ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಮಳೆ ಆದ್ರೆ ಜಾರಿ ಬೀಳೋದಿಲ್ಲಿ ಮಾಮೂಲು

ಒಳಚರಂಡಿ, ಡಾಂಬರ್ ರಸ್ತೆಯಿಂದಲೂ ವಂಚಿತರಾದ ಮಹಾಲಕ್ಷ್ಮಿ ಬಡಾವಣೆಯ ಜನ
Last Updated 7 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಶಾಲ ರಸ್ತೆಯಲ್ಲಿ ಕೆಸರಿನದ್ದೇ ಕಾರುಬಾರು. ಒಳಚರಂಡಿಯೂ ಇಲ್ಲ. ಮಳೆ ನೀರು, ಮನೆಗಳ ಬಳಕೆ ನೀರು ರಸ್ತೆ ಆವರಿಸುತ್ತದೆ. ಮನೆಯಿಂದ ಹೊರಗೆ ಕಾಲಿಡಲೂ ಸಾವಿರ ಸಲ ಯೋಚಿಸಬೇಕಾದ ಸ್ಥಿತಿ. ತುಂತುರು ಮಳೆಯಾದರೂ ಸಾಕು, ಜನ ಜಾರಿ ಬೀಳುವುದು ಇಲ್ಲಿ ಮಾಮೂಲು...

ಇದು ಗೋಪನಕೊಪ್ಪದಲ್ಲಿರುವ ಎಪಿಎಂಸಿ ರಸ್ತೆಗೆ ಹೊಂದಿಕೊಂಡಿರುವ ಮಹಾಲಕ್ಷ್ಮಿ ಬಡಾವಣೆಯ ದುಃಸ್ಥಿತಿ. ಹಲವು ವರ್ಷಗಳ ಹಿಂದೆಯೇ ಈ ಪ್ರದೇಶ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿದೆ. 12–15 ವರ್ಷಗಳಿಂದಲೂ ಜನ ಮನೆಕಟ್ಟಿಕೊಂಡು ನೆಲೆಸಿದ್ದಾರೆ. ಸೌಲಭ್ಯಗಳು ಮಾತ್ರ ಸಿಕ್ಕಿಲ್ಲ.

‘ಬಡಾವಣೆಯಲ್ಲಿ 500ಕ್ಕೂ ಹೆಚ್ಚು ಮನೆಗಳಿವೆ. ಹತ್ತು ವರ್ಷಗಳಿಂದ ಪಾಲಿಕೆಗೆ ತೆರಿಗೆ ಕಟ್ಟುತ್ತಿದ್ದೇವೆ. ನೀರು, ವಿದ್ಯುತ್‌ ಸಿಕ್ಕಿದೆಯಾದರೂ, ರಸ್ತೆ, ಒಳಚರಂಡಿ ಇನ್ನೂ ಆಗಿಲ್ಲ. ಹಲವು ಮುಖಂಡರಿಗೆ ಹತ್ತಾರು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರಿಗೆ ಮನವಿ ಸಲ್ಲಿಸಿದ್ದೇವೆ’ ಎಂದು ಬಡಾವಣೆಯ ನಿವಾಸಿ ಕೊಟ್ರೇಶ್ ಹುಳ್ಳಿ ಹೇಳಿದರು.

‘ಬಡಾವಣೆಯ ನಿವಾಸಿಗಳಲ್ಲಿ ಬಹುತೇಕರು ಬಡವರು. ಮನೆಯಲ್ಲಿ ಶೌಚಾಲಯ ಇದ್ದರೂ, ಬಳಸದಂಥ ಸನ್ನಿವೇಶವಿದೆ. ಒಳಚರಂಡಿ ನಿರ್ಮಾಣಗೊಳ್ಳದ ಹೊರತು ಸಮಸ್ಯೆ ಬಗೆಹರಿಯದು’ ಎನ್ನುತ್ತಾರೆ ಅವರು.

ಜಾರಿ ಬೀಳೋದು ಮಾಮೂಲು: ಮಳೆಯಾದರೆ ಸಾಕು ಈ ಪ್ರದೇಶದಲ್ಲಿ ಜಾರಿ ಬೀಳುವುದು ಮಾಮೂಲು. ಎಷ್ಟೇ ಮುತುವರ್ಜಿ ವಹಿಸಿದರೂ ದಿನಕ್ಕೆ ಒಬ್ಬಿಬ್ಬರು ಬಿದ್ದೇ ಬೀಳುತ್ತಾರೆ. ಕೆಸರಿನಲ್ಲಿ ಹತ್ತಡಿ ಹೋಗಲೂ ಸರ್ಕಸ್‌ ಮಾಡಬೇಕು. ಕಳೆದ ವಾರ ಬಿದ್ದ ಕಾರಣ, ಈ ತನಕ ಕೆಲಸಕ್ಕೂ ಹೋಗಲು ಸಾಧ್ಯವಾಗಿಲ್ಲ’ ಎಂದು ಐಶ್ವರ್ಯ ಸಂಶಿ ನೋವು ತೋಡಿಕೊಂಡರು.‌

‘ಬಡಾವಣೆಯಲ್ಲಿ ಒಂದಿಷ್ಟು ಜನ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೆ, ಒಳಚರಂಡಿ ಮಾತ್ರ ಆಗಿಲ್ಲ. ಹೀಗಾಗಿ ಶೌಚಾಲಯದ ನೀರು ರಸ್ತೆಗುಂಟ ಹರಿದು, ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು 15 ವರ್ಷಗಳಿಂದ ನೆಲೆಸಿರುವ ಶಾರದಾ ತಳವಾರ ಅಸಮಾಧಾನ ವ್ಯಕ್ತಪಡಿಸಿದರು.

‘ಬಡಾವಣೆಯ ಮುಖ್ಯರಸ್ತೆ 30 ಅಡಿಯಷ್ಟು ದೊಡ್ಡದಾಗಿದೆ. ಆದರೆ, ಗಾಡಿಗಳು ಬಂದರೆ, ಚಕ್ರ ಸಿಕ್ಕಿ ಹಾಕಿಕೊಳ್ಳುತ್ತದೆ. ಅನಾರೋಗ್ಯದಿಂದ ಸಾಯುತ್ತಿದ್ದೇವೆ ಎಂದರೂ, ನೂರಾರು ರೂಪಾಯಿ ಕೊಡುತ್ತೇವೆ ಎಂದರೂ ಆಟೊಗಳು ಈ ರಸ್ತೆಯಲ್ಲಿ ಬರಲ್ಲ’ ಎಂದು ಬೇಸರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT