ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ರಾಜ್ಯದ ಕಲೆಯೆಂದು ಘೋಷಣೆಯಾಗಲಿ

ರಂಗಮಿತ್ರರು ದಶಮಾನೋತ್ಸವ ಸಂಭ್ರಮ: ಮೋಹನ್‌ ಆಳ್ವ ಒತ್ತಾಯ
Last Updated 4 ನವೆಂಬರ್ 2019, 10:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೊಡ್ಡಾಟ, ಸಣ್ಣಾಟ, ತೊಗಲುಗೊಂಬೆ ಹೀಗೆ ಎಲ್ಲ ರೀತಿಯ ಕಲೆಗಳೂ ಯಕ್ಷಗಾನದಲ್ಲಿ ಮಿಳಿತವಾಗಿವೆ. ಆದ್ದರಿಂದ ಇದನ್ನು ರಾಜ್ಯದ ಕಲೆ ಎಂದು ಅಧಿಕೃತವಾಗಿ ಘೋಷಿಸಬೇಕು ಎಂದು ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ರಾಜ್ಯಸರ್ಕಾರವನ್ನು ಆಗ್ರಹಿಸಿದರು.

ರಂಗಮಿತ್ರರು ಸಂಘದ ದಶಮಾನೋತ್ಸವ ಅಂಗವಾಗಿ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಯಕ್ಷಗಾನ ಸಂಭ್ರಮ ಕಾರ್ಯಕ್ರಮದ ಸಮಾರೋಪದಲ್ಲಿ ‘ರಂಗ ಶಿಖರ’ ಬಿರುದು ಸ್ವೀಕರಿಸಿ ಅವರು ಮಾತನಾಡಿದರು.

‘ಸೌಂದರ್ಯ ಪ್ರಜ್ಞೆ ಹೊಂದಿದವರು ದೇಶ, ಸಾಮರಸ್ಯವನ್ನು ಪ್ರೀತಿಸುತ್ತಾರೆ. ಯಕ್ಷಗಾನವನ್ನು ನೋಡಿದರೆ ಸೌಂದರ್ಯ ಪ್ರಜ್ಞೆ ಬೆಳೆಯುತ್ತದೆ. ರಾಜ್ಯದ 24 ಜಿಲ್ಲೆಗಳಲ್ಲಿ ಈ ಕಲೆ ಸಕ್ರಿಯವಾಗಿದೆ. ಎರಡು ಸಾವಿರಕ್ಕೂ ಹೆಚ್ಚು ವೃತ್ತಿಪರ ಯಕ್ಷಗಾನ ಕಲಾವಿದರು ಇದ್ದಾರೆ. ಈ ಕಲೆಗೆ ಸಂಬಂಧಿಸಿದಂತೆ ಗುಣಮಟ್ಟದ 40ಕ್ಕೂ ಹೆಚ್ಚು ಪಿಎಚ್‌.ಡಿಗಳು ಮಂಡನೆಯಾಗಿವೆ. ವರ್ಷದಲ್ಲಿ ಸಾವಿರಾರು ಪ್ರದರ್ಶನಗಳು ನಡೆಯುತ್ತವೆ. ಆದ್ದರಿಂದ ರಾಜ್ಯ ಕಲೆಯ ಗೌರವ ನೀಡಬೇಕು’ ಎಂದು ಒತ್ತಾಯಿಸಿದರು.

‘ಯಕ್ಷಗಾನವನ್ನು ಶಾಸ್ತ್ರೀಯ ಕಲೆ ಎಂದು ಘೋಷಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದೂ ಆಗ್ರಹಿಸಿದರು.

‘ಕರಾವಳಿ ಭಾಗದಿಂದ ಬಂದು ಹುಬ್ಬಳ್ಳಿ–ಧಾರವಾಡದಲ್ಲಿ ನೆಲೆಸಿರುವ ಜನ ಇಲ್ಲಿನ ಮಣ್ಣಿನ ಗುಣ, ಸಂಸ್ಕೃತಿಗೆ ಹೊಂದಿಕೊಂಡು ಹೋಗುತ್ತಿದ್ದಾರೆ. ಇಲ್ಲಿರುವ ಜನ ‌ಉತ್ತರ ಕರ್ನಾಟಕ ಭಾಗದಲ್ಲಿ ಯಕ್ಷಗಾನದ ಕಂಪು ಪಸರಿಸುತ್ತಿದ್ದಾರೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ ‘ಕರಾವಳಿ ಭಾಗದಲ್ಲಿ ಕಾಣುವ ಸಂಸ್ಕೃತಿ ಮತ್ತು ಯಕ್ಷಗಾನದ ಸೊಬಗನ್ನು ಅವಳಿ–ನಗರದಲ್ಲಿ ನೆಲೆಸಿರುವ ಅಲ್ಲಿನ ಜನ ನಮ್ಮ ಭಾಗದ ಜನರಿಗೂ ಹಂಚುತ್ತಿದ್ದಾರೆ. ಜಗತ್ತಿನಲ್ಲಿ ಎಲ್ಲಿಯೇ ಹೋದರೂ, ಅಲ್ಲಿ ಕರಾವಳಿ ಜನ ಇದ್ದೇ ಇರುತ್ತಾರೆ. ಅವರ ಸಾಹಸ ಮನೋಭಾವ ಮೆಚ್ಚುವಂಥದ್ದು’ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ‘ಯಕ್ಷಗಾನದ ಮೂಲಕ ನಮ್ಮ ಕಲೆ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ದೊಡ್ಡ ಕೆಲಸವಾಗುತ್ತಿದೆ. ಸಿನಿಮಾ, ಟಿವಿ ಮತ್ತು ಅಂತರ್ಜಾಲದ ಭರಾಟೆಯಲ್ಲಿಯೂ ಕರಾವಳಿ ಭಾಗದ ಜನ ಈ ಕಲೆಯನ್ನು ಉಳಿಸಿಕೊಂಡಿದ್ದು ಹೆಮ್ಮೆಯ ವಿಚಾರ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಯಕ್ಷಗಾನಕ್ಕೆ ರಾಜ್ಯ ಕಲೆಯ ಗೌರವ ನೀಡಬೇಕೆನ್ನುವ ನಿಮ್ಮ ಬೇಡಿಕೆಗೆ ಸ್ಪಂದಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ಕಲೆಯ ಹಾಗೂ ಕಲಾವಿದರ ನೆರವಿಗೆ ಸರ್ಕಾರ ಯಾವಾಗಲೂ ಬದ್ಧ’ ಎಂದು ಭರವಸೆ ನೀಡಿದರು.‌

ಧರ್ಮಸ್ಥಳದ ಡಿ. ಹರ್ಷೇಂದ್ರ ಹೆಗ್ಗಡೆ ಮಾತನಾಡಿ ‘ಯಕ್ಷಗಾನ ಕಲಾವಿದರು ಕಡಿಮೆ ಓದಿದರೂ, ಪೌರಾಣಿಕ ಕಥನಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಕಲಾವಿದರೇ ನಮ್ಮ ಆಸ್ತಿ. ಕಲಾಪ್ರಿಯರು ಇಲ್ಲದಿದ್ದರೆ ಯಾವ ಕಲೆಗೂ ಉಳಿಯುವುದಿಲ್ಲ. ಆದರೆ, ಯಕ್ಷಗಾನದತ್ತ ಯುವ ಕಲಾವಿದರು ಆಸಕ್ತಿ ತೋರಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಯಕ್ಷಗಾನದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಹನುಮಗಿರಿ ಮೇಳದ ಸಂಚಾಲಕ ಟಿ. ಶ್ಯಾಮ ಭಟ್‌, ಸಾಲಿಗ್ರಾಮ ಮೇಳದ ಕಿಶನ್‌ ಹೆಗ್ಡೆ, ಕಟೀಲು ಮೇಳದ ಸಂಚಾಲಕ ಕೆ. ದೇವಿಪ್ರಸಾದ ಶೆಟ್ಟಿ, ಹುಬ್ಬಳ್ಳಿ ದ್ರಾವಿಡ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀಪತಿ ಓಕಡೆ, ಹುಬ್ಬಳ್ಳಿ–ಧಾರವಾಡ ಬಂಟರ ಸಂಘದ ಅಧ್ಯಕ್ಷ ಎಚ್‌. ದಿನೇಶ ಶೆಟ್ಟಿ, ಹವ್ಯಕ ಬ್ರಾಹ್ಮಣರ ಸಮಾಜದ ಅಧ್ಯಕ್ಷ ವಸಂತ ಎಂ. ಭಟ್‌ ಇದ್ದರು.

ಪ್ಲಾಸ್ಟಿಕ್‌ ತಿರಸ್ಕೃರಿಸಿದ ಜೋಶಿ

ವೇದಿಕೆ ಮೇಲೆ ಬಂದ ಪ್ರಹ್ಲಾದ ಜೋಶಿ ಅವರಿಗೆ ಸಂಘಟಕರು ಪ್ಲಾಸ್ಟಿಕ್‌ ಹಾಳೆಯಿರುವ ಹೂವಿನ ಗುಚ್ಛ ನೀಡಿ ಸ್ವಾಗತಿಸಲು ಮುಂದಾದರು. ಪ್ಲಾಸ್ಟಿಕ್‌ ಬಳಕೆ ನಿಷೇಧವಾಗಿರುವ ಹಿನ್ನೆಲೆಯಲ್ಲಿ ಅವರು ಹೂ ಗುಚ್ಛ ಮುಟ್ಟಲಿಲ್ಲ. ಬಳಿಕ ಹರ್ಷೇಂದ್ರ ಕುಮಾರ್‌ ದಂಪತಿಯನ್ನು ಸನ್ಮಾನಿಸುವಾಗಲೂ ಜೋಶಿ ಕೈಗೆ ಹೂ ಗುಚ್ಚ ನೀಡಲಾಯಿತು. ಆದರೆ ಅವರು ಸ್ವೀಕರಿಸದ ಕಾರಣ ಎಚ್ಚೆತ್ತ ಸಂಘಟಕರು ಗುಚ್ಚದ ಮೇಲಿದ್ದ ಪ್ಲಾಸ್ಟಿಕ್‌ ತೆಗೆದುಕೊಟ್ಟರು. ಬಳಿಕ ಅವರು ಸನ್ಮಾನಿತರಿಗೆ ಹೂಗುಚ್ಛ ನೀಡಿದರು.

‘ಸೂರ್ಯ ಚಂದ್ರರಂತೆ ಅಧ್ಯಾತ್ಮ, ಕಲೆ’

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ ‘ಅಧ್ಯಾತ್ಮ ಹಾಗೂ ಕಲೆ ಎಂಬುದು ಸೂರ್ಯ, ಚಂದ್ರರಿದ್ದಂತೆ. ಇವೆರೆಡೂ ಬೆಳಕು ನೀಡುವಂಥದ್ದು. ನಮ್ಮ ಕಲೆ ಮನಸ್ಸನ್ನು ಅರಳಿಸುತ್ತದೆ’ ಎಂದರು.

‘ಯಕ್ಷಗಾನ ಕರ್ನಾಟಕದ ಶ್ರೇಷ್ಠ ಕಲೆ, ರಾಜ್ಯವೇ ಹೆಮ್ಮೆ ಪಡುವ ಕಲೆಯಿದು. ಕಲಾ ಪೋಷಕರೆಂಬ ಬಳ್ಳಿಯಿಂದ ‌ಯಕ್ಷಗಾನದ ಹೂ ಅರಳಿದೆ’ ಎಂದು ಬಣ್ಣಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT