ಬುಧವಾರ, ಜುಲೈ 6, 2022
23 °C
‘ಕವಿ ಕಾವ್ಯ ಮಂಥನ’ದಲ್ಲಿ ಮಹಾಂತಪ್ಪ ನಂದೂರ ಅಭಿಪ್ರಾಯ

ಕವಿ ಭಾಷೆ ಕಾವ್ಯವೇ ಆಗಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಕವಿಯ ಭಾಷೆ ಕಾವ್ಯವೇ ಆಗಿರಬೇಕು. ಅದು ಸೃಜನಶೀಲತೆಯಿಂದ ಇಂದ್ರಿಯಾತೀತವಾಗಿ ದಕ್ಕುವಂತಿರಬೇಕು’ ಎಂದು ಕವಿ ಮಹಾಂತಪ್ಪ ನಂದೂರ ಅಭಿಪ್ರಾಯಪಟ್ಟರು.

ಕಾಳಿದಾಸ ನಗರದ ನಾಗಸುಧೆ ಕಾವ್ಯ ಜಗಲಿಯಲ್ಲಿ ಭಾನುವಾರ ನಡೆದ ಕವಿ ಕಾವ್ಯ ಮಂಥನ ಕಾರ್ಯಕ್ರಮದಲ್ಲಿ ಕಾವ್ಯ ವಾಚಿಸಿ ಅವರು ಮಾತನಾಡಿದರು. ‘ಕವಿಯಾದವನು ಕೇವಲ ಕಣ್ಣಿಗೆ ಕಾಣುವುದಷ್ಟನ್ನೇ ಬರೆಯಬಾರದು. ಕಣ್ಣಿಗೆ ಕಾಣದ, ಅದರ ಚೌಕಟ್ಟಿನಾಚೆ ಇರುವುದನ್ನು ಅಭಿವ್ಯಕ್ತಿಗೊಳಿಸಲು ಯತ್ನಿಸಬೇಕು. ಅದುವೇ ನಿಜವಾದ ಕಾವ್ಯ ಎಂದೆನಿಸಿಕೊಳ್ಳುತ್ತದೆ’ ಎಂದರು.

‘ಕವಿಯ ಭಾವಾಭಿವ್ಯಕ್ತಿ ತೀವ್ರವಾಗಿ ಮೂಡಿಬಂದಾಗ ಚಂದದ ಕಾವ್ಯ ಹುಟ್ಟಿಕೊಳ್ಳುತ್ತದೆ. ಬರೆದ ಕವಿಗೂ, ಕೇಳುಗ ಸಹೃದಯನಿಗೂ ಆಪ್ತವಾಗುತ್ತದೆ. ಅನುಭವಾತೀತ ಸಂದರ್ಭದಲ್ಲಿ ಹೀಗೆ ಸೃಜನೆಯಾಗುವ ಕಾವ್ಯ ಗಟ್ಟಿಯಾಗಿ ನಿಲ್ಲುತ್ತದೆ. ಜೊತೆಗೆ, ತನ್ನ ಒಡಲಲ್ಲಿಯೇ ಒಂದು ಆಶಯ ಇಟ್ಟುಕೊಂಡು ಬಂದಿರುತ್ತದೆ’ ಎಂದು ಹೇಳಿದರು.

‘ಕವಿಯಾದವನು ಈ ಜಗದಲ್ಲಿರುವ ಪ್ರತಿಯೊಂದನ್ನು ತೆರೆದ ಹೃದಯದಿಂದ ನೊಡಿ ಆಸ್ವಾದಿಸುತ್ತಿರಬೇಕು. ಹೊಸ ಪದಗಳ ಪ್ರಯೋಗ ಮಾಡುತ್ತಾ, ಅನುಭವ–ಅನುಭವಾತೀತವಾಗಿ ಕಾವ್ಯ ಕಟ್ಟಬೇಕು. ಅಸಂಗತ ಸಂಗತಿಗಳ ಕಾವ್ಯಗಳೇ ಹೆಚ್ಚಾಗಿ ಹೃದಯ ಸ್ಪರ್ಶಿಯಾಗಿರುತ್ತವೆ’ ಎಂದರು.

ಕವಿ ಹಿಪ್ಪರಗಿ ಸಿದ್ದರಾಮ ಅವರು ‘ನಾನು ಮತ್ತು ನನ್ನ ಕವಿತೆ’ ವಾಚಿಸಿದರು. ಕವಿಗಳಾದ ರವಿಶಂಕರ ಗಡಿಯಪ್ಪನವರ, ನಿರ್ಮಲಾ ಶೆಟ್ಟರ, ವಿರೂಪಾಕ್ಷ ಕಟ್ಟಿಮನಿ, ಗಾಯತ್ರಿ ರವಿ, ಸರೋಜಾ ಮೇಟಿ ಇದ್ದರು. ಪ್ರಕಾಶ ಕಡಮೆ ಸ್ವಾಗತಿಸಿದರು. ಸುನಂದಾ ಕಡಮೆ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.