ಸೋಮವಾರ, ಜನವರಿ 27, 2020
17 °C

ದೂರು ವಾಪಸ್‌ ಪಡೆಯುವಂತೆ ಜೀವ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಹಿಳೆಯೊಬ್ಬರಿಗೆ ಪ್ರಜ್ಞೆ ತಪ್ಪುವ (ಮತ್ತು ಬರುವ) ಔಷಧ ಕುಡಿಸಿ, ಅತ್ಯಾಚಾರ ಎಸಗಿರುವ ಆರೋಪಿ ಅನ್ವರ್‌ಸಾಬ್‌ ವೆಂಕಾಟಾಪುರ ಅವರ ವಿರುದ್ಧ ನೀಡಿರುವ ದೂರು ವಾಪಸ್‌ ಪಡೆಯುವಂತೆ, ಮಹಿಳೆಯ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿರುವ ಎಂಟು ಮಂದಿ ವಿರುದ್ಧ ಉಪನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ತೆಗ್ಗಿಹಳ್ಳಿ ಗ್ರಾಮದ ಚಾಮಸಾಬ್‌ ಕಣವಿ, ಮೌಲಾಸಾಬ್‌ ಕಣವಿ, ಫಕ್ರುಅಲಿ ಕಣವಿ, ದಿಲ್‌ದಾರ್‌ ಕಣವಿ, ರಿಯಾಜ್‌ ಕಣವಿ, ಭಾಷಾಸಾಬ್‌ ದೇಸಳ್ಳಿ, ದಿಲಸಾದಬಾನು ಕಣವಿ, ನಗಿನಬಾನು ಕಣವಿ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

ಮಹಿಳೆ ಮನೆಗೆ ಹೋಗುತ್ತಿದ್ದ ವೇಳೆ ಆರೋಪಿತರು, ಅನ್ವರ್‌ಸಾಬ್‌ ಅವರ ವಿರುದ್ಧ ದೂರು ನೀಡಿದ್ದಕ್ಕೆ ಕೋಪಗೊಂಡು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಡೀಸೆಲ್‌ ಸುರಿದು ಅವರಿಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ದೂರನ್ನು ವಾಪಸ್‌ ಪಡೆಯದಿದ್ದರೆ, ಅವರ ಅಣ್ಣನನ್ನು ಕೊಲೆ ಮಾಡುವ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಹಿನ್ನೆಲೆ: ಅಕ್ಟೋಬರ್‌ 8ರಂದು ಕಾರ್ಮಿಕ ಮಹಿಳೆಯೊಬ್ಬರನ್ನು ಸವಣೂರಿನಿಂದ ಹುಬ್ಬಳ್ಳಿಗೆ ಅನ್ವರ್‌ಸಾಬ್‌ ಕಾರಿನಲ್ಲಿ ಕರೆದುಕೊಂಡು ಬಂದಿದ್ದನು. ಮತ್ತು ಬರುವ ಔಷಧ ಹಾಕಿರುವ ನೀರು ಕುಡಿಸಿ, ವಸತಿ ಗೃಹಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ವಿಡಿಯೊ ಚಿತ್ರಿಕರಣ ಮಾಡಿ, ಯಾರಿಗಾದರೂ ತಿಳಿಸಿದರೆ ಜೀವ ತೆಗೆಯುವ ಬೆದರಿಕೆ ಹಾಕಿದ್ದ. ನಂತರ ವಿಡಿಯೊ ಜಾಲತಾಣದಲ್ಲಿ ವೈರಲ್‌ ಮಾಡಿರುವ ಕುರಿತು ಜ. 2ರಂದು ಉಪನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬೈಕ್‌ ಡಿಕ್ಕಿ, ಮಹಿಳೆ ಸಾವು: ಇಲ್ಲಿನ ಅಮರಗೋಳದ ಈಶ್ವರ ನಗರದಲ್ಲಿ ಬುಧವಾರ ಬೈಕ್‌ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ, ಪಾದಚಾರಿ ಮೃತಪಟ್ಟಿದ್ದಾರೆ.

ಶಿವಳ್ಳಿ ಗ್ರಾಮದ ಸವಿತಾ ಶೇಖಪ್ಪ ಮುಗುದ (25) ಮೃತಪಟ್ಟವರು. ಅಮರಗೋಳದ ನಿವಾಸಿ ಜ್ಞಾನೇಶ್ವರ ಮೆಹರವಾಡೆ ಬೈಕ್‌ ಡಿಕ್ಕಿ ಹೊಡೆಸಿದಾತ. ಉತ್ತರ ಸಂಚಾರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಜ್ಞಾನೇಶ್ವರನನ್ನು ಬಂಧಿಸಲಾಗಿದೆ.

ಸಾರ್ವಜನಿಕರಿಂದ ಥಳಿತ: ಕರೆ ಮಾಡಲು ಮೊಬೈಲ್‌ ಕೇಳಿ, ಅದನ್ನು ಕಳವು ಮಾಡಲು ಯತ್ನಿಸಿದ ಆರೋಪಿಯನ್ನು ಸಾರ್ವಜನಿಕರು ಚನ್ನಮ್ಮ ವೃತ್ತದಲ್ಲಿ ಹಿಡಿದು ಥಳಿಸಿದ ಪ್ರಕರಣ ಬುಧವಾರ ನಡೆದಿದೆ.

ತಾಲ್ಲೂಕಿನ ಚನ್ನಾಪುರ ಹಳ್ಳಿಯ ಹನುಮಂತಪ್ಪ ಅವರು ಚನ್ನಮ್ಮ ವೃತ್ತದ ಈದ್ಗಾ ಮೈದಾನದ ಪಕ್ಕದ ಕಟ್ಟೆ ಮೇಲೆ ಕುಳಿತಿದ್ದರು. ಆ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ, ಮನೆಗೆ ಕರೆ ಮಾಡುವುದಾಗಿ ಹೇಳಿ ಅವರಿಂದ ಮೊಬೈಲ್‌ ಪಡೆದಿದ್ದಾನೆ. ಕರೆ ಮಾಡುವ ನೆಪದಲ್ಲಿ ಪಕ್ಕಕ್ಕೆ ಸರಿದು ಒಮ್ಮೆಲೇ ಓಡಲು ಆರಂಭಿಸಿದ್ದ. ಹನುಮಂತಪ್ಪ, ಕಳ್ಳ ಎಂದು ಕೂಗುತ್ತಿದ್ದಂತೆ, ಸಾರ್ವಜನಿಕರು ಅವನನ್ನು ಹಿಡಿದು ಥಳಿಸಿದ್ದಾರೆ. ನಂತರ ಉಪ ನಗರ ಠಾಣೆ ಪೊಲೀಸರಿಗೆ ಅವನನ್ನು ಒಪ್ಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾದ ಬಗ್ಗೆ ವರದಿಯಾಗಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು