ಗುರುವಾರ , ನವೆಂಬರ್ 21, 2019
23 °C
ಜನರ ಸಮಸ್ಯೆ ಪರಿಹರಿಸಲು ಎಡಪಕ್ಷಗಳ ಒತ್ತಾಯ

ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಆಗ್ರಹ

Published:
Updated:
Prajavani

ಹುಬ್ಬಳ್ಳಿ: ದೇಶಕ್ಕೆ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ಹಾಗೂ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಸಿಪಿಎಂ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು, ಅಲ್ಲಿಂದ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ಬಂದು ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಿಪಿಎಂ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ‘ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದಾಗಿ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳು ನಷ್ಟದಲ್ಲಿವೆ. ಉದ್ಯೋಗ ಕಡಿತ ಹೆಚ್ಚುತ್ತಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ’ ಎಂದರು.

‘ಬರ ಹಾಗೂ ಪ್ರವಾಹದಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಅಗತ್ಯ ಪರಿಹಾರ ಬಿಡುಗಡೆ ಮಾಡಬೇಕು, ಉದ್ಯೋಗ ಸೃಷ್ಟಿಗಾಗಿ ಸಾರ್ವಜನಿಕ ವಲಯದ ಮೇಲಿನ ಹೂಡಿಕೆಯನ್ನು ಹೆಚ್ಚಿಸಬೇಕು, ನಿರುದ್ಯೋಗಿಗಳಿಗೆ ಭತ್ಯೆ ನೀಡಬೇಕು ಹಾಗೂ ಸರ್ಕಾರಿ ಸ್ವಾಮ್ಯದ ಉದ್ಯಮಗಳ ಖಾಸಗೀಕರಣ ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ನರೇಗಾ ಯೋಜನೆಯಡಿ ಕನಿಷ್ಟ ಕೂಲಿಯೊಂದಿಗೆ 200 ದಿನ ಕೆಲಸ ನೀಡಬೇಕು. ಹಳೇ ಬಾಕಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. ವೃದ್ಧಾಪ್ಯ ಹಾಗೂ ವಿಧವಾ ವೇತನವನ್ನು ₹3 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಎನ್‌.ಎ. ಖಾಜಿ, ಮುಖಂಡರಾದ ದೇವಾನಂದ ಜಗಾಪೂರ, ಬಸೀರ ಮುಧೋಳ, ಬಿ.ಎಸ್. ಸೊಪ್ಪಿನ, ಬಿ.ಎನ್. ಪೂಜಾರಿ, ಎ.ಎಸ್. ಪೀರಜಾದೆ, ಜಿ.ಎಚ್. ಕರಿಯಣ್ಣವರ, ರಮೇಶ ಭೋಸ್ಲೆ, ಎನ್‌.ಬಿ. ಪಮ್ಮಾರ, ಸುನೀಲ್ ಆಗಲಾವಿ, ಎಂ.ಎಚ್. ಮುಲ್ಲಾ, ಏಜಾಜ್ ಮುಧೋಳ, ಗುರುಸಿದ್ಧಪ್ಪ ಅಂಬಿಗೇರ, ಹುಸೇನಸಾಬ ನದಾಫ ಹಾಗೂ ಎನ್‌.ಎಂ. ಪಾಟೀಲ ಇದ್ದರು.

ಪ್ರತಿಕ್ರಿಯಿಸಿ (+)