ಶುಕ್ರವಾರ, ಫೆಬ್ರವರಿ 21, 2020
18 °C

ಹುಬ್ಬಳ್ಳಿ–ಧಾರವಾಡ ಮೆಟ್ರೊ: ಕೆರೆ ಪರಿಸರ ಜೀವವೈವಿಧ್ಯಕ್ಕೆ ಮಾರಕ!

ಆರ್‌. ಮಂಜುನಾಥ್‌ Updated:

ಅಕ್ಷರ ಗಾತ್ರ : | |

Prajavani

ಊರು ಕಟ್ಟುವ ಮುನ್ನ ಕೆರೆ ಕಟ್ಟು... ಎಂಬುದು ಪೂರ್ವಜರ ಮಾತು. ಕೆರೆ ಬದುಕಿನ ಬೆನ್ನೆಲುಬು. ಮನುಷ್ಯನಿಗೆ ಕುಡಿಯಲು, ಗೃಹ ಬಳಕೆಗೆ ಬೇಕಾದ ನೀರು ಲಭ್ಯವಾಗುತ್ತಿದ್ದದ್ದೇ ಕೆರೆಗಳಿಂದ. ಅಷ್ಟೇ ಅಲ್ಲ, ಕೃಷಿ, ಪ್ರಾಣಿ–ಪಕ್ಷಿ, ಗಿಡ–ಮರಗಳಿಗೆ ಈ ನೀರೇ ಆಧಾರ. ಜೀವವೈವಿಧ್ಯಕ್ಕೆ ಅಮೃತದ ಪಾತ್ರೆ ಕೆರೆ. ಆದರೆ ಇಂದು ಆ ಅಮೃತದ ಪಾತ್ರೆಗೆ ವಿಷದ ತೊಟ್ಟು ನಿಧಾನಗತಿಯಲ್ಲಿ ಬೀಳುತ್ತಿದ್ದು, ಜೀವಸಂಕುಲಕ್ಕೆ ಮಾರಕವಾಗುತ್ತಿದೆ.

ಹುಬ್ಬಳ್ಳಿ–ಧಾರವಾಡದ ಕೆರೆಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜೀವವೈವಿಧ್ಯತೆ ಇದೆ. ಕೀಟಗಳು ಹಾಗೂ ಸರೀಸೃಪಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಉಣಕಲ್‌ ಹಾಗೂ ಕೆಲಗೇರಿ ಕೆರೆಗಳಲ್ಲಿ ಸಾಕಷ್ಟು ರೀತಿಯ ಗಿಡಮೂಲಿಕೆ, ಪೊದೆಸಸ್ಯಗಳಿವೆ. ಈ ಎರಡು ಕೆರೆಗಳಲ್ಲಿ ಅತಿಹೆಚ್ಚು ಜೀವವೈವಿಧ್ಯತೆ ಇದೆ. ಹೊಸಕಟ್ಟಿ ಕೆರೆ, ಸಾಧನಕೆರೆ, ತೋಳನಕೆರೆ ಮತ್ತು ನವಲೂರು ಕೆರೆಗಳಲ್ಲೂ ಜೀವವೈವಿಧ್ಯಕ್ಕೆಕೊರತೆ ಇಲ್ಲ. ಲಕುಮನಹಳ್ಳಿ ಕೆರೆ ಅತಿ ಕಡಿಮೆ ಜೀವವೈವಿಧ್ಯತೆ ಹೊಂದಿದೆ. ಜೀವವೈವಿಧ್ಯತೆ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಲೇ ಬಂದಿವೆ. ಇವುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ, ಅವುಗಳ ಸಂಖ್ಯೆ ಹೆಚ್ಚಿಸಬೇಕೆಂದರೆ, ಕೆರೆಗೆ ಹರಿಯುತ್ತಿರುವ ಒಳಚರಂಡಿ ನೀರು, ತ್ಯಾಜ್ಯ ಹಲವು ರೀತಿಯ ಮಾಲಿನ್ಯವನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಕೆರೆ ಅಂಗಳದ ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಎಂಪ್ರಿ ತನ್ನ ಅಧ್ಯಯನ ವರದಿಯಲ್ಲಿ ಅಭಿಪ್ರಾಯಪಟ್ಟಿದೆ.

ಎಲ್ಲಿವೆ ಲಕ್ಷಾಂತರ ಗಿಡಗಳು?
ಹುಬ್ಬಳ್ಳಿ–ಧಾರವಾಡದಲ್ಲಿ ಪ್ರತಿ ವರ್ಷ ಪರಿಸರ ದಿನದ ಸಂದರ್ಭದಲ್ಲಿ ಲಕ್ಷಾಂತರ ಸಸಿಗಳನ್ನು ನೆಡಸಲಾಗುತ್ತದೆ ಎಂದು ಜಿಲ್ಲಾಡಳಿತ, ಪಾಲಿಕೆ, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ, ಬಿಆರ್‌ಟಿಎಸ್‌ನವರು ಸೇರಿದಂತೆ ಖಾಸಗಿ ಸಂಸ್ಥೆ, ಸಂಘಗಳು ಹೇಳಿಕೆ ನೀಡುತ್ತಾರೆ. ಅವೆಲ್ಲ ಎಲ್ಲಿವೆ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಇದಕ್ಕೆ ಕೈಗನ್ನಡಿ ಎಂದರೆ, ಹುಬ್ಬಳ್ಳಿ–ಧಾರವಾಡದ ಪ್ರಮುಖ 19 ಕೆರೆಗಳಲ್ಲಿರುವ ಗಿಡ–ಮರಗಳ ಸಂಖ್ಯೆ. ಈ 19 ಕೆರೆಗಳಲ್ಲಿರುವುದು 4,054 ಕೆರೆಗಳು ಮಾತ್ರ. 

ಪರಿಸರ ರಕ್ಷಣೆ ಎಂದ ಕೂಡಲೇ ಸಸಿ ನೆಡುವುದು ಎಂಬುದೇ ಸಾಕಷ್ಟು ಮಂದಿಯ ಭಾವನೆ ಹಾಗೂ ಅವರ ಕಾರ್ಯಾಚರಣೆ. ಅಷ್ಟಾಗಿದ್ದರೂ ನಮ್ಮ ಪ್ರಮುಖ ಕೆರೆಗಳ ಸುತ್ತ ಇರುವ ಗಿಡಗಳ ಸಂಖ್ಯೆ ಕೆಲವೇ ಸಾವಿರ. ಕೆರೆ ಅಂಗಳ ಹಾಗೂ ಸಮೀಪ ಸಸಿಗಳನ್ನು ನೆಟ್ಟರೆ ಅಲ್ಲಿನ ತೇವಾಂಶದಿಂದ ಗಿಡಗಳು ಬೆಳೆಯುತ್ತವೆ. ಇಲ್ಲ, ನಾವು ಕೆರೆಗಳ ಬಳಿ ನೆಟ್ಟಿಲ್ಲ ಎಂದಾದರೆ, ಬೇರೆಲ್ಲಿ ಕಾಣುವವು ಲಕ್ಷಾಂತರ ಗಿಡ–ಮರ ಎಂಬುದೂ ಇಲ್ಲಿನ ಪ್ರಶ್ನೆ. ಮುಂದಿನ ಪರಿಸರ ದಿನದಲ್ಲಾದರೂ ನಮ್ಮ ಕೆರೆ ಅಂಗಳ ನೆನಪಾಗಲಿ ಎಂಬುದೇ ಆಶಯ.

ಮನಃಸ್ಥಿತಿ ಬದಲಾಗಬೇಕು
ಒಂದು ಅಧ್ಯಯನದ ಪ್ರಕಾರ, ಇನ್ನು ಆರು ವರ್ಷಗಳ ನಂತರ ಧಾರವಾಡ ಜಿಲ್ಲೆಯ ಜನರಿಗೆ ಕುಡಿಯುವ ನೀರು ಸಿಗದಂತಹ ಪರಿಸ್ಥಿತಿ ಎದುರಾಗುತ್ತದೆ. ಅವಿಭಜಿತ ಧಾರವಾಡದಲ್ಲಿ 1891 ಕೆರೆಗಳಿದ್ದವು. ಧಾರವಾಡ–ಹುಬ್ಬಳ್ಳಿಯಲ್ಲೇ 1181 ಬಾವಿಗಳಿದ್ದವು. ಇಂದು ಕೆರೆಗಳನ್ನು ಮುಚ್ಚಿ ಬಿಲ್ಡಿಂಗ್‌ಗಳನ್ನಾಗಿ ಮಾಡಿದ್ದಾರೆ. ನಮ್ಮಲ್ಲಿರುವ ಜಲಮೂಲಗಳನ್ನು ರಕ್ಷಿಸಿಕೊಳ್ಳದಿದ್ದರೆ ನಾವು ನಾಗರಿಕರು ಎಂದು ಹೇಳಿಕೊಳ್ಳಲೂ ಬೇಜಾರಾಗುತ್ತದೆ. ಪಶ್ಚಿಮ ಘಟ್ಟದಲ್ಲಿ ಈಗಾಗಲೇ ಅರಣ್ಯದ ಪ್ರಮಾಣ ಕಡಿಮೆ ಆಗುತ್ತಿದೆ. ಇದರಿಂದ ಮಳೆ ಕೂಡ ಕಡಿಮೆಯಾಗುತ್ತಿದೆ. ಹುಬ್ಬಳ್ಳಿ–ಧಾರವಾಡದಲ್ಲಿ 1200 ಅಡಿ ಆಳದಲ್ಲೂ ನೀರು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಜಲಮೂಲಗಳನ್ನು ಉಳಿಸಿಕೊಳ್ಳದೆ ‘ಸ್ಮಾರ್ಟ್‌ ಸಿಟಿ’ ಮಾಡುತ್ತೇವೆ ಎಂದರೆ ಬಹಳ ತಪ್ಪಾಗುತ್ತದೆ. ಗಟಾರುಗಳಿಂದಲೇ ನಮ್ಮ ಕೆರೆಗಳು ಮಾಲಿನ್ಯಗೊಂಡಿವೆ. ರಸ್ತೆ ಮತ್ತು ಗಟಾರುಗಳ ವಿನ್ಯಾಸದಿಂದ ಸಾಕಷ್ಟು ತೊಂದರೆಯುಂಟಾಗಿದೆ. ನಮ್ಮಲ್ಲಿರುವ ಜಲಮೂಲಗಳು, ಗಿಡ–ಮರಗಳು, ಪ್ರಾಣಿ–ಪಕ್ಷಿಗಳು ಯಾವುದನ್ನು ಬಯಸುತ್ತವೋ ಅದನ್ನು ನಾವು ಮಾಡಿಕೊಳ್ಳಬೇಕು. ಬಿದ್ದ ಮಳೆಯನ್ನು ಇಂಗಿಸದಿದ್ದರೆ ಯಾರೂ ಉಳಿಯುವುದಿಲ್ಲ. ನಮ್ಮ ಮಾಲಿನ್ಯ ನಿಯಂತ್ರಣ ಮಂಡಳಿಯೇ ಕೆರೆಗಳಲ್ಲಿರುವ ನೀರು ಕುಡಿಯಲು ಯೋಗ್ಯವೇ ಅಲ್ಲ ಎಂದು ಹೇಳಿದೆ.

ಇದು ನಾಗರಿಕತೆಯ ಲಕ್ಷಣವೇ? ರೈತರೇ ಮೂಲವಾಗಿರುವ ದೇಶದಲ್ಲಿ ನೀರು ಪ್ರಮುಖವಾಗುತ್ತದೆ. ಅನ್ನಕ್ಕೂ ನೀರು ಬೇಕು. ಪ್ರಾಣಿ ಪಕ್ಷಿಗಳು ಹುಟ್ಟಿಹಾಕಿದ ಕಾಡನ್ನು ನಾವು ನಾಶ ಮಾಡಿ, ನಮ್ಮದ್ದಷ್ಟೇ ಅಲ್ಲ ಅವುಗಳ ಜೀವವನ್ನು ತೆಗೆಯುತ್ತಿದ್ದೇವೆ. ಪಕ್ಷಿಗಳ ಶೇ 48ರಷ್ಟು ಪ್ರಭೇದಗಳೇ ಅವನತಿಯಾಗಿವೆ. ಕಾಡುಪ್ರಾಣಿಗಳ ಸಂಖ್ಯೆಯಲ್ಲಿ ಶೇ 83ರಷ್ಟು ನಶಿಸಿಹೋಗುತ್ತಿದೆ. ಈ ಮೂಲಕ ಮಾನವ ಬದುಕಲಾರದಂತಹ ಸ್ಥಿತಿಯನ್ನು ನಾವೇ ತಂದುಕೊಂಡಿದ್ದೇವೆ. ಅದಕ್ಕೇ ಹೇಳೋದು, ‘ಬರಗಾಲ ಬಂದಿದ್ದಲ್ಲ; ನಾವು ತಂದುಕೊಂಡಿದ್ದು’ ಎಂದು. ಕೆರೆಗಳ ರಕ್ಷಣೆಯಲ್ಲಿ ರಾಜಕೀಯ ಇಚ್ಛಾಶಕ್ತಿ ಅತ್ಯಂತ ಅವಶ್ಯ. ಇಲ್ಲಿ ಫಂಡ್‌ ಇಲ್ಲ ಎಂಬುದು ಸಮಸ್ಯೆ ಇಲ್ಲ. ಹಲವು ಸಂಘ–ಸಂಸ್ಥೆಗಳನ್ನು ಬಳಸಿಕೊಂಡರೆ ಎಲ್ಲವೂ ಸಾಧ್ಯ. ನಮ್ಮ ರಾಜಕಾರಣಿಗಳ ಮನಃಸ್ಥಿತಿ ಬದಲಾದರೆ ಮಾತ್ರ ಎಲ್ಲ ಜಲಮೂಲಗಳು ಉಳಿಯುತ್ತವೆ. ನಾಗರಿಕರೂ ಕೈಜೋಡಿಸಿ, ಕೆಲಸ ಮಾಡುವಂತೆ ಮಾಡಬೇಕು. ವಿದ್ಯಾರ್ಥಿಗಳು ಈ ದಿಸೆಯಲ್ಲಿ ಹೋರಾಟ ಆರಂಭಿಸಬೇಕು.
-ಪಂಚಾಕ್ಷರಿ ವಿ. ಹಿರೇಮಠ, ಅಧ್ಯಕ್ಷ, ನೇಚರ್‌ ಫಸ್ಟ್ ಇಕೊ ವಿಲೇಜ್‌

***
ಕೆರೆ ರಕ್ಷಣೆಗೆ ಪ್ರತಿಜ್ಞೆ ಮಾಡಬೇಕು
ಹುಬ್ಬಳ್ಳಿ, ಧಾರವಾಡದಲ್ಲಿ ನೂರಾರು ಕೆರೆಗಳಿದ್ದವು. ಸಾಕಷ್ಟು ಬಡಾವಣೆಗಳು ನಿರ್ಮಾಣವಾಗಿ, ಆರ್‌ಸಿಸಿ ಕಟ್ಟಡಗಳು ಬಂದು, ತ್ಯಾಜ್ಯ, ಕೊಳಚೆ ಹರಿವಿಕೆಯಿಂದ ಕೆರೆಗಳು ನಶಿಸಿಹೋಗುತ್ತಿವೆ. ಇದರಿಂದ ಅಂತರ್ಜಲ ಮಟ್ಟ ಕಡಿಮೆ ಆಗುತ್ತಾ ಹೋಗುತ್ತಿದೆ. ಪ್ರಾಣಿ–ಪಕ್ಷಿಗಳಿಗೆ ನೀರು ಸಿಗದಂತಾಗುತ್ತಿವೆ. ನಾವು ಮಲಪ್ರಭ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿದ್ದೇವೆ. ಆದರೆ, ನಾವು ನಮ್ಮೆಲ್ಲ ಕೆರೆಗಳನ್ನು ಉಳಿಸಿಕೊಂಡರೆ ಮಲಪ್ರಭ ಬೇಕಾಗುವುದಿಲ್ಲ. ಇಲ್ಲಿನ ಜಲಸಂಪತ್ತನ್ನು ಉಳಿಸಿಕೊಂಡರೆ ನಾವೆಲ್ಲ ನೆಮ್ಮದಿಯಿಂದ ಇರಬಹುದು. ಕೆರೆಗಳನ್ನು ಉಳಿಸಿಕೊಳ್ಳಬೇಕಾದರೆ ಜನರು ಮುಂದಾಗಬೇಕು, ರಾಜಕಾರಣಿಗಳು ಮನಸ್ಸು ಮಾಡಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಾಲಿಕೆಯವರು ಕೆರೆ ಉಳಿಸಲು ಸಾಕಷ್ಟು ಪ್ರಾಮುಖ್ಯ ನೀಡಬೇಕು. ಕುಂದಗೋಳಕ್ಕೆ ದುಮ್ಮವಾಡ ಕೆರೆಯಿಂದ ನೀರು ಹೋಗುತ್ತಿದೆ. ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರ ಕೆರೆಗಳನ್ನು ಪುನಶ್ಚೇತನಗೊಳಿಸುವುದು ಅಗತ್ಯ.

ಹೂಳು ತೆಗೆಸಿ, ಸ್ವಚ್ಛಗೊಳಿಸಿ ಹೆಚ್ಚಿನ ನೀರು ಸಂಗ್ರಹ ಮಾಡುವ ಕೆಲವನ್ನು ಮಾಡಬೇಕು. ಹಿಂದೆ ಕೆರೆಗಳ ನೀರನ್ನು ಕುಡಿಯುತ್ತಿದ್ದೆವು. ಇಂದು ಅವೆಲ್ಲ ಕೊಳಚೆ ಆಗಿಬಿಟ್ಟಿವೆ. ಅದಕ್ಕೆ ನಾವೇ ಕಾರಣ. ಸುತ್ತಮುತ್ತಲು ಕಟ್ಟಡ, ಮನೆ ಕಟ್ಟಿಕೊಂಡು ಕೊಳಚೆಯನ್ನು ಕೆರೆಗೇ ಬಿಡುತ್ತಿದ್ದೇವೆ.

ದ.ರಾ. ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ ಸೇರಿದಂತೆ ಹಲವಾರು ಕವಿಗಳು ಧಾರವಾಡ ಪ್ರಾಕೃತಿಕ ಸೌಂದರ್ಯದಿಂದಲೇ ಸ್ಫೂರ್ತಿಗೊಂಡಿದ್ದರು. ಧಾರವಾಡದಲ್ಲಿ ಆಗ ಮೂರು–ನಾಲ್ಕು ತಿಂಗಳು ಸತತವಾಗಿ ಮಳೆ ಬರುತ್ತಿತ್ತು. ಇಂದು ವರ್ಷಪೂರ್ತಿ ಆಗಾಗ ಮಳೆ ಆಗುತ್ತದೆ ಅಷ್ಟೇ. ಇದಕ್ಕೆ ಕಾರಣ ಕಾಡು, ಗಿಡ–ಮರಗಳ ನಾಶ. ಇದನ್ನು ಯಾರೂ ಕೇಳೋರೇ ಇಲ್ಲ. ಪುನಃ ಮಳೆ ತರಬೇಕಾದರೆ ಪರಿಸರ ಉಳಿಸಬೇಕು. ರಾಜಕಾರಣಿಗಳು, ಅಧಿಕಾರಿಗಳು, ನಾಗರಿಕರೂ ಎಲ್ಲರೂ ಕೈಜೋಡಿಸಿ, ಕೆರೆಗಳ ರಕ್ಷಣೆಗೆ ಪ್ರತಿಜ್ಞೆ ಮಾಡಿ, ಕೆಲಸ ಮಾಡಬೇಕು.
-ಶಂಕರ ಕುಂಬಿ, ಅಧ್ಯಕ್ಷ, ಹುಬ್ಬಳ್ಳಿ–ಧಾರವಾಡ ನಾಗರಿಕ ಪರಿಸರ ಸಮಿತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು