ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಪೆಟ್ರೋಲ್‌ ಬಂಕ್‌ ಎದುರು ವಾಹನಗಳ ಸಾಲು

ಪೆಟ್ರೋಲ್‌ ಬಂಕ್‌ ಬಂದ್‌ ಇಲ್ಲ: ಶಾಂತರಾಜ್‌
Last Updated 31 ಮೇ 2022, 4:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿಪಿಸಿಎಲ್(ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿ.) ಮತ್ತು ಎಚ್‌ಪಿಸಿಎಲ್‌(ಹಿಂದೂಸ್ಥಾನ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿ.) ಕಂಪನಿಗಳ ನಿರ್ವಹಣೆಯಲ್ಲಿನ ವೈಫಲ್ಯ ಖಂಡಿಸಿ ಕೆಲವೆಡೆ ಮೇ 31ರಂದು ಪೆಟ್ರೋಲ್‌ ಬಂಕ್‌ ಬಂದ್‌ ಮಾಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ, ನಗರದ ಕೆಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಸೋಮವಾರ ವಾಹನಗಳು ಸರತಿಯಲ್ಲಿ ನಿಂತು ಪೆಟ್ರೋಲ್‌ ಹಾಕಿಸುತ್ತಿರುವ ದೃಶ್ಯಗಳು ಕಂಡು ಬಂದವು.

‘ಬಂಕ್‌ ಮಾಲೀಕರು ಅನಿರ್ದಿಷ್ಟಾವಧಿವರೆಗೆ ಮುಷ್ಕರ ನಡೆಸಲಿದ್ದಾರೆ’ ಎನ್ನುವ ಗಾಳಿ ಸುದ್ದಿ ತಿಳಿದು ನಗರದ ಬಹುತೇಕ ಪೆಟ್ರೋಲ್‌ ಬಂಕ್‌ ಕಡೆ ಸವಾರರು ಧಾವಿಸುತ್ತಿದ್ದರು. ಕೆಲವರು ಅಗತ್ಯಕ್ಕಿಂತ ಹೆಚ್ಚು ಪೆಟ್ರೋಲ್‌, ಡಿಸೇಲ್‌ ವಾಹನಗಳಿಗೆ ತುಂಬಿಸಿಕೊಂಡರೆ, ಮತ್ತೆ ಕೆಲವರು ಕ್ಯಾನ್‌ಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕೇಶ್ವಾಪುರ ಸುತ್ತ–ಮುತ್ತಲಿನ ಪೆಟ್ರೋಲ್‌ ಬಂಕ್‌ಗಳಲ್ಲಿ ‘ಪೆಟ್ರೋಲ್‌, ಡಿಸೇಲ್‌ ನೋ ಸ್ಟಾಕ್‌’ ಬೋರ್ಡ್‌ ಹಾಕಲಾಗಿತ್ತು. ಸವಾರರು ಪರಿಚಯದವರಿಗೆ ದೂರವಾಣಿ ಕರೆ ಮಾಡಿ ಪೆಟ್ರೋಲ್‌ ಬಂಕ್‌ ತೆರೆದಿರುವ ಹಾಗೂ ಸ್ಟಾಕ್‌ ಇರುವ ಬಗ್ಗೆ ಮಾಹಿತಿ ನೀಡುತ್ತಿದ್ದರು.

ಬಂದ್‌ ಕುರಿತು ಪ್ರತಿಕ್ರಿಯಿಸಿದ ಪೆಟ್ರೋಲಿಯಂ ಅಸೋಸಿಯೇಷನ್ಸ್‌ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಶಾಂತರಾಜ ಪೋಳ, ‘ಕೆಲವೆಡೆ ಮೇ 31ರಂದು ಪೆಟ್ರೋಲ್‌ ಬಂಕ್‌ ಬಂದ್‌ ಮಾಡಲು ನಿರ್ಧರಿಸಿದ್ದಾರೆ. ಆದರೆ, ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಬಂದ್‌ ಮಾಡುವುದಿಲ್ಲ’ ಎಂದರು.

ಎರಡು–ಮೂರು ದಿನಗಳ ಹಿಂದೆ ಖರೀದಿಸಿದ ಡಿಸೇಲ್‌ ಖಾಲಿಯಾಗಿರುವುದರಿಂದ, ಕೆಲವು ಬಂಕ್‌ಗಳಲ್ಲಿ ನೋ ಸ್ಟಾಕ್‌ ಬೋರ್ಡ್‌ ಹಾಕಲಾಗಿದೆ. ಹಗಲಿನ ವೇಳೆ ಟ್ಯಾಂಕರ್‌ಗಳಿಗೆ ನಗರ ಪ್ರವೇಶ ಇಲ್ಲದಿರುವುದರಿಂದ, ಅವು ಹೊಲವಲಯದಲ್ಲಿವೆ. ರಾತ್ರಿ ವೇಳೆ ತೈಲ ಪೂರೈಕೆ ಮಾಡಲಿವೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿಮೆ ಮಾಡಿರುವುದರಿಂದ ಬಂಕ್ ಮಾಲೀಕರು ನಷ್ಟ ಅನುಭವಿಸುವಂತಾಗಿದೆ. ಬಂಕ್‌ ಬಂದ್‌ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುವುದಿಲ್ಲ. ಸರ್ಕಾರವನ್ನೇ ಒತ್ತಾಯಿಸುತ್ತೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT