ಭಾನುವಾರ, ಏಪ್ರಿಲ್ 2, 2023
24 °C

ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪಕ್ಷಿಗಳಿಗಿಂತ ವೇಗವಾಗಿ ಬಾನೆತ್ತರಕ್ಕೆ ಹಾರುತ್ತಿದ್ದ ಗಾಳಿಪಟಗಳು, ಮತ್ತಷ್ಟು ಎತ್ತರಕ್ಕೆ ಹಾರಿಸಲು ನಾ ಮುಂದು ತಾ ಮುಂದು ಎಂದು ಪೈಪೋಟಿಗಿಳಿದಿದ್ದ ಜನ, ಎತ್ತರಕ್ಕೆ ಹಾರಿದಾಗ ಓಹ್ ಎಂಬ ಉದ್ಘಾರ...

–ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಗಾಳಿಪಟ ಉತ್ಸವದಲ್ಲಿ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಂಸದ ಸಾಂಸ್ಕೃತಿಕ ಮಹೋತ್ಸವದ ಅಂಗವಾಗಿ, ಕ್ಷಮತಾ ಸೇವಾ ಸಂಸ್ಥೆಯಿಂದ ನಗರದ ನೃಪತುಂಗ ಬೆಟ್ಟದ ಬಳಿಯ ವೆಂಕಟರಮಣ ದೇವಸ್ಥಾನದ ಎದುರಿನ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು, ವೃತ್ತಿಪರ ಗಾಳಿಪಟ ಹಾರಿಸುವ ಬೆಳಗಾವಿಯ ಕೀರ್ತಿ ಸುರಂಜನ್ ಅವರು ಸಿದ್ಧಪಡಿಸಿದ, ‘ಕಾಂತಾರ’ ಸಿನಿಮಾದ ದೃಶ್ಯ ಇದ್ದ ಪಟ ಹಾರಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.

ಇಂಗ್ಲೆಂಡ್, ಫ್ರಾನ್ಸ್, ಎಸ್ಟೊನಿಯ ಸೇರಿದಂತೆ 15 ದೇಶಗಳ 25ಕ್ಕೂ ಹೆಚ್ಚು ಮತ್ತು ಪಂಜಾಬ್, ಒಡಿಶಾ ರಾಜ್ಯಗಳು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ದೊಡ್ಡಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಗಾಳಿಪಟ ಹಾರಿಸುವವರು ಭಾಗವಹಿಸಿದ್ದರು. ಉತ್ಸವದಲ್ಲಿ ಡೆಲ್ಟಾ, ಇನ್‌ಪ್ಲಾಟೇಬಲ್, ಆಕ್ಟೋಪಸ್, ಲಿಫ್ಟರ್ಸ್, ಮಾರಿಯೊ, ಟೈಗರ್, ಫಿಶ್, ಡ್ರ್ಯಾಗನ್ ಚಿತ್ರಗಳಿದ್ದ, ವಿವಿಧ ವಿನ್ಯಾಸದ ಪಟಗಳು ಗಮನ ಸೆಳೆದವು.

‘25 ವರ್ಷಗಳಿಂದ ಗಾಳಿಪಟ ಹಾರಿಸುವುದನ್ನು ವೃತ್ತಿಯನ್ನಾಗಿಸಿಕೊಂಡಿದ್ದೇವೆ. ಹುಬ್ಬಳ್ಳಿಯಲ್ಲಿ ಕಳೆದ ವರ್ಷ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲೂ ಭಾಗವಹಿಸಿದ್ದೆ. ಈ ಬಾರಿ ‘ಹುಲಿ’ ಚಿತ್ರ ಇದ್ದ ಗಾಳಿಪಟ ಹಾರಿಸುವ ಮೂಲಕ ದೇಶದಲ್ಲಿ ಹುಲಿಗಳನ್ನು ರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ವೃತ್ತಿಪರ ಗಾಳಿಪಟ ಹಾರಿಸುವ ಪಂಜಾಬ್‌ನ ವರುಣ್ ಚಡ್ಡಾ ಮತ್ತು ಲಲಿತ್ ಚಡ್ಡಾ ಹೇಳಿದರು.

ದೊಡ್ಡಬಳ್ಳಾಪುರ ಗಾಳಿಪಟ ಕಲಾಸಂಗದ ಮಂಜುನಾಥ ಅವರು ರಿಂಗ್, ಟ್ರೇನ್, ಸ್ಪೈಡರ್‌ಮ್ಯಾನ್ ವಿನ್ಯಾಸದ ಗಾಳಿಪಟ ಹಾರಿಸಿ ಗಮನ ಸೆಳೆದರು.

‘12 ವರ್ಷಗಳಿಂದ ಗಾಳಿಪಟ ಹಾರಿಸುತ್ತಿದ್ದೇವೆ. ಈ ಉತ್ಸವದಲ್ಲಿ ‘ಗರುಡ’ ವಿನ್ಯಾಸದ ಗಾಳಿಪಟವನ್ನು 500 ಅಡಿಗೂ ಹೆಚ್ಚು ಎತ್ತರಕ್ಕೆ ಹಾರಿಸುವ ಗುರಿ ಹೊಂದಿದ್ದೇನೆ’ ಎಂದು ಬೆಳಗಾವಿಯ ಅಲರ್‌ವಾಡದ ಸುನೀಲ್ ಬಸ್ತವಾಡ ಹೇಳಿದರು.

ಬಾಕ್ಸ್‌

ನಾಡಿನ ಹಿರಿಮೆ ಸಾರುವ ಉತ್ಸವ

ಹುಬ್ಬಳ್ಳಿ: ‘ನಮ್ಮ ನಾಡಿನ ಹಿರಿಮೆ, ಕಲೆ– ಸಂಸ್ಕೃತಿ ಸಾರಲು ನಗರದಲ್ಲಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿದೆ.  ಜನರನ್ನು ರಂಜಿಸಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು  ಆಯೋಜಿಸಲಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶನಿವಾರ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮಕ್ಕಳಲ್ಲಿ ಪರೀಕ್ಷಾ ಭಯ ನಿವಾರಿಸಲು ಪ್ರಧಾನಿ ಮೋದಿ ಅವರು ‘ಎಕ್ಸಾಂ ವಾರಿಯರ್ಸ್‌’ ಪುಸ್ತಕ ರಚಿಸಿದ್ದಾರೆ. ಪ್ರತಿ ಸರ್ಕಾರಿ ಶಾಲೆಗೂ ಈ ಪುಸ್ತಕ ಒದಗಿಸಲಾಗುವುದು. ಡಿಜಿಟಲ್‌ ಕ್ಲಾಸ್‌ರೂಮ್‌ ಮೂಲಕ ಮಕ್ಕಳಿಗೆ ಇದರಲ್ಲಿನ ಅಂಶಗಳ ಬಗ್ಗೆ ಶಿಕ್ಷಕರು ಬೋಧಿಸಬೇಕು’ ಎಂದು ತಿಳಿಸಿದರು.

ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ‘ಇತ್ತೀಚಿಗೆ ಗಾಳಿಪಟ ಹಾರಿಸುವ ಪ್ರವೃತ್ತಿ ಕಡಿಮೆಯಾಗಿದೆ. ಉತ್ಸವದ ಮೂಲಕ ವೈವಿಧ್ಯಮಯ ಗಾಳಿಪಟಗಳನ್ನು ಹಾರಿಸಿ ಗ್ರಾಮೀಣ ಸೊಗಡು, ಕ್ರೀಡೆ ಕಾಪಾಡುವುದು ಮೂಲ ಉದ್ದೇಶವಾಗಿದೆ’ ಎಂದು ಹೇಳಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಸ್.ಎಸ್‌.ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡರ ಇದ್ದರು.

ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ

ಉತ್ಸವದಲ್ಲಿ 9ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ನಗರದ 120ಕ್ಕೂ ಹೆಚ್ಚು ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತರಿಗೆ ಪ್ರಶಸ್ತಿ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು ಎಂದು ಆಯೋಜಕರು ತಿಳಿಸಿದರು.

 34 ಅಡಿ ಉದ್ದದ ‘ಸ್ಪೈಡರ್‌ಮ್ಯಾನ್’, ‘ಐ ಲವ್ ಹುಬ್ಬಳ್ಳಿ’, ‘ಐ ಲವ್ ಇಂಡಿಯಾ’ ವಿನ್ಯಾಸದ ಗಾಳಿಪಟ ಹಾರಿಸಲಾಗುವುದು. ಕಳೆದ 4 ನಾಲ್ಕು ವರ್ಷಗಳಿಂದ ಇದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದೇನೆ.
– ಜೈಸಾಲ್‌ದೀಪ, ಒಡಿಶಾ

 ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ. ಎಸ್ಟೊನಿಯಾ ದೇಶದಿಂದ ಮೂವರು ಬಂದಿದ್ದೇವೆ. ಆರು ಗಾಳಿಪಟ ಹಾರಿಸಲಾಗುವುದು.
–ಯಾನಾ, ಎಸ್ಟೊನಿಯ ದೇಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು