ಸೋಮವಾರ, ಜೂನ್ 14, 2021
20 °C
ಪರಿಹಾರ ಪ್ಯಾಕೇಜ್, ಉಚಿತ ಆಹಾರ–ಧಾನ್ಯ ವಿತರಣೆಗೆ ಒತ್ತಾಯ

ಲಾಕ್‌ಡೌನ್: ಕಾರ್ಮಿಕರಿಗೆ ಸ್ಪಂದಿಸಲು ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್ –19 ಎರಡನೇ ಅಲೆ ತಡೆಯಲು ಸರ್ಕಾರ ಘೋಷಿಸಿರುವ ಲಾಕ್‌ಡೌನ್‌ನಿಂದಾಗಿ ತೊಂದರೆ ಅನುಭವಿಸಲಿರುವ ಕಾರ್ಮಿಕರ ಕಷ್ಟಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಸಿಐಟಿಯು ಜಿಲ್ಲಾ ಘಟಕ ಸರ್ಕಾರಕ್ಕೆ ಮನವಿ ಮಾಡಿದೆ.

ಈ ಕುರಿತು ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ನಗರ ತಹಶೀಲ್ದಾರ್ ಕಚೇರಿ ಅಧಿಕಾರಿಗೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಹುಬ್ಬಳ್ಳಿ–ಧಾರವಾಡ ಬೀದಿ ಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಅಮೃತ ಇಜಾರಿ ಹಾಗೂ ಹಮಾಲಿ ಕಾರ್ಮಿಕರ ಒಕ್ಕೂಟದ ಜಂಟಿ ಕಾರ್ಯದರ್ಶಿ ಮಂಜುನಾಥ ಹುಜರಾತಿ ಮಂಗಳವಾರ ಸಲ್ಲಿಸಿದರು.

‘ಕೋವಿಡ್ ಸೇವೆಗಳಿಗಾಗಿ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ವೈದ್ಯಕೀಯ ಹಾಗು ವೈದ್ಯಕೇತರ ಸಿಬ್ಬಂದಿಗೆ ಸೂಕ್ತ ವೇತನ, ಪ್ರೋತ್ಸಾಹಧನ ಹಾಗೂ ವಿಮೆ ಸೌಲಭ್ಯ ನೀಡಬೇಕು. ಸ್ಮಶಾನ ಕಾರ್ಮಿಕರು, ಪಂಚಾಯ್ತಿ ನೌಕರರು, ಮುನಿಸಿಪಾಲಿಟಿಯ ಗುತ್ತಿಗೆ ಕಾರ್ಮಿಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಹಾಗೂ ಸ್ಕೀಂ ನೌಕರರಿಗೂ ವಿಮೆ ಸೌಲಭ್ಯ ವಿಸ್ತರಿಸಬೇಕು. ಕರ್ತವ್ಯ ನಿರ್ವಹಣೆಗೆ ಸುರಕ್ಷಾ ಸಾಧನಗಳನ್ನು ಪೂರೈಸಬೇಕು. ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸರ್ಕಾರವೇ ವ್ಯವಸ್ಥೆ ಮಾಡಬೇಕು. ಚಿತಾಗಾರಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಬಾಕಿ ವೇತನವನ್ನು ಪಾವತಿಸಬೇಕು’ ಒತ್ತಾಯಿಸಿದ್ದಾರೆ.

‘ಖಾಸಗಿ ಹಾಗೂ ಸರ್ಕಾರಿ ವಲಯದ ಖಾಯಂ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಕೋವಿಡ್ ದೃಢಪಟ್ಟರೆ, ಚಿಕಿತ್ಸೆಗಾಗಿ ವೇತನ ಸಹಿತ ರಜೆ ಸೌಲಭ್ಯ ನೀಡುವ ಕುರಿತು ಆದೇಶ ಹೊರಡಿಸಬೇಕು. ಕಾರ್ಖಾನೆ ಮಾಲೀಕರು ಕಾರ್ಮಿಕರ ವೇತನ ಕಡಿತ ಮಾಡುವುದು, ಕೆಲಸದಿಂದ ವಜಾ ಮಾಡುವುದು, ಲೇ-ಆಫ್ ಘೋಷಿಸುವಂತಹ ಕ್ರಮಗಳನ್ನು ಕೈಗೊಳ್ಳದಂತೆ ಸೂಚನೆ ನೀಡಬೇಕು’ ಎಂದಿದ್ದಾರೆ.

‘ಲಾಕ್‌ಡೌನ್‌ನಿಂದ ನಿತ್ಯದ ದುಡಿಮೆ ಕಳೆದುಕೊಳ್ಳುವ ಆಟೊ ಮತ್ತು ಟ್ಯಾಕ್ಸಿ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಮನೆ ಕೆಲಸಗಾರರು, ವಾಣಿಜ್ಯ ಸಂಕಿರ್ಣ, ಅಂಗಡಿಗಳಲ್ಲಿ ಕೆಲಸ ಮಾಡುವರು, ಕಟ್ಟಡ ಕಾರ್ಮಿಕರು, ಹಮಾಲಿಗಳು ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ₹10 ಸಾವಿರ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು. ವಾರ್ಷಿಕ ₹5 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಪ್ರತಿ ಕುಟುಂಬಕ್ಕೂ ಈ ಪರಿಹಾರ ನೀಡಬೇಕು. ಬಡ ಕುಟುಂಬಗಳಿಗೆ ಉಚಿತವಾಗಿ ಆಹಾರ ಮತ್ತು ಧಾನ್ಯ ವಿತರಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು