ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ₹ 500 ಕೋಟಿ ಸಾಲ: ಆರ್‌.ವಿ. ದೇಶಪಾಂಡೆ

ಶುಕ್ರವಾರ, ಏಪ್ರಿಲ್ 19, 2019
22 °C
ಬಿಜೆಪಿ ಆಡಳಿತದಿಂದ ಹೆಚ್ಚಿದ ನಿರುದ್ಯೋಗದ ಪ್ರಮಾಣ

ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ₹ 500 ಕೋಟಿ ಸಾಲ: ಆರ್‌.ವಿ. ದೇಶಪಾಂಡೆ

Published:
Updated:
Prajavani

ಹುಬ್ಬಳ್ಳಿ: ‘ನರೇಗಾ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ವೇತನ ನೀಡಲು ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ₹ 500 ಕೋಟಿ ಸಾಲ ನೀಡಿದೆ. ಇದು ಕೇಂದ್ರದ ದುರಾಡಳಿತದ ವೈಖರಿ’ ಎಂದು ಸಚಿವ ಆರ್.ವಿ. ದೇಶಪಾಂಡೆ ಟೀಕಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಶೇ 2.1ರಷ್ಟಿದ್ದ ನಿರುದ್ಯೋಗದ ಪ್ರಮಾಣ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಶೇ 6.1ಕ್ಕೆ ಏರಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ’ ಎಂದು ದೂರಿದರು.

‘ಬಿಜೆಪಿ ಸರ್ಕಾರ ರೈತರು, ಕೂಲಿ ಕಾರ್ಮಿಕರನ್ನು ನಿರ್ಲಕ್ಷ್ಯಿಸಿದೆ. ಮನಮೋಹನ್‌ ಸಿಂಗ್ ಪ್ರಧಾನಿಯಾಗಿದ್ದಾಗ ₹ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದರು. ರಾಜ್ಯದಲ್ಲಿ ಸಿದ್ದರಾಮಯ್ಯ ಕೂಡ ಸಾಲಮನ್ನಾ ಮಾಡಿದ್ದಾರೆ. ರೈತರಿಗೆ ₹ 3 ಲಕ್ಷದ ತನಕ ಬಡ್ಡಿರಹಿತ ಸಾಲ ನೀಡಿದ್ದೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

‘ಇಷ್ಟು ವರ್ಷ ಆಡಳಿತ ಮಾಡಿದರೂ ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಟೀಕಿಸುವ ಬಿಜೆಪಿಯವರು ನಮ್ಮ ಯೋಜನೆಗಳನ್ನೇ ಮುಂದುವರಿಸಿದ್ದಾರೆ. ಕೋಟ್ಯಂತರ ಜನರಿಗೆ ಮೂಲ ಸೌಕರ್ಯ, ಗೌರವಯುತವಾಗಿ ಬದುಕಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಹಿಂದಿನ ನಮ್ಮ ಸರ್ಕಾರ ಕೊಟ್ಟಿದೆ. ಬಿಜೆಪಿಯವರು ಇದನ್ನೆಲ್ಲ ಮುಚ್ಚಿಟ್ಟು ಸತ್ಯಕ್ಕೆ ದೂರವಾದ ವಿಷಯ ಪ್ರಚಾರ ಮಾಡಿ ಜನರನ್ನು ನಂಬಿಸುತ್ತಿದ್ದಾರೆ' ಎಂದೂ ಆರೋಪಿಸಿದರು.

ಹಣದ ಮುಂದೆ ಗುಣ ಗೌಣ: ಕೆಲ ವರ್ಷಗಳ ಹಿಂದೆ ಚುನಾವಣೆಯಲ್ಲಿ ವ್ಯಕ್ತಿಯ ಗುಣ, ಆತನ ಚಾರಿತ್ರ್ಯಕ್ಕೆ ಬೆಲೆ ನೀಡಿ ಮತ ಹಾಕಲಾಗುತ್ತಿತ್ತು. ಆದರೆ, ಈಗ ರಾಜಕೀಯ ಪ್ರಭಾವ, ಜಾತಿ ಮತ್ತು ಹಣವೇ ಮುಖ್ಯವಾಗುತ್ತಿದೆ ಎಂದು ದೇಶಪಾಂಡೆ ವಿಷಾದಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಉತ್ತಮ ಬೆಳವಣಿಗೆ ಅಲ್ಲ. ಆದ್ದರಿಂದ ಚುನಾವಣಾ ಆಯೋಗವೇ ಚಿಂತಿಸಬೇಕು. ಆಗ ಮಾತ್ರ ಸಾಮಾನ್ಯ ಜನ ಕೂಡ ಚುನಾವಣೆಯತ್ತ ಆಸಕ್ತಿಯಿಂದ ನೋಡಲು ಸಾಧ್ಯ’ ಎಂದರು.

ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅನಿಲಕುಮಾರ ಪಾಟೀಲ, ಕಾಂಗ್ರೆಸ್ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಶಾಸಕ ಪ್ರಸಾದ ಅಬ್ಬಯ್ಯ, ಮುಖಂಡರಾದ ಸದಾನಂದ ಡಂಗವರ ಇದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 6

  Angry

Comments:

0 comments

Write the first review for this !