ಶನಿವಾರ, ನವೆಂಬರ್ 16, 2019
21 °C
ಕ್ಷೇಮಾಭಿವೃದ್ಧಿ ಸಂಘದಿಂದ ಅಂಬೇಡ್ಕರ್ ಜನ್ಮ ದಿನಾಚರಣೆ: ಅಬ್ಬಯ್ಯ ಹೇಳಿಕೆ

ಅಂಬೇಡ್ಕರ್‌ ವಿಚಾರಗಳ ಕ್ರಾಂತಿಯಾಗಲಿ

Published:
Updated:
Prajavani

ಹುಬ್ಬಳ್ಳಿ: ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಬದಲಿಸಲು ಕೋಮುಶಕ್ತಿಗಳು ಪ್ರಯತ್ನಿಸುತ್ತಿವೆ. ಇದಕ್ಕೆಲ್ಲ ಅವಕಾಶ ಕೊಡದೇ ಅಂಬೇಡ್ಕರ್‌ ವಿಚಾರಗಳು ಕ್ರಾಂತಿಯಾಗುವಂತೆ ಮಾಡಬೇಕು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗುವ ಅಗತ್ಯವಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಲಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರ ಕ್ಷೇಮಾಭಿವೃದ್ಧಿ ಸಂಘ ಶನಿವಾರ ಹಮ್ಮಿಕೊಂಡಿದ್ದ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ 128ನೇ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಒಬಿಸಿ, ಎಸ್‌ಸಿ ಹಾಗೂ ಎಸ್‌ಟಿ ವರ್ಗದ ಜನರಿಗೆ ಅಕ್ಷರ, ಜ್ಞಾನ ಮತ್ತು ರಾಜಕೀಯ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದು ಅಂಬೇಡ್ಕರ್‌. ಅವರು ಸಂವಿಧಾನದಲ್ಲಿ ದಲಿತರಿಗೆ ನೀಡಿರುವ ಸವಲತ್ತುಗಳು ಕರಾರುವಾಕ್ಕಾಗಿ ಜಾರಿಗೆ ತಂದಿದ್ದರೆ 20 ವರ್ಷಗಳಲ್ಲಿಯೇ ಎಲ್ಲ ದಲಿತರ ಪರಿಸ್ಥಿತಿ ಬದಲಾಗುತ್ತಿತ್ತು. ಆದರೆ, ನಮ್ಮವರೇ ನಮ್ಮನ್ನು ತುಳಿಯುತ್ತಿದ್ದಾರೆ. ದಲಿತರ ಶಕ್ತಿಯನ್ನು ಕ್ಷೀಣಿಸುವ ಪ್ರಯತ್ನ ನಡೆಯುತ್ತಲೇ ಇದೆ. ಇದಕ್ಕೆ ಯಾರೂ ಅವಕಾಶ ಕೊಡಬಾರದು’ ಎಂದು ಕರೆ ನೀಡಿದರು.

‘ಸ್ವಾಭಿಮಾನದ ಪ್ರತೀಕವಾಗಿದ್ದ ಅಂಬೇಡ್ಕರ್‌ ಬದುಕಿನಂತೆಯೇ ನಾವೂ ಸ್ವಾಭಿಮಾನಿಗಳಾಗಿ ಬದುಕಬೇಕು. ಎಲ್ಲ ವರ್ಗದ ಜನರಿಗೂ ಅವರು ಸೌಲಭ್ಯಗಳನ್ನು ನೀಡಿದ್ದಾರೆ. ಆದರೆ, ಅಂಬೇಡ್ಕರ್‌ ಅವರನ್ನು ದಲಿತ ನಾಯಕ ಎನ್ನುವಂತೆ ಬಿಂಬಿಸಲಾಗಿದೆ. ದಲಿತರಷ್ಟೇ ಸೇರಿಕೊಂಡು ಅಂಬೇಡ್ಕರ್‌ ಜಯಂತಿ ಆಚರಿಸುವ ಪರಿಸ್ಥಿತಿ ಬಂದೊದಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕೆಎಸ್‌ಆರ್‌ಟಿಸಿ ನಿಗಮಗಳ ಎಸ್‌ಸಿ, ಎಸ್‌ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ ಮಾತನಾಡಿ ‘ಇದು ಎಲ್ಲರೂ ಒಂದಾಗಿರಬೇಕಾದ ಕಾಲ. ಪ್ರಸಕ್ತ ಕಾಲದ ಬಿಕ್ಕಟ್ಟು ಎದುರಿಸಲು ಒಗ್ಗಟ್ಟು ಅಗತ್ಯ’ ಎಂದರು.

ಪ್ರದಾನ: ಸಮಾಜ ಸೇವಕ ಸಂತೋಷ ಆರ್‌. ಶೆಟ್ಟಿ, ಕರ್ನಾಟಕ ರಾಜ್ಯ ರೈತ ಸಂಘದ ಹುಬ್ಬಳ್ಳಿ ತಾಲ್ಲೂಕು ಘಟಕದ ಅದ್ಯಕ್ಷ ಮಹಾದೇವಪ್ಪ ಪೂಜಾರ ಹಾಗೂ ಎನ್‌ಡಬ್ಲ್ಯುಕೆಆರ್‌ಟಿಸಿ ಮುಧೋಳ ಘಟಕದಲ್ಲಿ ಸಹಾಯಕ ತಾಂತ್ರಿಕ ಅಧಿಕಾರಿಯಾಗಿರುವ ಪುಟ್ಟರಾಜ ಹೂಗಾರ ಅವರಿಗೆ ಪ್ರಸಾದ ಅಬ್ಬಯ್ಯ ‘ಸಾರಿಗೆ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು.

ಕೆಎಸ್‌ಆರ್‌ಟಿಸಿ ಎಸ್‌ಸಿ, ಎಸ್‌ಟಿ ಅಧಿಕಾರಿಗಳು ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ. ಲಘುಮಯ್ಯ, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ, ಉತ್ತರ ಕರ್ನಾಟಕ ಸಮತಾ ಸೈನಿಕ ದಳದ ಅಧ್ಯಕ್ಷ ಪಿತಾಂಬ್ರಪ್ಪ ಬಿಳಾರ, ಡಿಎಸ್‌ಎಸ್‌ ಸಂಚಾಲಕ ಶಶಿಕಾಂತ ಸಾಳ್ವೆ, ದಲಿತ ಮುಖಂಡರಾದ ವೈ.ಎಸ್‌. ದೇವೂರ, ಸಂತೋಷ ಶೆಟ್ಟಿ, ಮಹಾದೇವಿ ರಾಠೋಡ ಇದ್ದರು.

ಪ್ರತಿಕ್ರಿಯಿಸಿ (+)