ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪ ಜ್ಞಾನದ ಸಂಕೇತ: ರಂಭಾಪುರಿ ಸ್ವಾಮೀಜಿ

ರೇಣುಕಾಚಾರ್ಯ ಮಂದಿರದಲ್ಲಿ ಕಾರ್ತೀಕ ದೀಪೋತ್ಸವ, ಧರ್ಮಸಭೆ
Last Updated 4 ಡಿಸೆಂಬರ್ 2019, 11:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಳಕಿಲ್ಲದ ಬದುಕಿಗೆ ಬೆಲೆಯಿಲ್ಲ; ಬೆಳಕು ಬದುಕಿನ ಅವಿಭಾಜ್ಯ ಅಂಗವಾಗಿದ್ದು, ದೀಪ ಹಾಗೂ ಬೆಳಕು ಜ್ಞಾನದ ಸಂಕೇತವಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ರಂಭಾಪುರಿ ಕಲ್ಯಾಣಮಂಟಪದಲ್ಲಿ ಮಂಗಳವಾರ ನಡೆದ ಕಾರ್ತೀಕ ಸಹಸ್ರ ದೀಪೋತ್ಸವ, ಧರ್ಮಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು, ಬದುಕಿನ ಅಜ್ಞಾನ ತೊಳೆಯಲು ಗುರು ಬೇಕು, ಹಚ್ಚುವುದಾದರೆ ದೀಪ ಹಚ್ಚು ಆದರೆ, ಬೆಂಕಿ ಹಚ್ಚಬೇಡ, ಆರಿಸುವುದಾದರೆ ಬೆಂಕಿ ಆರಿಸು ಆದರೆ, ದೀಪ ಆರಿಸಬೇಡ ಎಂದು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಗ್ರಂಥದಲ್ಲಿ ಹೇಳಿದ್ದಾರೆ’ ಎಂದರು.

‘ಈಗಿನ ಸಮಾಜದಲ್ಲಿ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಂಘರ್ಷ ಹೆಚ್ಚಾಗುತ್ತಿರುವುದು ಒಳ್ಳೆಯದಲ್ಲ. ಸ್ವಧರ್ಮನಿಷ್ಠೆ ಮತ್ತು ಪರಧರ್ಮದ ಬಗ್ಗೆ ಪರಸ್ಪರ ಗೌರವ ಭಾವನೆಗಳು ಬೆಳೆಯಬೇಕು’ ಎಂದರು.

ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಮಾತನಾಡಿ ‘ಶಾಂತಿ, ನೆಮ್ಮದಿಯ ಬದುಕಿಗೆ ಧರ್ಮ ಪರಿಪಾಲನೆ ಅಗತ್ಯವಾಗಿದೆ. ಅರಿವಿನ ದಾರಿಯಲ್ಲಿ ಮುನ್ನಡೆಸುವ ಗುರುವಿನ ಕರುಣೆಯೇ ದೊಡ್ಡದು’ ಎಂದರು.

ಸ್ಕೇಟಿಂಗ್‌ನಲ್ಲಿ ಇತ್ತೀಚಿಗೆ ದಾಖಲೆ ನಿರ್ಮಿಸಿದ ಒಜಲ್‌ ನಲವಡೆ, ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದ ವಿನಾಯಕ ಕೊಂಗಿ, ರಾಷ್ಟ್ರಪತಿ ಪದಕ ಜಯಿಸಿದ್ದ ಎನ್‌ಸಿಸಿಯ ಸಂದೇಶ ಹುಟಗಿ ಮತ್ತು ಹಾಸ್ಯ ಕಲಾವಿದ ಸುನೀಲ ಪತ್ರಿ ಅವರನ್ನು ರಂಭಾಪುರಿ ಸ್ವಾಮೀಜಿ ಸನ್ಮಾನಿಸಿದರು.

ಪಿಯುಸಿ ವಿಜ್ಞಾನ ವಿಷಯದಲ್ಲಿ ಜಿಲ್ಲೆಯ ಪ್ರಥಮ ಸ್ಥಾನ ಪಡೆದ ಅಪರ್ಣಾ ಮುಳಗುಂದ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಅಗ್ರಸ್ಥಾನ ಗಳಿಸಿದ ಪ್ರಣೀತಾ ಹಿರೇಮಠ ಮತ್ತು ವಿದ್ಯಾರ್ಥಿನಿ ಲಿಂಗರಾಜ ಭಿಕ್ಷಾವರ್ತಿಮಠ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಾಳೆಹೊನ್ನೂರಿನ ಮದ್ವೀರಶೈವ ಸದ್ಭೋವನಾ ಸಂಸ್ಥೆಯ ಅಧ್ಯಕ್ಷರಾದ ಕೊಟ್ಟೂರ ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ವ್ಯಾಪಾರಸ್ಥ ಆನಂದ ಗಂಗಾವತಿ, ಎಸ್‌.ಎಂ. ಶಿವಯೋಗಿಮಠ, ಬಸವರಾಜ ಕಲ್ಯಾಣಿಮಠ, ಪಂಚಲಿಂಗಪ್ಪ ಕವಲೂರ, ವಿಶ್ವನಾಥ ಹಿರೇಗೌಡರ ಇದ್ದರು. ಗದಿಗಯ್ಯ ಹಿರೇಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT