ಸೋಮವಾರ, ಜೂನ್ 21, 2021
29 °C
ಜನರ ದಿಕ್ಕು ತಪ್ಪಿಸುತ್ತಿರುವ ಕಾಂಗ್ರೆಸ್: ಸಚಿವ ಜೋಶಿ

ಆರೋಪ ಬಿಟ್ಟು ಸಂಸತ್ತಲ್ಲಿ ಚರ್ಚಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್‌, ದೇಶದ ಜನರ ದಿಕ್ಕು ತಪ್ಪಿಸುತ್ತಿದೆ. ಸಾಂಕ್ರಾಮಿಕ ರೋಗದ ಕುರಿತು ಜನರನ್ನು ಆತಂಕಕ್ಕೆ ನೂಕುವ ಬದಲು, ಮುಂಬರುವ ಸಂಸತ್ ಅಧಿವೇಶನದಲ್ಲಿ ಆ ಬಗ್ಗೆ ಚರ್ಚಿಸಲಿ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೊರೊನಾ ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಎಡಪಂಥೀಯ ನಾಯಕರು ಅದಕ್ಕೆ ‘ಚೀನಾ ವೈರಸ್’ ಎಂದು ಕರೆಯಲಿಲ್ಲ. ಎರಡನೇ ಅಲೆಯನ್ನು ‘ಭಾರತದ ವೈರಸ್’ ಅಥವಾ ‘ಮೋದಿ ವೈರಸ್’ ಎಂದು ಹೆಸರಿಡಲು ಯತ್ನಿಸುತ್ತಿದ್ದಾರೆ. ಅವರ ಯಾವ ಟೀಕೆಗೂ, ಅಪಪ್ರಚಾರಕ್ಕೂ ಪ್ರಧಾನಿಯಾಗಲಿ, ಬಿಜೆಪಿ ಮುಖಂಡರಾಗಲಿ ಧೃತಿಗೆಡುವುದಿಲ್ಲ’ ಎಂದರು.

‘ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ಇಷ್ಟೊಂದು ಪ್ರಮಾಣದಲ್ಲಿ ವ್ಯಾಪಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೂ, ಕೇಂದ್ರ ಸರ್ಕಾರ ಸೋಂಕು ನಿಯಂತ್ರಿಸುವಲ್ಲಿ ತನ್ನ ಕರ್ತವ್ಯ ಹಾಗೂ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸುತ್ತಿದೆ. ಆದರೆ, ಕಾಂಗ್ರೆಸ್‌ ಉದ್ದೇಶಪೂರ್ವಕವಾಗಿ ಟೀಕೆ ಮಾಡುತ್ತ, ಜನರನ್ನು ತಪ್ಪುದಾರಿಗೆ ಎಳೆಯುತ್ತಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಜೊತೆಯಾಗಿ ನಿಂತು, ಸಲಹೆ ಸೂಚನೆ ನೀಡಿ ಸಮರ್ಥ ವಿರೋಧ ಪಕ್ಷದ ಜವಾಬ್ದಾರಿ ನಿರ್ವಹಿಸಲಿ’ ಎಂದರು.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಮುಖ್ಯಮಂತ್ರಿ ಬದಲಾವಣೆ ಮಾತು ಕೇವಲ ಊಹಾಪೋಹ. ಅದರಲ್ಲಿ ಯಾವುದೇ ಹುರುಳಿಲ್ಲ’ ಎಂದರು.

ಇದಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಲ್ಲಿ ಇಂಡಿಯಾ ಫುಡ್‌ ಬ್ಯಾಂಕಿಂಗ್‌ ನೆಟ್‌ವರ್ಕ್‌ ಸಂಸ್ಥೆ, ಗ್ರಾಮ ವಿಕಾಸ ಸೊಸೈಟಿ ಮತ್ತು ಸಾಮಾಜಿಕ ಪರಿವರ್ತನೆ ಪ್ರತಿಷ್ಠಾನ ವತಿಯಿಂದ ಕೊರೊನಾ ಸೇನಾನಿಗಳಿಗೆ ಸಾಂಕೇತಿಕವಾಗಿ ಆಹಾರದ ಕಿಟ್‌ ವಿತರಿಸಿದರು.

ಭಾರತ ವಿಕಾಸ ಸಂಸ್ಥೆ ಸಿಇಒ ಜಗದೀಶ ನಾಯಕ ಮಾತನಾಡಿ, ‘ಪ್ರತಿಯೊಂದು ಕಿಟ್‌ನಲ್ಲಿ ₹800 ಮೌಲ್ಯದ ದಿನಸಿಗಳಿವೆ. ಅವುಗಳನ್ನು ಕೊರೊನಾ ಸೇನಾನಿಗಳಿಗೆ ಹಾಗೂ ಬಡ ವರ್ಗದ ಅಂದಾಜು 3.04 ಲಕ್ಷ ಮಂದಿಗೆ ವಿತರಿಸುವ ಯೋಜನೆ ಹಾಕಿಕೊಂಡಿದ್ದೇವೆ. ಧಾರವಾಡ ಜಿಲ್ಲೆಯಲ್ಲಿರುವ 900ಕ್ಕೂ ಹೆಚ್ಚು ಕಾರ್ಯಕರ್ತರು ಅವುಗಳ ಹಂಚಿಕೆ ಮಾಡಲಿದ್ದಾರೆ’ ಎಂದು ತಿಳಿಸಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಸುರೇಶ್ ಇಟ್ನಾಳ, ಉಮೇಶ ದುಶಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು