ಮಂಗಳವಾರ, ನವೆಂಬರ್ 12, 2019
20 °C

ನ್ಯಾಯಾಲಯದ ಹೊರಗೂ ಬೆಳೆಯುತ್ತಿದೆ ವಕೀಲಿ ವೃತ್ತಿ

Published:
Updated:
Prajavani

ಧಾರವಾಡ: ‘ವಕೀಲಿ ವೃತ್ತಿಯಲ್ಲಿ ನ್ಯಾಯಾಲಯದ ಹೊರಗೂ ಸಾಕಷ್ಟು ಜಾವಾಬ್ದಾರಿಯುತ ಕೆಲಸಗಳಿದ್ದು, ಅದರಲ್ಲೂ ಯಶಸ್ಸು ಸಾಧಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದು ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ದಿಲೀಪ ಭೋಸ್ಲೆ ಹೇಳಿದರು.

ಸರ್ ಸಿದ್ಧಪ್ಪ ಕಂಬಳಿ ಕಾನೂನು ಕಾಲೇಜು ಆಯೋಜಿಸಿರುವ ಎಸ್‌.ಸಿ.ಜವಳಿ ಸ್ಮರಣಾರ್ಥ 22ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕಾನೂನು ವೃತ್ತಿ ಇಂದು ಎರಡು ಪ್ರತ್ಯೇಕ ವೃತ್ತಿಗಳಾಗಿ ವಿಭಜನೆಗೊಂಡಿದೆ. ಅದ್ಭುತ ವಾಗ್ಮಿಗಳು ನ್ಯಾಯಾಲಯದಲ್ಲಿ ದಾವೆ ಹೂಡಿ, ವಾದ ಮಂಡಿಸುತ್ತ ಯಶಸ್ವಿಯಾಗುತ್ತಿದ್ದಾರೆ. ಮತ್ತೊಂದೆಡೆ ಇವರಿಗೆ ಪೂರಕ ದಾಖಲೆಗಳನ್ನು ಒದಗಿಸುವ ಜಾಬ್ದಾರಿಯುತ ವೃತ್ತಿಯಲ್ಲಿ ದಾವೆಗೆ ಒಲ್ಲದ ವಕೀಲರು ಕೆಲಸ ಮಾಡುತ್ತಿದ್ದಾರೆ. ಇಂಥ ಬಹಳಷ್ಟು ಕಚೇರಿಗಳು ಮಹಾನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ವಾದ ಮಂಡನೆಗೆ ಅಂಜಿ, ವೃತ್ತಿಯನ್ನು ಯಾರೂ ಕೈಬಿಡಬಾರದು’ ಎಂದರು.

‘ವಕೀಲಿ ವೃತ್ತಿ ಆಯ್ದುಕೊಂಡ ಪ್ರತಿಯೊಬ್ಬರಿಗೂ ಈ ಕ್ಷೇತ್ರದಲ್ಲಿ ವಿಫಲ ಅವಕಾಶಗಳಿವೆ. ಆದರೆ ತಾಳ್ಮೆ ಮತ್ತು ವೃತ್ತಿಪರತೆಯನ್ನು ಈ ವೃತ್ತಿ ಬೇಡುತ್ತದೆ. ಕೋರ್ಸ್ ಮುಗಿಸಿ ಸನ್ನದು ಪಡೆದು ವಕೀಲಿ ವೃತ್ತಿ ಆರಂಭಿಸುವ ಪ್ರತಿಯೊಬ್ಬರ ಮೊದಲ ನಾಲ್ಕು ವರ್ಷಗಳು ಕಠಿಣ ಹಾದಿಯೇ ಆಗಿರುತ್ತದೆ. ಆದರೆ ಈ ಅವಧಿಯ ಪ್ರತಿಯೊಂದು ದಿನವನ್ನೂ ಹೂಡಿಕೆ ಎಂದು ಪರಿಗಣಿಸುವುದೇ ಆದರೆ, ಮುಂದೆ ಅದು ಬಡ್ಡಿ ಸಹಿತ ಮರಳಿ ನಿಮಗೇ ಸೇರುತ್ತದೆ’ ಎಂದು ಭೋಸ್ಲೆ ಹೇಳಿದರು.

‘ಮುಂಬೈ ಹಾಗೂ ದೆಹಲಿಯಲ್ಲಿ ಹಲವು ಯಶಸ್ವಿ ವಕೀಲರು ವಾರ್ಷಿಕ ₹500ರಿಂದ 600ಕೋಟಿಯಷ್ಟು ಆದಾಯ ತೆರಿಗೆ ರಿಟರ್ನ್ಸ್‌ ತೋರಿಸುತ್ತಿದ್ದಾರೆ. ಇಷ್ಟು ಆದಾಯ ತಂದುಕೊಡುವ ಬೇರೊಂದು ವೃತ್ತಿಯೇ ಇಲ್ಲ ಎಂದರೂ ತಪ್ಪಾಗದು. ಹೀಗಾಗಿ ಉತ್ತಮ ಹಿರಿಯ ವಕೀಲರನ್ನು ಆಯ್ಕೆ ಮಾಡಿಕೊಂಡು ವೃತ್ತಿ ಆರಂಭಿಸಿ. ಅವರ ಬಳಿ ಇರುವ ಸಂದರ್ಭದಲ್ಲಿ ಬರುವ ಪ್ರತಿಯೊಂದು ಪ್ರಕರಣವನ್ನೂ ಸಂಶೋಧನೆ ಎಂದೇ ಪರಿಗಣಿಸಿ. ನ್ಯಾಯಾಧೀಶರ ತೀರ್ಪುಗಳನ್ನು ಹತ್ತುಹಲವು ಬಾರಿ ಅಧ್ಯಯನ ಮಾಡಿ ಅರ್ಥೈಸಿಕೊಳ್ಳಿ. ವೃತ್ತಿಧರ್ಮ ಪಾಲನೆ ಮತ್ತು ಬದ್ಧತೆಯಿಂದ ಕೆಲಸ ಮಾಡಿದಲ್ಲಿ ಹಣ ಮತ್ತು ಕೀರ್ತಿ ನಿಮ್ಮನ್ನೇ ಬೆನ್ನುಹತ್ತುತ್ತದೆ’ ಎಂದರು.

‘ಯುವತಿಯರು ಇಂದು ಹೆಚ್ಚು ವಕೀಲಿ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ. ಮಹಿಳೆಯರಲ್ಲಿ ವಕೀಲಿ ವೃತ್ತಿ ಅಂತರ್ಗತವಾಗಿರುತ್ತದೆ. ಹೀಗಾಗಿ ವೃತ್ತಿಯಲ್ಲಿ ಶೀಘ್ರದಲ್ಲಿ ಯಶಸ್ಸು ಸಾಧಿಸುತ್ತಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೆಚ್ಚು ಯುವಕರು ಈ ವೃತ್ತಿ ಪ್ರವೇಶಿಸುತ್ತಿರುವುದು ಈ ವೃತ್ತಿಯಲ್ಲಿನ ಬೆಳವಣಿಗೆಯನ್ನು ಸೂಚಿಸುತ್ತದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎ.ಎಸ್.ಶಿರಾಳಶೆಟ್ಟಿ ವಹಿಸಿದ್ದರು. ಕುಲಸಚಿವ ಪ್ರೊ. ಸಿ.ಬಿ.ಹೊನ್ನುಸಿದ್ಧಾರ್ಥ, ಕಾಲೇಜಿನ ಪ್ರಾಚಾರ್ಯ ಡಾ. ಎಂ.ವಿಶ್ವನಾಥ, ಹಿರಿಯ ವಕೀಲ ಸಿ.ಎಸ್. ಜವಳಿ, ಕಾಲೇಜಿನ ಜಿಮ್ಖಾನಾ ಅಧ್ಯಕ್ಷೆ ಗಾಯತ್ರಿ ಇದ್ದರು.

ಪ್ರತಿಕ್ರಿಯಿಸಿ (+)