ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ಬವಣೆ, ಕಾರ್ಪೊರೇಟ್‌ಗೆ ಮಣೆ

ಮೇ ದಿನದ ಅಂಗವಾಗಿ ಆಯೋಜಿಸಿದ್ದ ಎಐಯುಟಿಯುಸಿ ಸಭೆಯಲ್ಲಿ ಕಾರ್ಮಿಕ ಮುಖಂಡರ ಆಕ್ರೋಶ
Last Updated 1 ಮೇ 2019, 12:31 IST
ಅಕ್ಷರ ಗಾತ್ರ

ಧಾರವಾಡ: ‘ದೇಶದ ಕಾರ್ಪೊರೇಟ್‌ ಮನೆತನಗಳಿಗೆ ತೆರಿಗೆ ವಿನಾಯ್ತಿ ನೀಡುವ ಸರ್ಕಾರ, ಕಾರ್ಮಿಕರ, ಜನಸಾಮಾನ್ಯರ ನಿತ್ಯದ ಬವಣೆಗಳಾದ ಬೆಲೆಏರಿಕೆ, ಶಿಕ್ಷಣ, ಆರೋಗ್ಯ, ನಿರುದ್ಯೋಗ ಸಮಸ್ಯೆ ಪರಿಹರಿಸಲು, ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳನ್ನು ಸ್ಥಾಪಿಸಲು ಹಣವಿಲ್ಲ ಎಂದೆನ್ನುತ್ತಿರುವುದು ವಿಪರ್ಯಾಸ’ ಎಂದು ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್ ಯೂನಿಯನ್‌ ಸೆಂಟರ್ (ಎಐಯುಟಿಯುಸಿ) ರಾಜ್ಯ ಉಪಾಧ್ಯಕ್ಷ ಕೆ.ವಿ.ಭಟ್‌ ಬೇಸರ ವ್ಯಕ್ತಪಡಿಸಿದರು.

ಅಂತರರಾಷ್ಟ್ರೀಯ ಕಾರ್ಮಿಕರ ದಿನದ ಅಂಗವಾಗಿ ಎಐಯುಟಿಯುಸಿ ವತಿಯಿಂದ ಬುಧವಾರ ಇಲ್ಲಿ ಹಮ್ಮಿಕೊಳ್ಳಲಾದ ಕಾರ್ಮಿಕರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಕಳೆದ ಹತ್ತು ವರ್ಷಗಳಲ್ಲಿ ಪ್ರಮುಖ ಉದ್ಯಮಿಗಳಿಗೆ ಸುಮಾರು ₹60ಲಕ್ಷ ಕೋಟಿ ತೆರಿಗೆ ವಿನಾಯ್ತಿಯನ್ನು ಸರ್ಕಾರಗಳು ನೀಡಿವೆ. ಆದರೆ ದೇಶದ ಜನಸಾಮಾನ್ಯರ ಬವಣೆ ನೀಗಿಸಲು ಹಣವಿಲ್ಲ ಎಂದು ಕೈಚೆಲ್ಲುತ್ತಿವೆ. ಮತ್ತೊಂದೆಡೆ 3.50ಲಕ್ಷ ಅನ್ನದಾತ ರೈತರು ತಾವು ಮಾಡಿಕೊಂಡ ಸಣ್ಣ ಸಾಲವನ್ನೂ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇವೆಲ್ಲದಕ್ಕೂ ಹಿಂದಿನ ಕಾಂಗ್ರೆಸ್‌ ಮತ್ತು ಈಗಿನ ಬಿಜೆಪಿ ನೇತೃತ್ವದ ಸರ್ಕಾರಗಳ ಆರ್ಥಿಕ ನೀತಿಗಳಲ್ಲಿ ಯಾವುದೇ ಮೂಲಭೂತ ವ್ಯತ್ಯಾಸಗಳು ಇಲ್ಲದಿರುವುದೇ ಕಾರಣ. ಈ ಸತ್ಯ ಕಾರ್ಮಿಕರು, ರೈತರು, ಜನಸಾಮಾನ್ಯರಿಗೂ ಈಗ ಅರ್ಥವಾಗುತ್ತಿದೆ’ ಎಂದರು.

‘ಕಾರ್ಮಿಕ ವರ್ಗವು ಅನೇಕ ತ್ಯಾಗ, ಬಲಿದಾನಗಳಿಂದ ಗಳಿಸಿಕೊಂಡಿದ್ದ ಮುಷ್ಕರದ ಹಕ್ಕು, ಕನಿಷ್ಠ ವೇತನ, ಖಾಯಂಗೊಳಿಸುವ ಮುಂತಾದ ಹಕ್ಕುಗಳನ್ನು ಕ್ರೂರವಾಗಿ ದಮನಗೊಳಿಸಲಾಗುತ್ತಿದೆ. ದುಡಿಮೆ ಅವಧಿ 12ರಿಂದ 14 ಗಂಟೆಗಳಿಗೆ ಏರಿಸಲಾಗುತ್ತಿದೆ. ಆಶಾ, ಅಕ್ಷರ ದಾಸೋಹ, ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಮಿಕರ ಸ್ಥಾನಮಾನ ನೀಡದೇ ಪುಡಿಗಾಸಿಗೆ ದುಡಿಸಿಕೊಳ್ಳಲಾಗುತ್ತಿದೆ. ಕಬ್ಬಿನಂತೆ ಕಾರ್ಮಿಕರ ಜೀವರಸ ಹಿಂಡಿ ನಿರ್ಜೀವಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜೀ ರಹಿತ ಹೋರಾಟವೊಂದೆ ದಾರಿ’ ಎಂದು ಅಭಿಪ್ರಾಯಪಟ್ಟರು.

ಎಸ್‌ಯುಸಿಐಸಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ‘ಹಿಂದೆ ಬ್ರಿಟಿಷರು ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ಕಾರ್ಮಿಕರ ಹೋರಾಟಗಳನ್ನು ಹತ್ತಿಕ್ಕಲು ಅಸ್ತ್ರವಾಗಿದ್ದ ಕೈಗಾರಿಕಾ ವಿವಾದಗಳ ಕಾಯ್ದೆಗಳನ್ನೇ ಇಂದಿಗೂ ಮುಂದುವರೆಸಲಾಗಿದೆ. ಅಷ್ಟೇ ಅಲ್ಲದೇ ಬಂಡವಾಳಶಾಹಿಗಳ ಪರವಾಗಿರುವ ಇಂದಿನ ಆಳುವ ಸರ್ಕಾರಗಳು ಈ ಕಾನೂನುಗಳನ್ನು ಇನ್ನಷ್ಟೂ ದಮನಕಾರಿಯಾಗಿ ಜಾರಿಗೊಳಿಸುತ್ತಿವೆ’ ಎಂದರು.

‘ಕಾರ್ಮಿಕರು ಹಾಗೂ ಜನಸಾಮಾನ್ಯರು ಈ ಕ್ರೂರ ಧನದಾಹಿ ವ್ಯವಸ್ಥೆಯನ್ನು ಕೊನೆಗಾಣಿಸಲು ಹಾಗೂ ಶೋಷಣೆ ಇಲ್ಲದ ಸಮಾಜವಾದಿ ಭಾರತವನ್ನು ನಿರ್ಮಾಣ ಮಾಡಲು, ಭಾರತದ ಕಾರ್ಮಿಕ ವರ್ಗವು ಅಂತರರಾಷ್ಟ್ರೀಯ ಕಾರ್ಮಿಕ ವರ್ಗದೊಂದಿಗೆ ಸೇರಿ ರಾಜೀರಹಿತ ಹೋರಾಟ ಕಟ್ಟಲು ಮುಂದಾಗಬೇಕು. ಅದಕ್ಕೆ ತ್ಯಾಗ ಬಲಿದಾನಗಳ ಪ್ರತೀಕವಾದ ಮೇ ದಿನ ಸ್ಫೂರ್ತಿಯಾಗಲಿ’ ಎಂದರು.

ಈ ಸಭೆಯ ಅಧ್ಯಕ್ಷತೆಯನ್ನು ಎಐಯುಟಿಯುಸಿ ಸಂಚಾಲಕರಾದ ಗಂಗಾಧರ ಬಡಿಗೇರ ವಹಿಸಿದ್ದರು. ಜಿಲ್ಲಾ ಸಂಘಟನಾಕಾರರಾದ ಭುವನಾ, ನಿಂಗಮ್ಮ ಹುಡೇದ್, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ‍್ಯಕರ್ತೆಯರ ಸಂಘದ ದಾವಲಬಿ ಗೈಬುನವರ, ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ಲಕ್ಷ್ಮೀ ಶಿರಗುಪ್ಪಿ, ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಯಕರ್ತೆಯರ ಸಂಘದ ಮುಕ್ತುಂಬಿ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಕಲಾಭವನದಿಂದ ಕಾರ್ಮಿಕರ ಮೆರವಣಿಗೆ ಜರುಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT