ಸೋಮವಾರ, ಅಕ್ಟೋಬರ್ 21, 2019
23 °C
‘ಪ್ರವಾಹ ಸಂತ್ರಸ್ತರಿಗೆ ಕೇಂದ್ರದ ಮಧ್ಯಂತರ ಪರಿಹಾರ‘

ಸಿದ್ದರಾಮಯ್ಯ ಹಳೇ ಲೆಕ್ಕ ತೆಗೆದು ನೋಡಲಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

Published:
Updated:
Prajavani

ಹುಬ್ಬಳ್ಳಿ: ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಸರ್ಕಾರ ನೀಡಿರುವ ₹1200 ಕೋಟಿ ಮಧ್ಯಂತರ ಪರಿಹಾರದ ಬಗ್ಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ‘ಸಿದ್ದರಾಮಯ್ಯ ಹಳೇ ಲೆಕ್ಕ ತೆಗೆದು ನೋಡಲಿ’ ಎಂದಿದ್ದಾರೆ.

ಜಿಲ್ಲಾ ಲೀಡ್‌ ಬ್ಯಾಂಕ್‌ ಮತ್ತು ಆಂಧ್ರಾ ಬ್ಯಾಂಕ್‌ ಜಂಟಿಯಾಗಿ ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಆಯೋಜಿಸಿದ್ದ ಗ್ರಾಹಕ ಮೇಳದ ಸಮಾರೋಪದಲ್ಲಿ ಅವರು ಮಾತನಾಡಿದರು.

‘2009–10ರಲ್ಲಿ ರಾಜ್ಯ ಸರ್ಕಾರ ಸಲ್ಲಿಸಿದ್ದ ₹7000 ಕೋಟಿ ಮನವಿಗೆ ಅಂದಿನ ಯುಪಿಎ ಸರ್ಕಾರ ಕೊಟ್ಟಿದ್ದು ₹500 ಕೋಟಿ ಮಾತ್ರ. 2011ರಲ್ಲಿ ಬರ ಮತ್ತು ಪ್ರವಾಹಕ್ಕಾಗಿ ಕೇಳಲಾಗಿದ್ದ ₹3,600 ಕೋಟಿಗೆ ಕೇಂದ್ರ ನೀಡಿದ್ದು ₹126 ಕೋಟಿ. 2012–13ರಲ್ಲಿ ಕೇಳಲಾಗಿದ್ದ ₹11 ಸಾವಿರ ಕೋಟಿಗೆ ₹397 ಕೋಟಿ ಮಾತ್ರ ನೀಡಲಾಗಿದೆ. ಸಿದ್ದರಾಮಯ್ಯ ಈ ಲೆಕ್ಕದ ಇತಿಹಾಸವನ್ನು ತೆಗೆದು ನೋಡಲಿ’ ಎಂದರು.

‘ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅನೇಕ ಬಾರಿ ಬಜೆಟ್‌ ಕೂಡ ಮಂಡಿಸಿದ್ದಾರೆ. ಅವರು ರಾಜಕಾರಣಕ್ಕಾಗಿ ಮಾತನಾಡುವುದಾದರೆ ಮಾತನಾಡಲಿ; ನಮ್ಮ ಬಳಿಯೂ ಅಂಕಿಅಂಶದ ದಾಖಲೆಗಳಿವೆ. ಚುನಾವಣೆ ಇನ್ನೂ ದೂರವಿದೆ’ ಎಂದು ಲೇವಡಿ ಮಾಡಿದರು.

‘ದೇಶದ 13 ರಾಜ್ಯಗಳಲ್ಲಿ ಏಕಕಾಲಕ್ಕೆ ಪ್ರವಾಹ ಬಂದಿರುವ ಕಾರಣ ನೆರವು ನೀಡುವುದು ತಡವಾಗಿದೆ. ಅಷ್ಟಕ್ಕೂ ರಾಜ್ಯಕ್ಕೆ ಬಂದಿರುವುದು ಇದು ಮಧ್ಯಂತರ ಪರಿಹಾರ. ಮುಂದೆ ಇನ್ನಷ್ಟು ಪರಿಹಾರ ಬರಲಿದೆ. ಸಿದ್ದರಾಮಯ್ಯ ಜವಾಬ್ದಾರಿಯಿಲ್ಲದೇ ಮಾತನಾಡುವುದು ಸರಿಯಲ್ಲ’ ಎಂದರು.

ರಾಜ್ಯಕ್ಕೆ ನೆರೆ ಪರಿಹಾರ ತರುವಲ್ಲಿ ಪಕ್ಷದ ಸಂಸದರು ಹಾಗೂ ಸಚಿವರು ವಿಫಲರಾಗಿದ್ದಾರೆ ಎಂದು ಟೀಕಿಸಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ ‘ಅವರಿಗೆ ಶೋಕಾಸ್‌ ನೀಡಲಾಗಿದ್ದು, ಪರಿಹಾರಕ್ಕೂ ಅವರ ಟೀಕೆಗೂ ಯಾವುದೇ ಸಂಬಂಧವಿಲ್ಲ’ ಎಂದರು.

₹38 ಕೋಟಿ ಸಾಲ:

‘ಎರಡು ದಿನ ನಡೆದ ಮೇಳದಲ್ಲಿ 442 ಜನರಿಗೆ ₹64 ಕೋಟಿ ಸಾಲ ಮಂಜೂರಾತಿ ಮಾಡಲಾಗಿದೆ. 250 ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ’ ಎಂದು ಲೀಡ್‌ ಬ್ಯಾಂಕ್‌ನ ವ್ಯವಸ್ಥಾಪಕ ಈಶ್ವರನಾಥ್‌ ತಿಳಿಸಿದರು.

ಆಂಧ್ರಾ ಬ್ಯಾಂಕ್ ಬೆಂಗಳೂರು ವೃತ್ತದ ಪ್ರಧಾನ ವ್ಯವಸ್ಥಾಪಕ ಡಿ. ಚಂದ್ರಮೋಹನ ರೆಡ್ಡಿ, ವಲಯ ವ್ಯವಸ್ಥಾಪಕ ಎನ್. ಶ್ರೀನಿವಾಸ ರಾವ್, ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕ್ ಅಧ್ಯಕ್ಷ ಪಿ.ಗೋಪಿಕೃಷ್ಣ, ಎಸ್‌ಬಿಐನ ಪಿಯೂಷ್‌ ಭಟ್‌, ನಬಾರ್ಡ್‍ನ ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶೀಲಾ ಭಂಡಾರ್ಕರ್, ಸಿಂಡಿಕೇಟ್ ಬ್ಯಾಂಕ್‌ನ ವಲಯ ಪ್ರಧಾನ ಶಿವಕುಮಾರ್ ಇದ್ದರು.

Post Comments (+)