ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ನದಿಗೆ ಲಕ್ಷ ಕ್ಯುಸೆಕ್‌ ನೀರು: ಹಂಪಿ ಸ್ಮಾರಕಗಳು ಜಲಾವೃತ

Last Updated 22 ಸೆಪ್ಟೆಂಬರ್ 2020, 2:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಳ್ಳಾರಿ, ಬೆಳಗಾವಿ, ಧಾರವಾಡ, ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ಹೊಸಪೇಟೆ ಬಳಿಯ ಹಂಪಿಯಲ್ಲಿ ಸ್ಮಾರಕಗಳು ಜಲಾವೃತವಾಗಿವೆ.

ತುಂಗಭದ್ರಾ ಜಲಾಶಯದಿಂದ ಸೋಮವಾರ ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ನದಿಗೆ ಹರಿಸುತ್ತಿರುವುದರಿಂದ ಹಂಪಿಯ ಪುರಂದರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ ಸ್ಮಾರಕ, ಸ್ನಾನಘಟ್ಟ, ಚಕ್ರತೀರ್ಥ ಸಂಪೂರ್ಣ ಮುಳುಗಡೆಯಾಗಿವೆ. ರಾಮ–ಲಕ್ಷ್ಮಣ ದೇವಸ್ಥಾನದ ಆವರಣದೊಳಕ್ಕೆ ನೀರು ನುಗ್ಗಿವೆ. ಆಗಸ್ಟ್‌ನಲ್ಲೂ ಸ್ಮಾರಕಗಳು ಮುಳುಗಿದ್ದವು.

ಕಂಪ್ಲಿ–ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಗೆ ಸಮನಾಗಿ ನೀರು ಹರಿಯುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಕಲ್ಯಾಣ ಕರ್ನಾಟಕದ ಅನೇಕ ಊರುಗಳ ಜತೆಗಿನ ಸಂಪರ್ಕ ಕಡಿದು ಹೋಗಿದೆ.

1,633 ಅಡಿ ನೀರು ಸಂಗ್ರಹ ಸಾಮರ್ಥ್ಯದ ಅಣೆಕಟ್ಟೆ ಸಂಪೂರ್ಣ ತುಂಬಿದೆ. ತುಂಗಾ ಜಲಾಶಯದಿಂದ 63,000 ಕ್ಯುಸೆಕ್‌, ಭದ್ರಾದಿಂದ 50,000 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿರುವುದರಿಂದ ಒಳಹರಿವು ಹೆಚ್ಚಾಗಿದೆ. 33 ಕ್ರಸ್ಟ್‌ಗೇಟ್‌ಗಳ ಪೈಕಿ 30 ಗೇಟ್‌ ತೆರೆದು 1,06,000 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ.

ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ತಡರಾತ್ರಿ ಧಾರಾಕಾರ ಮಳೆ ಸುರಿಯಿತು. ತಾಳಿಕೋಟೆ– ಹಡಗಿನಾಳ ಸಂಪರ್ಕ ಸೇತುವೆ ಡೋಣಿ ನದಿಯ ಪ್ರವಾಹದಲ್ಲಿ ಮುಳುಗಿದ ಪರಿಣಾಮ ಸಂಚಾರ ಸ್ಥಗಿತವಾಗಿತ್ತು.

ಉತ್ತರ ಕನ್ನಡ ಜಿಲ್ಲೆಯಹೊನ್ನಾವರ ತಾಲ್ಲೂಕಿನ ಮದಗೇರಿ ಮತ್ತು ಕೆಕ್ಕಾರ ಗ್ರಾಮಗಳಲ್ಲಿ ಎರಡು ಮನೆಗಳ ಮೇಲೆ ತೆಂಗಿನ ಮರಗಳು ಬಿದ್ದಿವೆ. ಆರೊಳ್ಳಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದಿದೆ. ಮುಂಡಗೋಡದ ಅಗಡಿ ಹಾಗೂ ಯರೇಬೈಲ್ ಗ್ರಾಮಗಳಲ್ಲಿ ಎರಡು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ.

ಪ್ರಕ್ಷುಬ್ಧ ಸಮುದ್ರದಿಂದಾಗಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ ಆಶ್ರಯ ಪಡೆದಿದ್ದ ಮಲ್ಪೆಯ ‘ಪ್ರಾವಿಡೆನ್ಸ್’ ಹೆಸರಿನ ಮೀನುಗಾರಿಕಾ ದೋಣಿಯ ಲಂಗರು ತುಂಡಾಗಿ ದಡಕ್ಕೆ ಬಂದಿದೆ. ಅದೇ ರೀತಿ ಅಲಿಗದ್ದಾದಲ್ಲಿ ಮತ್ತೊಂದು ದೋಣಿ ಕೂಡ ಮರಳಿನಲ್ಲಿ ಸಿಲುಕಿಕೊಂಡಿತ್ತು. ಮೀನುಗಾರರು ಹರಸಾಹಸ ಪಟ್ಟು ಅವುಗಳನ್ನು ಮರಳಿ ಸಮುದ್ರಕ್ಕೆ ಸೇರಿಸಿದರು. ಪಾತಿ ದೋಣಿಗಳೂ ದಡಕ್ಕೆ ಬಂದು ಬಿದ್ದಿವೆ.

ಅಲೆಗಳ ಅಬ್ಬರಕ್ಕೆ ಸಿಲುಕಿದ ಮಲ್ಪೆಯ ‘ಭ್ರಾಮರಿ’ ಹೆಸರಿನ ದೋಣಿಯು ಕಾರವಾರ ಸಮೀಪ ಭಾನುವಾರ ಮುಳುಗಿದೆ. ಜಾಹ್ನವಿ ಕೋಟ್ಯಾನ್ ಎಂಬುವವರಿಗೆ ಈ ದೋಣಿ ಸೇರಿದೆ. ಅದರಲ್ಲಿದ್ದ ಭಟ್ಕಳ ಮತ್ತು ಉಡುಪಿಯ ಏಳು ಮಂದಿ ಮೀನುಗಾರರು ಸಮೀಪದಲ್ಲಿದ್ದ ಮೀನುಗಾರಿಕಾ ದೋಣಿಗಳನ್ನು ಏರಿ ದಡ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT