ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಕಾನೂನು ಸೇವಾ ಪ್ರಾಧಿಕಾರದ ಅನಿರೀಕ್ಷಿತ ಭೇಟಿ

ವಿವಿಧೆಡೆ ಪರಿಶೀಲಿಸಿದ ನ್ಯಾಯಾಧೀಶೆ ಪುಷ್ಪಲತಾ
Last Updated 19 ಜನವರಿ 2022, 17:27 IST
ಅಕ್ಷರ ಗಾತ್ರ

ಧಾರವಾಡ: ಕೋವಿಡ್ ಮಾರ್ಗಸೂಚಿ ಪಾಲನೆ, ಸೌಲಭ್ಯಗಳ ವಿತರಣೆ ಪರಿಶೀಲನೆಗಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಂ. ಪುಷ್ಪಲತಾ ಅವರು ಬುಧವಾರ ಕೆಲವೆಡೆ ಅನಿರೀಕ್ಷಿತ ಭೇಟಿ ನೀಡಿದರು.

ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಅವರು ಅಲ್ಲಿ ನೂಕುನುಗ್ಗಲು ಉಂಟಾಗದಂತೆ ತಡೆಯಲು ಕ್ರಮ ವಹಿಸಲು ಸೂಚಿಸಿದರು. ಆಸ್ಪತ್ರೆ ಆವರಣದಲ್ಲಿರುವ ಉಪನಗರ ಠಾಣೆ ಪೊಲೀಸ್ ಚೌಕಿಯ ಸಿಬ್ಬಂದಿಗೆ ಈ ಕುರಿತು ನಿಗಾ ವಹಿಸುವಂತೆ ನಿರ್ದೇಶಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಆಸ್ಪತ್ರೆಯಲ್ಲಿ ಇರದ ಕಾರಣ, ಆರ್‌ಎಂಒ ಮಾಹಿತಿ ಒದಗಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಪುಷ್ಪಲತಾ, ‘ಆಸ್ಪತ್ರೆ ಭೇಟಿ ಸಂದರ್ಭದಲ್ಲಿ ಸಿಬ್ಬಂದಿ ಹಾಗೂ ವೈದ್ಯರಿಗೆ ಸೋಂಕು ತಗುಲಿರುವುದಾಗಿ ತಿಳಿಸಿದರು. ಹೀಗಾಗಿ ಒಳಗೆ ಹೋಗುವುದು ಬೇಡ ಎಂದಿದ್ದರಿಂದ ಹೊರಗಿನಿಂದಲೇ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಯಿತು’ ಎಂದರು.

ನಂತರ ಕಿಟೆಲ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲ್ಲಿ ಮಾಸ್ಕ್ ಧರಿಸದ ಮೂವರು ವಿದ್ಯಾರ್ಥಿಗಳನ್ನು ತರಗತಿಗೆ ಸೇರಿಸದೆ ಹೊರಗೆ ನಿಲ್ಲಿಸಲಾಗಿತ್ತು.

‘ಮಾಸ್ಕ್ ತಂದಿಲ್ಲವೆಂದರೆ, ತರಗತಿಯಿಂದ ಹೊರಗಿಡುವುದು ಎಂದರ್ಥವಲ್ಲ. ಮಾಸ್ಕ್‌ ಕೊಡುವುದು ಸಂಸ್ಥೆಯ ಹೊಣೆ’ ಎಂದು ನಿರ್ದೇಶಿಸಿದರು. ಜತೆಗೆ 15 ವರ್ಷದ ಮೇಲಿನ ವಿದ್ಯಾರ್ಥಿಗಳು ಲಸಿಕೆ ಪಡೆದು ಸುರಕ್ಷಿತವಾಗಿರಿ ಎಂದು ಸಲಹೆ ಪುಷ್ಪಲತಾ ಸಲಹೆ ನೀಡಿದರು.

ಅಲ್ಲಿಂದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಕೋವಿಡ್ ಮಾರ್ಗಸೂಚಿ ಪಾಲನೆ ಕುರಿತು ಮಾಹಿತಿ ಪಡೆದರು. ಜೈಲು ಸೂಪರಿಂಟೆಂಡೆಂಟ್ ಮರಿಗೌಡ ಅವರು ಅಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ನ್ಯಾಯಾಧೀಶರಿಗೆ ಮಾಹಿತಿ ನೀಡಿದರು.

ಅನಿರೀಕ್ಷಿತ ಭೇಟಿ ಕುರಿತು ಮಾತನಾಡಿದ ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ, ‘ಜನರ ಸುರಕ್ಷತಾ ದೃಷ್ಟಿಯಿಂದ ಇಂಥ ಭೇಟಿ ಅನಿವಾರ್ಯ. ಕೇಂದ್ರ ಕಾರಾಗೃಹದಲ್ಲಿ ಕೋವಿಡ್ ಪಾಲನೆ ಉತ್ತಮವಾಗಿರುವುದು ಕಂಡುಬಂತು. ಮುಂದೆಯೂ ವ್ಯವಸ್ಥೆಯಲ್ಲಿನ ಲೋಪದೋಷ ಕುರಿತು ಬರುವ ದೂರುಗಳನ್ನು ಆಧರಿಸಿ ಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದರು.

ಜಿಲ್ಲಾ ಸರ್ಜನ್ ಡಾ. ಶಿವಕುಮಾರ ಮಾನಕರ್ ಪ್ರತಿಕ್ರಿಯಿಸಿ, ‘ನ್ಯಾಯಾಧೀಶರ ಭೇಟಿಸಂದರ್ಭದಲ್ಲಿ ಊಟಕ್ಕೆ ಹೋಗಿದ್ದ ಕಾರಣ ಅವರ ಭೇಟಿ ಸಾಧ್ಯವಾಗಿಲ್ಲ. ಒಳಗೆ ಕೋವಿಡ್ ವಾರ್ಡ್‌ನಲ್ಲಿ 14 ಜನ ದಾಖಲಾಗಿದ್ದಾರೆ. ಹೀಗಾಗಿ ಒಳಹೋಗುವುದು ಸುರಕ್ಷಿತವಲ್ಲ ಎಂದು ಸಿಬ್ಬಂದಿ ಹೇಳಿರಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT