ಟೆಕಿಚ್ಚು. ಇದ್ದದ್ದು ಇದ್ದಂಗೆ ಹೇಳಿದ್ರೆ ಎದ್‌ಬಂದು ಎದೆಗೆ ಒದ್ದಂಗೆ ಅನ್ನೊ ಗಾದೆ ರೀತಿ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.

‘ಚಪ್ಪಲಿ ಹಾಕಿದ್ದು 9ನೇ ಕ್ಲಾಸಲ್ಲಿ’

‘ನಾನು ಚಪ್ಪಲಿ ಹಾಕಿದ್ದು ಒಂಬತ್ತನೇ ತರಗತಿಯಲ್ಲಿ. ನಮ್ಮಪ್ಪ ಮೈಸೂರಿನಲ್ಲಿ ಒಂದು ಜೊತೆ ಟೈರ್ ಚಪ್ಪಲಿ ಹೋಲಿಸಿಕೊಟ್ಟಿದ್ದ. ಅದನ್ನು ಹಾಕಿಕೊಂಡಾಗೆಲ್ಲ ನಂಗೊಂಥಾರ ಖುಷಿಯಾಗುತ್ತಿತ್ತು. ಆಗ ಶ್ರೀಮಂತರು ಮಾತ್ರ ಚಪ್ಪಲಿ ಹಾಕುತ್ತಿದ್ದರು. ಹಾಗಾಗಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಮಕ್ಕಳ ಮನಸ್ಸಿನಲ್ಲಿ ಓದುವಾಗಲೇ ತಾವು ಬಡವರೆಂಬ ಮನೋಭಾವ ಬಾರದಿರಲಿ ಎಂದು ಉಚಿತವಾಗಿ ಶೂ, ಸಾಕ್ಸ್, ಸಮವಸ್ತ್ರ, ಬಸ್‌ ಪಾಸ್ ಹಾಗೂ ಅಪೌಷ್ಟಿಕತೆಯಿಂದ ಬಳಲಬಾರದೆಂದು ಹಾಲು ಮತ್ತು ಮೊಟ್ಟೆ ಕೊಟ್ಟೆ’ ಎಂದು ಸಿದ್ದರಾಮಯ್ಯ ಹೇಳಿದರು.

ಏನೇನ್‌ ಕೊಟ್ಟಾರ್ರಿ: ಉಮಾಶ್ರೀಗೆ ಬಾಲಕ ಪ್ರಶ್ನೆ!

ಕಾಂಗ್ರೆಸ್ ನಾಯಕಿ ಉಮಾಶ್ರೀ ಮಾತನಾಡುತ್ತಾ, ‘ಕಾಂಗ್ರೆಸ್ ನುಡಿದಂತೆ ನಡೆದ ಪಕ್ಷ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವಿದ್ದಾಗ ಅನೇಕ ಭಾಗ್ಯಗಳನ್ನು ರಾಜ್ಯದ ಜನರಿಗೆ ನೀಡಿದರು’ ಎಂದರು. ಆಗ ಸಭಿಕರ ಗುಂಪಿನಿಂದ ಬಾಲಕನೊಬ್ಬ ‘ಏನೇನ್‌ ಕೊಟ್ಟಾರ್ರಿ...?’ ಎಂದು ಪ್ರಶ್ನಿಸಿದ.

ಅದಕ್ಕೆ ಪ್ರತಿಕ್ರಿಯಿಸಿದ ಉಮಾಶ್ರೀ, ‘ಏ ಹುಡುಗ ನೀನಿನ್ನೂ ಚಿಕ್ಕವನಿದ್ದಿ. ನೀ ಶಾಲಿಗೆ ಹೋಗ್ತಿಯಾ ಇಲ್ಲೊ?’ ಎಂದು ಪ್ರಶ್ನಿಸಿದರು. ‘ಹೌದ್ರಿ’ ಎಂದಾಗ, ‘ನಿನಗೆ ಶಾಲೆಯಲ್ಲಿ ಉಚಿತವಾಗಿ ಶೂ, ಸಾಕ್ಸ್, ಸಮವಸ್ತ್ರ ಹಾಗೂ ಹಾಲು ಸಿಗುತ್ತಿದೆಯಲ್ಲಾ, ಅದನ್ನು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಇನ್ನೂ ಏನೇನೊ ಕೊಟ್ಟಿದ್ದಾರೆ. ದೊಡ್ಡವನಾದ ಮೇಲೆ ತಿಳಿದುಕೊ’ ಎಂದು ಹೇಳಿದರು.

Post Comments (+)