ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಳರಿಮೆ ತೊರೆದು, ಆತ್ಮವಿಶ್ವಾಸ ಬೆಳೆಸಿಕೊಳ್ಳಿ

ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಕೆ.ಸಿ. ವಿರೂಪಾಕ್ಷ ಸಲಹೆ
Last Updated 25 ಫೆಬ್ರುವರಿ 2020, 9:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೀಳರಿಮೆ ತೊರೆದು ಆತ್ಮವಿಶ್ವಾಸ ಬೆಳೆಸಿಕೊಂಡರೆ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಕೆ.ಸಿ. ವಿರೂಪಾಕ್ಷ ಹೇಳಿದರು.

ನಗರದಲ್ಲಿ ಕೆ.ಎಲ್.ಇ ಸಂಸ್ಥೆಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್. ಕೋತಂಬ್ರಿ ವಿಜ್ಞಾನ ಕಾಲೇಜಿನ ಸಮಾಜಶಾಸ್ತ್ರ ವಿಭಾಗ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ‘ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಮತ್ತು ಪದವಿಯ ನಂತರ ಉದ್ಯೋಗಾವಕಾಶಗಳು’ ವಿಷಯ ಕುರಿತು ಅವರು ಮಾತನಾಡಿದರು.

‘ನನಗೆ ಇಂಗ್ಲಿಷ್ ಬರುವುದಿಲ್ಲ. ಬಡವನಾಗಿದ್ದು ಕೋಚಿಂಗ್‍ಗೆ ಹೋಗಲು ಸಾಧ್ಯವಿಲ್ಲ ಎಂಬಂತಹ ಕೀಳರಿಮೆ ಬಿಟ್ಟು, ನಿರಂತರ ಶ್ರಮ ಹಾಕಬೇಕು. ಆದರೆ, ಮಾಹಿತಿಯ ಕೊರತೆ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಯುವಜನರು ಹಿಂದುಳಿಯುತ್ತಿದ್ದಾರೆ. ಹಾಗಾಗಿ, ಜೀವನದಲ್ಲಿ ಗುರಿಯೊಂದನ್ನು ನಿಗದಿಪಡಿಸಿಕೊಳ್ಳಬೇಕು’ ಎಂದರು.

‘ನಾನೂ ಕೂಡ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿಯೇ ಈ ಮಟ್ಟಕ್ಕೆ ಬೆಳೆದಿದ್ದೇನೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ನಿತ್ಯ ದಿನಪತ್ರಿಕೆಗಳನ್ನು ಓದಿ, ಮುಖ್ಯ ವಿಷಯಗಳ ನೋಟ್ಸ್ ಸಿದ್ಧಪಡಿಸಬೇಕು. ಸಾಧನೆಗೆ ಏಕಾಗ್ರತೆ, ತಾಳ್ಮೆ ಹಾಗೂ ಕಠಿಣ ಪರಿಶ್ರಮ ಅಗತ್ಯ’ ಎಂದು ತಿಳಿಸಿದರು.

ಉದ್ಯೋಗಾವಕಾಶಗಳ ಕುರಿತು ಮಾತನಡಿದ ವಾಣಿಜ್ಯ ತೆರಿಗೆ ಇಲಾಖೆಯ ಮತ್ತೊಬ್ಬ ಜಂಟಿ ಆಯುಕ್ತ ವೀರಭದ್ರ ಬಿ. ಹಂಚಿನಾಳ, ‘ಪದವಿ ನಂತರ ಕೆ.ಎ.ಎಸ್, ಐ.ಎ.ಎಸ್, ಬ್ಯಾಂಕ್, ರೈಲ್ವೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬಹುದು. ಇದಕ್ಕೆ ಬೇಕಾದ ಅಗತ್ಯ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎಲ್.ಡಿ. ಹೊರಕೇರಿ, ಸಂಪನ್ಮೂಲ ವ್ಯಕ್ತಿಗಳನ್ನು ಸನ್ಮಾನಿಸಿದರು. ವಿದ್ಯಾರ್ಥಿನಿ ಭಾಗ್ಯಶ್ರೀ ಹುರಕಡ್ಲಿ ಪ್ರಾರ್ಥಿಸಿದರು. ಕಾಲೇಜು ಒಕ್ಕೂಟದ ಅಧ್ಯಕ್ಷ ಮತ್ತು ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೈ.ಎನ್. ನಾಗೇಶ ಸ್ವಾಗತಿಸಿದರು. ಸಮಾಜಶಾಸ್ತ್ರ ಸಂಘದ ಕಾರ್ಯದರ್ಶಿ ಕೃತಿಕಾ ಹಂಚಿನಾಳ ನಿರೂಪಣೆ ಮಾಡಿದರು. ಕಾಲೇಜು ಒಕ್ಕೂಟದ ಕಾರ್ಯದರ್ಶಿ ರಾಹುಲ್ ಮುತ್ತಣ್ಣವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT