ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಗ್ರಹಣ| ಮೂಲಸೌಕರ್ಯ ನಿರೀಕ್ಷೆಯಲ್ಲಿ ಅಣ್ಣಿಗೇರಿ

ಎರಡು ವರ್ಷವಾದರೂ ಆರಂಭವಾದ ಕಚೇರಿಗಳು
Last Updated 30 ಜೂನ್ 2019, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ 7ನೇ ತಾಲ್ಲೂಕು ಆಗಿಎರಡು ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಅಣ್ಣಿಗೇರಿಗೆ ಇಂದಿಗೂ ತಾಲ್ಲೂಕಿನ ಕಳೆ ಬಂದಿಲ್ಲ. ಅನುದಾನ ಹಾಗೂ ಮೂಲಸೌಕರ್ಯದ ಕೊರತೆಯಿಂದಾಗಿ, ಹೊಸ ತಾಲ್ಲೂಕಿನ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ.

ಆಸ್ಪತ್ರೆ, ತಾಲ್ಲೂಕು ಪಂಚಾಯ್ತಿ, ನ್ಯಾಯಾಲಯ, ಲೋಕೋಪಯೋಗಿ ಇಲಾಖೆ, ವಿದ್ಯಾರ್ಥಿಗಳ ಹಾಸ್ಟೆಲ್‌, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಸೇರಿದಂತೆ 22 ಇಲಾಖೆಗಳ ಕಚೇರಿಗಳು ಇಲ್ಲಿ ಆರಂಭವಾಗಿಲ್ಲ.

ಸದ್ಯ ತಾಲ್ಲೂಕು ಮಟ್ಟದ ಕಚೇರಿಗಳಾಗಿ ಸದ್ಯ ಅಣ್ಣಿಗೇರಿಯಲ್ಲಿರುವುದು ತಹಶೀಲ್ದಾರ್ ಕಚೇರಿ, ಉಪ ನೋಂದಣಾಧಿಕಾರಿ, ಎಪಿಎಂಸಿ, ಅಗ್ನಿಶಾಮಕ ದಳ ಹಾಗೂ ಪುರಸಭೆ ಮಾತ್ರ. ಈ ಪೈಕಿ, ಬಾಡಿಗೆ ಕಟ್ಟಡದಲ್ಲಿರುವ ತಹಶೀಲ್ದಾರ್ ಕಚೇರಿ ಹೊರತುಪಡಿಸಿದರೆ ಉಳಿದೆಲ್ಲವೂ ಮುಂಚೆಯೇ ಇದ್ದವು. ಹಾಗಾಗಿ, ನವಲಗುಂದ ತಾಲ್ಲೂಕಿನ ಅಧಿಕಾರಿಗಳೇ ಇಲ್ಲಿ ಪ್ರಭಾರಗಳಾಗಿದ್ದಾರೆ.

ಅಣ್ಣಿಗೇರಿಗೆ ಇದುವರೆಗೆ ಸಿಕ್ಕ ಅನುದಾನ ಕೇವಲ ₹10 ಲಕ್ಷ. ಆರಂಭದಲ್ಲೇ ಬಿಡುಗಡೆಯಾದ ಈ ಮೊತ್ತ ತಹಶೀಲ್ದಾರ್ ಕಚೇರಿ ಸ್ಥಾಪನೆಗೆ ಬೇಕಾದ ಪಿಠೋಪಕರಣ, ಕಂಪ್ಯೂಟರ್, ಕಚೇರಿ ಸಾಮಾಗ್ರಿ ಹಾಗೂ ಬಾಡಿಗೆ ಕಟ್ಟಡದ ಮುಂಗಡ ಪಾವತಿಗೆ ಸರಿ ಹೋಯಿತು. ಉಳಿದಂತೆ, ರಾಜ್ಯ ಸರ್ಕಾರದಿಂದ ಬಿಡಿಗಾಸು ಅನುದಾನವೂ ಬಂದಿಲ್ಲ.

ಸಿಗದ ಜಾಗ, ಬಾಡಿಗೆ ಕಟ್ಟಡ:‘ಅಣ್ಣಿಗೇರಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಾಗಿ ಸರ್ಕಾರಿ ಜಾಗ ಹಾಗೂ ಬಾಡಿಗೆ ಕಟ್ಟಡಗಳಿಗಾಗಿ ಹುಡುಕಾಟ ನಡೆದಿದೆ. ಆದರೆ, ಹೋಬಳಿಯಾಗಿದ್ದ ಈ ಊರಿನಲ್ಲಿ ಕಚೇರಿಗಳ ಕಟ್ಟಡ ನಿರ್ಮಾಣಕ್ಕೆ ಸರ್ಕಾರಿ ಭೂಮಿ ಸಿಗುತ್ತಿಲ್ಲ. ಜತೆಗೆ, ಬಾಡಿಗೆಗೆ ಸೂಕ್ತ ಖಾಸಗಿ ಕಟ್ಟಡಗಳೂ ಇಲ್ಲ’ ಎಂದು ತಹಶೀಲ್ದಾರ್ ನವೀನ್ ಹುಲ್ಲೂರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಜಾಗ ಮತ್ತು ಕಟ್ಟಡಗಳ ಕೊರತೆಯಿಂದಾಗಿ ಪಟ್ಟಣದ ಹೊರವಲಯದಲ್ಲಿರುವ ವೆಂಕಟೇಶ್ವರ ಕೋ ಆಪರೇಟಿವ್‌ ಟೆಕ್ಸ್‌ಟೈಲ್‌ ಮಿಲ್‌ನ ಹಳೇ ಕಟ್ಟಡವನ್ನು ಬಾಡಿಗೆಗೆ ಪಡೆದು, ನವೀಕರಿಸಿಕೊಂಡು ತಹಶೀಲ್ದಾರ್ ಕಚೇರಿ ಆರಂಭಿಸಲಾಗಿದೆ. ಇದರ ಮಧ್ಯೆಯೇ ನ್ಯಾಯಾಲಯ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸ್ಥಾಪನೆಗೆ ಆಯಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇತ್ತೀಚೆಗೆ ಜಾಗ ಮತ್ತು ಬಾಡಿಗೆ ಕಟ್ಟಡಕ್ಕೆ ಹುಡುಕಾಟ ನಡೆಸಿದ್ದಾರೆ’ ಎಂದು ತಿಳಿಸಿದರು.

ಇಚ್ಛಾಶಕ್ತಿ ಕೊರತೆ:‘ಮೂವತ್ತು ವರ್ಷಗಳ ಶ್ರಮದ ಫಲವಾಗಿ ಅಣ್ಣಿಗೇರಿ ತಾಲ್ಲೂಕಾಗಿದೆ. ನಮ್ಮ ಬೇಡಿಕೆಗೆ ಸ್ಪಂದಿಸಿದ ಹಿಂದಿನ ಸರ್ಕಾರ, ಹೊಸ ತಾಲ್ಲೂಕು ಘೋಷಣೆಗೆ ತೋರಿದ ಆಸಕ್ತಿಯನ್ನು ಅಭಿವೃದ್ಧಿ ವಿಷಯದಲ್ಲಿ ಇಚ್ಛಾಶಕ್ತಿ ತೋರಲಿಲ್ಲ’ ಎಂದು ಅಣ್ಣಿಗೇರಿ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ರಾಜ್ಯ ತಾಲ್ಲೂಕು ಹೋರಾಟ ಸಮಿತಿ ಕಾರ್ಯಾಧ್ಯಕ್ಷರೂ ಆಗಿರುವ ಷಣ್ಮುಖ ಗುರಿಕಾರ ಬೇಸರ ವ್ಯಕ್ತಪಡಿಸಿದರು.

‘ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಹೊಸ ತಾಲ್ಲೂಕುಗಳ ಅಭಿವೃದ್ಧಿ ಇರಲಿ, ಕನಿಷ್ಠ ಮೂಲಸೌಕರ್ಯ ಒದಗಿಸಲು ಇಚ್ಛಾಶಕ್ತಿ ತೋರಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೂಳು ತಿನ್ನುತ್ತಿರುವ ವರದಿ
ಅಣ್ಣಿಗೇರಿಯ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಸೈದಾಪುರ ಕ್ರಾಸ್‌ ಬಳಿ ಇರುವ, ಸರ್ಕಾರಿ ಒಡೆತನದ 7 ಎಕರೆ 25 ಗುಂಟೆ ಜಾಗವಿದೆ. ಇಲ್ಲಿ ಮಿನಿ ವಿಧಾನಸೌಧದ ಸಂಕೀರ್ಣ ನಿರ್ಮಿಸಿ, ಹಲವು ಇಲಾಖೆಗಳ ಕಚೇರಿಗಳನ್ನು ಒಂದೇ ಕಡೆ ಆರಂಭಿಸುವ ಕುರಿತು ಇಲ್ಲಿನ ತಹಶೀಲ್ದಾರ್ ಸರ್ಕಾರಕ್ಕೆ ಕಳಿಸಿರುವ ವರದಿ ದೂಳು ತಿನ್ನುತ್ತಿದೆ. ತಾಲ್ಲೂಕು ಘೋಷಣೆಯಾಗಿ ಎರಡು ವರ್ಷವಾದರೂ ಸಂಬಂಧಪಟ್ಟವರು ಆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಪಿಡಬ್ಲ್ಯೂಡಿ ಆಕ್ಷೇಪ:‘ಸದ್ಯ ಗುರುತಿಸಿರುವ ಸರ್ಕಾರಿ ಭೂಮಿಯನ್ನು ಕೆಲ ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆಗೆ ನೀಡಲಾಗಿತ್ತು. ಅಲ್ಲಿ ತಾಲ್ಲೂಕಿನ ಮಿನಿ ವಿಧಾನಸೌಧ ಸಂಕೀರ್ಣ ನಿರ್ಮಿಸಲು ವರದಿಯನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿಗೆ ನೀಡಲಾಗಿತ್ತು. ಆದರೆ, ಇದಕ್ಕೆ ಪಿಡಬ್ಲ್ಯೂಡಿಯವರೇ ಆಕ್ಷೇಪ ಎತ್ತಿದ್ದಾರೆ. ಜಾಗವನ್ನು ಬಿಟ್ಟು ಕೊಡಲು ನಿರಾಕರಿಸುತ್ತಿದ್ದಾರೆ’ ಎಂದು ತಹಶೀಲ್ದಾರ್ ನವೀನ ಹುಲ್ಲೂರ ಹೇಳಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ನವಲಗುಂದದ ಲೋಕೊಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮನಗೂಳಿ ಅವರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.

ಅಂಕಿ ಅಂಶ
72 ಸಾವಿರ:ಅಣ್ಣಿಗೇರಿ ತಾಲ್ಲೂಕಿನ ಜನಸಂಖ್ಯೆ
21:ಒಟ್ಟು ಗ್ರಾಮಗಳು
11:ಗ್ರಾಮ ಪಂಚಾಯ್ತಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT