ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಂತ ಸ್ಮರಣೆ’ಯಲಿ ನೆನಪುಗಳ ಮೆಲುಕು

ಸ್ಮರಣೆ ನಿಮಿತ್ತ ರಕ್ತದಾನ, ಆರೋಗ್ಯ ತಪಾಸಣೆ ಶಿಬಿರ, ಆಯುಷ್ಮಾನ್ ಕಾರ್ಡ್ ವಿತರಣೆ
Last Updated 12 ನವೆಂಬರ್ 2019, 15:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ, ಅವರ ಒಡನಾಡಿಗಳ ಅನಂತ ನೆನಪುಗಳ ಮೆಲುಕಿಗೆ ಸಾಕ್ಷಿಯಾಯಿತು.

‘ಭೌತಿಕವಾಗಿ ಅನಂತಕುಮಾರ್ ನಮ್ಮೊಂದಿಗೆ ಇಲ್ಲದಿರಬಹುದು. ಆದರೆ, ಅವರ ಆದರ್ಶ ವ್ಯಕ್ತಿತ್ವ ಹಾಗೂ ಕೆಲಸಗಳು ಅವರಿಲ್ಲ ಎಂಬ ಶೂನ್ಯವನ್ನು ಮೆರೆಸಿವೆ’ ಎಂದು ಕಾರ್ಯಕ್ರಮಕ್ಕೆ ಸಾಕ್ಷಿಯಾದ ಅತಿಥಿಗಳು ಅನಂತಕುಮಾರ್ ಅವರನ್ನು ನೆನಪಿಸಿಕೊಂಡರು.

ಅನಾರೋಗ್ಯ ಮುಚ್ಚಿಟ್ಟು ಕೆಲಸ:

ಪತಿ ಬಗ್ಗೆ ಕೆಲ ವಿಷಯಗಳನ್ನು ಹಂಚಿಕೊಂಡ ತೇಜಸ್ವಿನಿ ಅನಂತಕುಮಾರ್, ‘ಕಡೆಯ ದಿನಗಳಲ್ಲಿ ಅನಂತಕುಮಾರ್, ತಮ್ಮ ಅನಾರೋಗ್ಯದ ಗುಟ್ಟು ಮುಚ್ಚಿಟ್ಟು ಕರ್ತವ್ಯ ಪ್ರಜ್ಞೆ ಮೆರೆದರು. ಅವರ ಆರೋಗ್ಯ ಸ್ಥಿತಿ ಬಗ್ಗೆ ನನಗೆ ಹಾಗೂ ವೈದ್ಯರಿಗೆ ಬಿಟ್ಟು ಬೇರಾರಿಗೂ ಗೊತ್ತಿರಲಿಲ್ಲ’ ಎಂದರು.

‘ಪತಿಯ ನೆನಪಿನ ಶಕ್ತಿ ಅಗಾಧವಾದುದು. ಅವರಿಗೆ ತಮ್ಮ ಪಕ್ಷದವರಷ್ಟೇ ಅಲ್ಲದೆ, ಬೇರೆ ಪಕ್ಷಗಳ ನಾಯಕರು ಹಾಗೂ ಅವರ ಹಿನ್ನೆಲೆ ಬಗ್ಗೆಯೂ ಗೊತ್ತಿತ್ತು. ಯಾರನ್ನಾದರೂ ಒಮ್ಮೆ ಭೇಟಿ ಮಾಡಿದರೆ, ಎಂದಿಗೂ ಮರೆಯುತ್ತಿರಲಿಲ್ಲ. ತಮ್ಮೊಂದಿಗೆ ಅನೇಕರನ್ನು ಬೆಳೆಸಿದರು’ ಎಂದು ನೆನಪಿಸಿಕೊಂಡರು.

‘ಹಸಿರು ಜೀವನ ಶೈಲಿ ರೂಪಿಸಿಕೊಂಡಿದ್ದ ಅವರು, ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ವಾರಕ್ಕೊಮ್ಮೆ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ತಮ್ಮ ತಾಯಿ ನೆನಪಿನಲ್ಲಿ ‘ಅದ್ಯಮ ಚೇತನ’ ಟ್ರಸ್ಟ್ ಆರಂಭಿಸಿ, 1.50 ಲಕ್ಷ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿದ್ದರು’ ಎಂದರು.

ಬೆಳವಣಿಗೆಗೆ ಅವರೇ ಕಾರಣ:

ಅರಣ್ಯ ಸಚಿವ ಸಿ.ಸಿ. ಪಾಟೀಲ ಮಾತನಾಡಿ , ‘ಅನಂತಕುಮಾರ್ ಅವರಿಂದಾಗಿ ನಾನು ಬಿಜೆಪಿಗೆ ಬಂದೆ. ಪಕ್ಷಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ದೂರದೃಷ್ಟಿ ಅವರಿಗಿತ್ತು. ನನ್ನ ಬೆಳವಣಿಗೆಗೆ ಅವರೇ ಕಾರಣ’ ಎಂದು ನೆನೆದರು.

‘ಯೂರಿಯಾ ರಸಗೊಬ್ಬರ ಕೊರತೆ ನೀಗಿಸಿ, ಕಾಳಸಂತೆಯಲ್ಲಿ ಮಾರಾಟವಾಗದಂತೆ ತಡೆಯಲು ಅನಂತಕುಮಾರ್ ದಿಟ್ಟ ಕ್ರಮ ಕೈಗೊಂಡರು. ಹೃದಯ ರೋಗಿಗಳಿಗೆ ಅಳವಡಿಸುವ ಸ್ಟಂಟ್ ಬೆಲೆ ಇಳಿಕೆಗೂ ಪ್ರಮುಖ ಕಾರಣರಾದರು’ ಎಂದು ಬಣ್ಣಿಸಿದರು.

ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಅದಮ್ಯ ಚೇತನ ಟ್ರಸ್ಟ್ ಸಹಯೋಗದಲ್ಲಿ, ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜತೆಗೆ, ಅದ್ಯಮ ಚೇತನದ ಅನ್ನಪೂರ್ಣ ಯೋಜನೆಯ ‘ಗೋಡೆ ಪತ್ರಿಕೆ’ಯನ್ನು ಅತಿಥಿಗಳು ಬಿಡುಗಡೆ ಮಾಡಿದರು.

ಮೂರುಸಾವಿರ ಮಠದ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಹಾನಗರ ಬಿಜೆಪಿ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಮುಖಂಡರಾದ ಲಿಂಗರಾಜ ಪಾಟೀಲ, ಮಲ್ಲಿಕಾರ್ಜುನ ಸಾವಕಾರ ಮುಂತಾದವರು ಇದ್ದರು.

ಅನಂತಕುಮಾರ್ ಅವರ ಸೋದರ ನಂದಕುಮಾರ್ ಸ್ವಾಗತಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಸೋದರ ಗೋವಿಂದ ಜೋಶಿ ನಿರೂಪಣೆ ಮಾಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಹೂಗುಚ್ಛದ ಬದಲಿಗೆ, ಅನಂತಕುಮಾರ್ ಅವರ ಬದುಕು ಕುರಿತ ಎರಡು ಪುಸ್ತಕಗಳನ್ನು ನೀಡಲಾಯಿತು. ಅನಂತಕುಮಾರ್ ಅವರ ಬದುಕಿನ ಚಿತ್ರಗಳ ಪ್ರದರ್ಶನ ಗಮನ ಸೆಳೆಯಿತು.

‘ನನ್ನ ರಾಜಕೀಯ ಗುರು’

ಎಲ್‌ಎಲ್‌ಬಿ ಮುಗಿಸಿ ವಕೀಲ ವೃತ್ತಿ ಪ್ರಾಕ್ಟೀಸ್ ಮಾಡುತ್ತಿದ್ದ ನನಗೆ ರಾಜಕೀಯಕ್ಕೆ ಬನ್ನಿ ಎಂದು ಅನಂತಕುಮಾರ್ ಆಗಾಗ ಕರೆಯುತ್ತಿದ್ದರು. ನಾನು ನಿರಾಕರಿಸುತ್ತಲೇ ಬಂದಿದ್ದೆ. ಆದರೆ, ಹುಬ್ಬಳ್ಳಿಯಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಅವರು, ನನ್ನ ಅನುಪಸ್ಥಿತಿಯಲ್ಲಿ ಶಹರ ಘಟಕದ ಉಪಾಧ್ಯಕ್ಷನನ್ನಾಗಿ ನನ್ನನ್ನು ಘೋಷಿಸಿದ್ದರು. ಆ ಮೂಲಕ, ನನ್ನನ್ನು ಸಕ್ರಿಯ ರಾಜಕಾರಣಕ್ಕೆ ತಂದರು. 1999ರಲ್ಲಿ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿ ವಾಪಸ್ ಪಡೆದಿದ್ದ ನನಗೆ, 1994ರಲ್ಲಿ ಎಂಎಲ್‌ಎ ಟಿಕೆಟ್ ಕೊಡಿಸಿದರು. ಎರಡನೇ ಸಲವೂ ಗೆಲುವು ಸಾಧಿಸಿದ ನಾನು ವಿರೋಧ ಪಕ್ಷದ ನಾಯಕನಾಗಲು ಅನಂತಕುಮಾರ್ ಅವರೇ ಪ್ರಮುಖ ಕಾರಣ. ನನ್ನ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು, ನನ್ನ ರಾಜಕೀಯ ಗುರುವಾಗಿದ್ದರು.

– ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ

‘ಹುಚ್ಚಿದ್ದಿ ಏನೊ’ ಎನ್ನುತ್ತಿದ್ದರು

ಅನಂತಕುಮಾರ್ ಅವರನ್ನು ದ್ವೇಷಿಸುವವರೇ ಇಲ್ಲ. ಎಲ್ಲರೊಂದಿಗೂ ಆತ್ಮೀಯತೆಯಿಂದ ಇರುತ್ತಿದ್ದ ಅವರು, ‘ಬದುಕಿನಲ್ಲಿ ಉದಾತ್ತತ್ತೆ’ ಇರಬೇಕು ಎನ್ನುತ್ತಿದ್ದರು. ಸಿಟ್ಟಾದಾಗ ‘ಹುಚ್ಚಿದ್ದಿ ಏನೊ’ ಎಂದು ಬೈಯ್ಯುತ್ತಿದ್ದ ಅವರ ಕೋಪ, ಕೆಲ ಕ್ಷಣಗಳಲ್ಲೇ ಮಾಯವಾಗುತ್ತಿತ್ತು.ಸಂದಿಗ್ಧ ಕಾಲದಲ್ಲಿ ಅವರು ಹುಬ್ಬಳ್ಳಿ ತೊರೆದು, ಬೆಂಗಳೂರಿಗೆ ಹೋದರು. ಒಬ್ಬ ಶಾಸಕನೂ ಇಲ್ಲದ ಸಂದರ್ಭದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಅವಿರತವಾಗಿ ದುಡಿದರು. ಸಾವನ್ನು ಲೆಕ್ಕಿಸದೆ, ನಗುತ್ತಲೇ ಕೆಲಸ ಮಾಡುತ್ತಾ ಕಣ್ಮರೆಯಾದ ಅವರೊಬ್ಬ ಕರುಣಾಮಯಿ.

– ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

‘ನನಗೆ ಸಹಜ ಸಾವಿಲ್ಲ ಎಂದಿದ್ದ’

ನಾನು ಅನಂತಕುಮಾರ್ ಒಂದೇ ಬೆಂಚಿನಲ್ಲಿ ಕುಳಿತು ಕಲಿತಿದ್ದೇವೆ. ಎಷ್ಟೇ ಬ್ಯುಸಿಯಾಗಿದ್ದರೂ, ಆಗಾಗ ನನಗೆ ಕರೆ ಮಾಡಿ ಹರಟೆ ಹೊಡೆಯುತ್ತಿದ್ದ ಆತ ಒಮ್ಮೆ ‘ನನಗೆ ಸಹಜ ಸಾವಿಲ್ಲ’ ಎಂದಿದ್ದ. ‘ಯಾಕೊ ವಿಚಿತ್ರವಾಗಿ ಮಾತನಾಡುತ್ತೀಯಾ’ ಎಂದಿದ್ದಕ್ಕೆ, ‘ಇಲ್ವೊ ನನಗೆ ಗೊತ್ತಿದೆ’ ಎಂದು ಸುಮ್ಮನಾಗಿದ್ದ. ಅವನಿಗೆ, ತನ್ನ ಸಾವಿನ ಬಗ್ಗೆ ಮುಂಚೆಯೇ ಅರಿವಿತ್ತು. ಬೆಂಗಳೂರಿನ ಸಂಸದನಾಗಿದ್ದರೂ, ಹುಬ್ಬಳ್ಳಿಗೆ ನೈರುತ್ಯ ರೈಲ್ವೆ ಕಚೇರಿಯನ್ನು ತಂದ ಅನಂತಕುಮಾರ್, ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರ ವಿಚಾರಧಾರೆಗೆ ಕಾನೂನಾತ್ಮಕ ಶಕ್ತಿ ತುಂಬುವ ಕೆಲಸ ಮಾಡಿದ.

– ಬಸವರಾಜ ಬೊಮ್ಮಾಯಿ, ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT