ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ನಷ್ಟ: 2.14 ಲಕ್ಷ ಮಂದಿಗಷ್ಟೇ ಪರಿಹಾರ ಭಾಗ್ಯ

ಆಟೊ, ಟ್ಯಾಕ್ಸಿ ಚಾಲಕರಿಗೆ ₹5 ಸಾವಿರ ಘೋಷಿಸಿದ್ದ ಸರ್ಕಾರ
Last Updated 15 ಸೆಪ್ಟೆಂಬರ್ 2020, 2:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾದ ಆಟೊ ಮತ್ತು ಟ್ಯಾಕ್ಸಿ ಚಾಲಕರಿಗೆ ರಾಜ್ಯ ಸರ್ಕಾರ ಘೋಷಿಸಿದ್ದ ₹5 ಸಾವಿರ ನೆರವಿನ ಲಾಭ ಸಿಕ್ಕಿರುವುದು ರಾಜ್ಯದಾದ್ಯಂತ ಕೇವಲ 2.14 ಲಕ್ಷ ಮಂದಿಗಷ್ಟೆ!‌

ದುಡಿಮೆ ಇಲ್ಲದೆ ಕಂಗಾಲಾಗಿದ್ದ ಚಾಲಕರಿಗೆ ಸರ್ಕಾರ ಮೇ ತಿಂಗಳಲ್ಲಿ ನೆರವು ಘೋಷಿಸಿತ್ತು. ಇದರಿಂದ 7.75 ಲಕ್ಷ ಮಂದಿಗೆ ಪ್ರಯೋಜನವಾಗಲಿದೆ ಎಂದು ಅಂದಾಜಿಸಲಾಗಿತ್ತು.

ನೆರವಿಗಾಗಿ ಸೇವಾಸಿಂಧು ಪೋರ್ಟಲ್‌ನಲ್ಲಿ ಜುಲೈ 31ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಒಟ್ಟು 2.45 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 1.22 ಲಕ್ಷ ಆಟೊ ಚಾಲಕರು ಹಾಗೂ 1.03 ಲಕ್ಷ ಟ್ಯಾಕ್ಸಿ ಚಾಲಕರು ಅರ್ಜಿ ಸಲ್ಲಿಸಿದ್ದರು.

18 ಲಕ್ಷ ಚಾಲಕರಿದ್ದಾರೆ!

‘ರಾಜ್ಯದಲ್ಲಿ ಅಂದಾಜು 18 ಲಕ್ಷ ಆಟೊ ಮತ್ತು ಟ್ಯಾಕ್ಸಿ ಚಾಲಕರಿದ್ದಾರೆ. ಆದರೆ, ಅರ್ಜಿ ಸಲ್ಲಿಸಿದವರ ಸಂಖ್ಯೆ ಕೇವಲ 2.45 ಲಕ್ಷ. ಚಾಲಕರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಇದು ತೀರಾ ಕಡಿಮೆಯೇ‘ ಎಂದು ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಎಲ್. ಹೇಮಂತ ಕುಮಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಇದಕ್ಕೆ ಪ್ರಮುಖ ಕಾರಣ ಬಹುತೇಕ ಚಾಲಕರು ಪರವಾನಗಿ, ಬ್ಯಾಡ್ಜ್ ಹೊಂದುವುದು ಸೇರಿದಂತೆ ವಾಹನದ ಸೂಕ್ತ ದಾಖಲೆಗಳನ್ನು ಹೊಂದಿಲ್ಲ. ಸೂಕ್ತ ದಾಖಲೆಗಳಿಲ್ಲದ 31,359 ಅರ್ಜಿಗಳು ಸೇವಾಸಿಂಧು ಪೋರ್ಟಲ್‌ನಲ್ಲಿ ತಿರಸ್ಕೃತಗೊಂಡಿವೆ’ ಎಂದು ತಿಳಿಸಿದರು.

‘ಅನಕ್ಷರತೆಯ ಕಾರಣಕ್ಕಾಗಿ ಎಷ್ಟೊ ಚಾಲಕರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಿರುವಾಗ, ಏಳೂ ಮುಕ್ಕಾಲು ಲಕ್ಷ ಚಾಲಕರಿಗೆ ಹೇಗೆ ನೆರವು ಸಿಗಲು ಸಾಧ್ಯ. ನಮಗೆ ಘೋಷಿಸುವ ಎಲ್ಲಾ ನೆರವುಗಳು ಇದೇ ರೀತಿ ಆಗುತ್ತಿವೆ. ಕೆಲವರಿಗಷ್ಟೇ ಪ್ರಯೋಜನ ಸಿಗುತ್ತಿದೆ’ ಎಂದು ಹುಬ್ಬಳ್ಳಿಯ ಆಟೊ ರಿಕ್ಷಾ ಮಾಲೀಕರು ಮತ್ತು ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಪುಂಡಲೀಕ ಬಂಡಿಗೇರ ಬೇಸರ ವ್ಯಕ್ತಪಡಿಸಿದರು.

‘ಅಗತ್ಯವಿದ್ದವರಿಗೆ ನೆರವು ಸಿಕ್ಕಿಲ್ಲ’

‘ಆಟೊ ಮತ್ತು ಟ್ಯಾಕ್ಸಿ ಮಾಲೀಕರ ಸಂಖ್ಯೆಯಷ್ಟೇ, ಅದನ್ನು ಬಾಡಿಗೆಗೆ ಪಡೆದು ಓಡಿಸುವರ ಸಂಖ್ಯೆಯೂ ಹೆಚ್ಚಾಗಿದೆ. ಲಾಕ್‌ಡೌನ್‌ನಿಂದಾಗಿ ನಿಜವಾಗಿಯೂ ಸಂಕಷ್ಟಕ್ಕೊಳಗಾದವರು ಇವರೇ. ಆದರೆ, ಕಠಿಣ ನಿಯಮಗಳಿಂದಾಗಿ ಅಗತ್ಯವಿರುವವರಿಗೆ ನೆರವು ಸಿಗಲಿಲ್ಲ’ ಎಂದು ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದರು.

’ಕಷ್ಟದಲ್ಲಿದ್ದವರಿಗೆ ನೆರವು ನೀಡುವಾಗ ನಿಯಮಗಳನ್ನು ಸರಳೀಕರಿಸಬೇಕು. ಆಗ ಅದು ಹೆಚ್ಚು ಜನರನ್ನು ತಲುಪುತ್ತದೆ. ಈ ಬಗ್ಗೆ ಸಚಿವರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ’ ಎಂದರು.

ಜಿಲ್ಲಾವಾರು ಸ್ವೀಕೃತಿದ ಅರ್ಜಿಗಳು

ಜಿಲ್ಲೆ; ಅರ್ಜಿಗಳು

ಬೆಂಗಳೂರು ನಗರ; 98,699

ದಕ್ಷಿಣ ಕನ್ನಡ; 17,021

ಮೈಸೂರು; 14,631

ತುಮಕೂರು; 12,560

ಮಂಡ್ಯ; 9,199

ಹಾಸನ; 7,597

ಉಡುಪಿ; 7,882

ಕಲಬುರ್ಗಿ; 5,760

ಬೆಳಗಾವಿ; 5,563

ರಾಮನಗರ; 5,427

ದಾವಣಗೆರೆ; 5,197

ಶಿವಮೊಗ್ಗ; 5,047

ಚಿತ್ರದುರ್ಗ; 4,987

ಉತ್ತರ ಕನ್ನಡ; 4,935

ಬೆಂಗಳೂರು ಗ್ರಾಮಾಂತರ; 4,910

ಚಿಕ್ಕಮಗಳೂರು; 3,915

ಕೋಲಾರ; 3,691

ಧಾರವಾಡ; 3,536

ಕೊಡಗು; 3,506

ಬಳ್ಳಾರಿ; 3,162

ವಿಜಯಪುರ; 3,212

ಚಿಕ್ಕಬಳ್ಳಾಪುರ; 2,891

ಹಾವೇರಿ; 1,931

ರಾಯಚೂರು; 1,835

ಚಾಮರಾಜನಗರ; 1,807

ಬಾಗಲಕೋಟೆ; 1,735

ಬೀದರ್; 1,678

ಕೊಪ್ಪಳ; 1,285

ಯಾದಗಿರಿ; 1,183

ಗದಗ; 1,113

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT