ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ: ‘ಸಮಾಜದ ಪ್ರತಿಬಿಂಬ ಸಾಹಿತ್ಯ‘

ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಮೋಹನ ಲಿಂಬಿಕಾಯಿ ಅಭಿಪ್ರಾಯ
Last Updated 31 ಜನವರಿ 2021, 13:02 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಸಾಹಿತ್ಯ ಸಮಾಜದ ಪ್ರತಿಬಿಂಬ. ಸಮಾಜವನ್ನು ತಿದ್ದುವ ಶಕ್ತಿ ಸಾಹಿತ್ಯಕ್ಕಿದೆ. ಸಮಕಾಲೀನ ಸಮಸ್ಯೆಗಳ ಬಗ್ಗೆಯೂ ಸಾಹಿತಿ ಗಮನ ಸೆಳೆದಾಗ, ಆತ ಜನರಿಗೆ ಹತ್ತಿರವಾಗುತ್ತಾನೆ’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಅಭಿಪ್ರಾಯಟ್ಟರು.

ನಗರದಲ್ಲಿ ಭಾನುವಾರ ನಡೆದ ಧಾರವಾಡ ಜಿಲ್ಲಾ 9ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸಮಾಜ ತನ್ನಿಂದ ಏನನ್ನು ಬಯಸುತ್ತದೆ ಎಂಬ ಅರಿವು ಸಾಹಿತಿಗೆ ಇರಬೇಕು. ಆಗ ಮಾತ್ರ ಪರಿಣಾಮಕಾರಿಯಾದ ಸಾಹಿತ್ಯ ರಚನೆ ಸಾಧ್ಯ. ಜನರನ್ನು ಬೇಗನೆ ತಲುಪಬಹುದಾದ ಸಾಹಿತ್ಯದ ಪ್ರಕಾರಗಳಲ್ಲಿ ಚುಟುಕು ಸಾಹಿತ್ಯವೂ ಒಂದು’ ಎಂದರು.

‘ತಂತ್ರಜ್ಞಾನ ಬೆಳೆದಂತೆ ಸಾಹಿತ್ಯ ರಚನೆಯೂ ವಾಣಿಜ್ಯೀಕರಣಗೊಂಡಿದೆ. ಓದುವ ಹವ್ಯಾಸ ಕಡಿಮೆಯಾಗುತ್ತಿದ್ದು, ಸಾಹಿತ್ಯ ಕ್ಷೇತ್ರದ ಬೆಳವಣಿಗೆಯು ಕುಂಠಿತಗೊಳ್ಳುತ್ತಿದೆ. ಸಮ್ಮೇಳನದ ಅವಧಿಯಲ್ಲಿ ಮಾತ್ರ ಸಾಹಿತ್ಯ ನೆನಪಾಗುವ ಸ್ಥಿತಿ ಬಂದಿದೆ. ಸರ್ಕಾರಿ ಸಮ್ಮೇಳನಕ್ಕೆ ಪರ್ಯಾಯವಾದ ಸಮ್ಮೇಳನಗಳು ನಡೆಯುವ ಜತೆಗೆ, ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪರಿಷತ್ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ, ‘ಸರ್ಕಾರದ ಅನುದಾನ ಇಲ್ಲದೆ ಪ‍ರಿಷತ್ ಹತ್ತು ವರ್ಷಗಳಿಂದ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. 450ಸಕ್ರಿಯ ಸದಸ್ಯರನ್ನು ಒಳಗೊಂಡಿದೆ. ಇದುವರೆಗೆ ರಾಜ್ಯ ಮಟ್ಟದ ಒಂಬತ್ತು ಸಮ್ಮೇಳನಗಳನ್ನು ಆಯೋಜಿಸಿದೆ. ಮಂತ್ರಾಲಯ, ಗೋವಾ, ಬಿಚ್ಚೋಲಿ ಸೇರಿದಂತೆ ಹೊರ ರಾಜ್ಯಗಳಲ್ಲಿ ಪರಿಷತ್ ಕನ್ನಡದ ಕಂಪನ್ನು ಪಸರಿಸಿದೆ’ ಎಂದು ಪರಿಷತ್ ಚಟುವಟಕೆ ಕುರಿತು ಗಮನ ಸೆಳೆದರು.

‘ಸಮಾಜದ ಋಣ ತೀರಿಸಬೇಕು’: ಸಮ್ಮೇಳನದ ಅಧ್ಯಕ್ಷೆ ಮಂಜುಳಾ ಡಿ. ಕುಲಕರ್ಣಿ ಮಾತನಾಡಿ, ‘ಸಮಾಜದ ಋಣ ಎಲ್ಲರ ಮೇಲೂ ಇದೆ. ನಾವು ಯಾವುದೇ ಕ್ಷೇತ್ರದಲ್ಲಿದ್ದರೂ ಸಮಾಜದ ಋಣ ತೀರಿಸುವುದು ಆದ್ಯ ಕರ್ತವ್ಯ. ಅದರಂತೆ, ಚುಟುಕುಗಳಿಂದ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡೋಣ’ ಎಂದು ಕರೆ ನೀಡಿದರು.

‘ಇತ್ತೀಚೆಗೆ ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಮೌಲ್ಯಗಳು ನಶಿಸುತ್ತಿವೆ. ಗೊತ್ತು ಗುರಿ ಇಲ್ಲದಂತೆ ಬೆಳೆಯುತ್ತಿರುವ ಯುವ ಜನಾಂಗಕ್ಕೆ ಸಂಸ್ಕಾರ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಹೆಣ್ಣು ಮಕ್ಕಳು ಉದ್ಯಮ ಸ್ಥಾಪನೆಯತ್ತ ಹೆಚ್ಚಿನ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ವಿಚಾರಗೋಷ್ಠಿಯಲ್ಲಿ ಸಾಹಿತಿ ಪ್ರೊ.ಎಸ್‌.ವಿ. ಪಟ್ಟಣಶೆಟ್ಟಿ, ವೀರನಗೌಡ ಮರೀಗೌಡ್ರ, ರಾಧಾಬಾಯಿ ಮುಂಡಗೋಡ, ಎಸ್‌.ಐ. ನೇಕಾರ, ಸುನೀತಾ ಹುಬಳೀಕರ, ವೀರೇಶ ಕುಬಸದ ಭಾಗವಹಿಸಿದ್ದರು. ಕವಿಗೋಷ್ಠಿ ಮತ್ತು ಸಮಾರೋಪದಲ್ಲಿ ನಿವೃತ್ತ ನ್ಯಾಯಾಧೀಶ ಎಚ್‌.ಎಸ್. ಮಿಟ್ಟಲಕೊಡ, ಆರ್‌.ಎಂ. ಗೋಗೇರಿ ಭಾಗವಹಿಸಿದ್ದರು. ಕವಿಗಳಿಂದ ಕವನ ವಾಚನ ನಡೆಯಿತು. ಕೃಷ್ಣಮೂರ್ತಿ ಕುಲಕರ್ಣಿ ಸಮ್ಮೇಳನದ ನಿರ್ಣಯಗಳನ್ನು ಮಂಡಿಸಿದರು. ಡಾ.ಎಂ.ಎಚ್. ಹುಲ್ಲೋಳಿ ಸಮಾರೋಪ ನುಡಿಗಳನ್ನಾಡಿದರು.

ಶಿಕ್ಷಣ ಕ್ಷೇತ್ರದ ಜೀವಮಾನ ಸಾಧನೆಗಾಗಿ ಕನಕದಾಸ ಶಿಕ್ಷಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ಉಪಾಧ್ಯಕ್ಷ ಶಾಂತಣ್ಣ ಕಡಿವಾಳ, ಗೀತಾ ಕಡಿವಾಳ, ಶಕುಂತಲಾ ದಂಡಿನ, ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ರು, ಶಂಕರ ಕುಂಬಿ, ಡಾ.ಎಚ್‌.ಎ. ಬೆಳಗಲಿ, ಡಾ. ಪ್ರಲ್ಹಾದ ಗೆಜ್ಜಿ, ಅನಂತ ಕುಲಕರ್ಣಿ, ರಾಮು ಮೂಲಗಿ, ಶಾಲಿನಿ ರುದ್ರಮುನಿ ಇದ್ದರು. ಶಾಂತಾ ಬಡಿಗೇರ ಪ್ರಾರ್ಥನೆ ಹಾಡಿದರು. ಡಾ. ಸರ್ವಮಂಗಳಾ ಕುದರಿ ನಿರೂಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT