ಸೋಮವಾರ, ನವೆಂಬರ್ 18, 2019
27 °C
ಕುಟುಂಬದವರ ಆರೋಪ

ವಿಚಾರಣೆ ನೆಪದಲ್ಲಿ ಪೊಲೀಸರಿಂದ ಹಲ್ಲೆ: ಚಿಕಿತ್ಸೆಗೆ ಸ್ಪಂದಿಸದೆ ಇಂದರಗಿ ಸಾವು

Published:
Updated:
Prajavani

ಹುಬ್ಬಳ್ಳಿ: ವಿಚಾರಣೆ ನೆಪದಲ್ಲಿ ಶಹರ ಠಾಣೆ ಪೊಲೀಸರಿಂದ ಹಲ್ಲೆಗೊಳಗಾದ ಆರೋಪದ ಮೇಲೆ, ಕಿಮ್ಸ್‌ಗೆ ದಾಖಲಾಗಿದ್ದ ಹುಬ್ಬಳ್ಳಿಯ ಶಾಂತಿನಿಕೇತನ ಕಾಲೊನಿಯ ಲಕ್ಷ್ಮಣ ಇಂದರಗಿ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಹಲ್ಲೆ ಖಂಡಿಸಿ, ಬುಧವಾರವಷ್ಟೇ ಲಕ್ಷ್ಮಣ ಅವರ ಸಂಬಂಧಿಕರು ಇಲ್ಲಿನ ಕಿಮ್ಸ್ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದ್ದರು.

ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಗಣೇಶಪೇಟೆ ಬಳಿ ನಡೆದ ಹಲ್ಲೆ ಪ್ರಕರಣದಲ್ಲಿ, ಲಕ್ಷ್ಮಣ ಇಂದರಗಿ ಅವರ ಮೂವರು ಮಕ್ಕಳು ಆರೋಪಿಗಳಾಗಿದ್ದರು. ಈ ಪೈಕಿ, ಪ್ರಕಾಶ ಮನೋಜ ಹಾಗೂ ಭರತ ಇಂದರಗಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು. ಕಡೆಯ ಪುತ್ರ ಭರತ ಇಂದರಗಿ ತಲೆಮರೆಸಿಕೊಂಡಿದ್ದಾನೆ.

‘ಅಣ್ಣ ತಲೆ ಮರೆಸಿಕೊಂಡಿರುವ ಸಂಬಂಧ, ವಿಚಾರಣೆಗೆಂದು ತಂದೆ ಲಕ್ಷ್ಮಣ ಅವರನ್ನು ಅಕ್ಟೋಬರ್ ಮೊದಲ ವಾರದಲ್ಲಿ ಕರೆದೊಯ್ದ ಪೊಲೀಸರು, ಠಾಣೆಯಲ್ಲೇ 5 ದಿನ ಇಟ್ಟುಕೊಂಡು ಹಲ್ಲೆ ನಡೆಸಿದ್ದರು. ಬಳಿಕ, ಅವರನ್ನೂ ಜೈಲಿಗೆ ಕಳಿಸಿದ್ದರು. ಹಲ್ಲೆಯಿಂದ ಗಾಯಗೊಂಡಿದ್ದ ಅವರು, ಹತ್ತು ದಿನದ ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು’ ಎಂದು ಲಕ್ಷ್ಮಣ ಇಂದರಗಿ ಅವರ ಪುತ್ರಿ ಪೂಜಾ ಇಂದರಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೊಲೀಸರ ಹಲ್ಲೆಯಿಂದಾಗಿ ನಡೆಯಲಾಗದ ಸ್ಥಿತಿಗೆ ತಲುಪಿದ್ದ ಅಪ್ಪ, ಹಾಸಿಗೆ ಹಿಡಿದಿದ್ದರು. ಬಳಿಕ, ಸ್ಥಳೀಯ ಆಸ್ಪತ್ರೆಗಳಿಗೆ ತೋರಿಸಿದರೂ ವಾಸಿಯಾಗಲಿಲ್ಲ. ಕಡೆಗೆ ಕಿಮ್ಸ್‌ಗೆ ದಾಖಲಿಸಿದ್ದೆವು. ಅಲ್ಲೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅಪ್ಪನ ಸಾವಿಗೆ ಪೊಲೀಸರ ದೌರ್ಜನ್ಯವೇ ಕಾರಣ’ ಎಂದು ಕಣ್ಣೀರಿಟ್ಟರು.

ಪ್ರತಿಕ್ರಿಯಿಸಿ (+)