ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡಾವಣೆ ರಸ್ತೆಗಳಲ್ಲಿ ಲಾರಿ ಸಂಚಾರ!

ಸಂಚಾರ ಠಾಣೆಗಳಲ್ಲಿ ‘ಸಂಚಾರ ಸಂಪರ್ಕ ದಿವಸ’
Last Updated 11 ಜೂನ್ 2022, 13:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹು–ಧಾ ಕಮಿಷನರೇಟ್‌ನ ಪೂರ್ವ, ಉತ್ತರ, ದಕ್ಷಿಣ ಮತ್ತು ಪಶ್ಚಿಮ ಸಂಚಾರ ಪೊಲೀಸ್‌ ಠಾಣೆಯಲ್ಲಿ ಶನಿವಾರ ಇದೇ ಮೊದಲ ಬಾರಿಗೆ ‘ಸಂಚಾರ ಸಂಪರ್ಕ ದಿವಸ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ವಿವಿಧ ಬಡಾವಣೆಗಳ ಸಾರ್ವಜನಿಕರು ಭೇಟಿ ನೀಡಿ ಪೊಲೀಸ್‌ ಅಧಿಕಾರಿಗಳೊಂದಿಗೆ ಸಂಚಾರ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಉಪ ಮೇಯರ್‌ ಉಮಾ ಮುಕುಂದ, ಕಮಿಷನರ್‌ ಲಾಭೂರಾಮ್, ಎಸಿಪಿ ಪಿ.ಜಿ. ದೊಡ್ಡಮನಿ, ಇನ್‌ಸ್ಪೆಕ್ಟರ್‌ ಎನ್‌.ಸಿ. ಕಾಡದೇವರಮಠ ಇದ್ದರು.

ಪೂರ್ವ ಸಂಚಾರ ಠಾಣೆ: ಅರಿಹಂತ ನಗರ, ಬದಾಮಿ ನಗರ, ನವೀನ ಪಾರ್ಕ್‌ ಸೇರಿದಂತೆ ಕೇಶ್ವಾಪುರದ ವಿವಿಧ ಬಡಾವಣೆಗಳು ಜನವಸತಿ ಪ್ರದೇಶವಾಗಿದ್ದು, ಅಲ್ಲಿರುವ ರಸ್ತೆಗಳಲ್ಲಿ ಸರಕು ತುಂಬಿದ ಲಾರಿಗಳ ಸಂಚಾರ ಹೆಚ್ಚುತ್ತಿವೆ. ಮನೆಯಿಂದ ಹೊರಗೆ ಬರಲು ಆತಂಕ ಪಡುವಂತಾಗಿದೆ. ಅದಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರು ವಿನಂತಿಸಿದರು.

ಮಾರುಕಟ್ಟೆ ಪ್ರದೇಶಗಳಾದ ದಾಜೀಬಾನಪೇಟೆ, ದುರ್ಗದ ಬೈಲ್‌, ಸಿಬಿಟಿ, ಸ್ಟೇಷನ್‌ ರಸ್ತೆಗಳ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ರಸ್ತೆ ಕಿರಿದಾಗಿ ವಾಹನಗಳ ಸಂಚಾರಕ್ಕೆ ಅಡೆತಡೆಯಾಗುತ್ತಿವೆ. ಸ್ಟೇಷನ್‌ ರಸ್ತೆ ಹಾಗೂ ದಾಜೀಬಾನ್‌ ಪೇಟೆಯಲ್ಲಿ ಈ ಸಮಸ್ಯೆ ಹೆಚ್ಚಿದ್ದು, ಬೆಳಿಗ್ಗೆ 10ರಿಂದ ಸಂಜೆ 7ರವರೆಗೂ ವಾಹನ ದಟ್ಟಣೆ ಇರುತ್ತದೆ. ಒಂದು ಬದಿ ಮಾತ್ರ ವಾಹನ ನಿಲುಗಡೆಗೆ ಅವಕಾಶ ನೀಡಬೇಕು ಎಂದು ಪೂರ್ವ ಸಂಚಾರ ಠಾಣೆ ಪೊಲೀಸರಿಗೆ ಸಾರ್ವಜನಿಕರು ಸಲಹೆ ನೀಡಿದರು.

ಉತ್ತರ ಸಂಚಾರ ಠಾಣೆ: ರಾಜ್ಯದಲ್ಲಿಯೇ ಮಾದರಿಯಾದಂತಹ ಟೆಂಡರ್‌ ಶ್ಯೂರ್‌ ರಸ್ತೆಯನ್ನು ಶಿರೂರ್‌ ಪಾರ್ಕ್‌ನಲ್ಲಿ ನಿರ್ಮಿಸಿದ್ದು, ವಾಹನ ನಿಲುಗಡೆಗೆ ಸ್ಥಳವಿಲ್ಲದ್ದರಿಂದ ಸಂಜೆ ವೇಳೆ ಆ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗುತ್ತದೆ. ವಾಹನ ನಿಲುಗಡೆಗೆ ಸೂಕ್ತ ಸ್ಥಳ ಕಲ್ಪಿಸಬೇಕು ಎಂದು ಸಾರ್ವಜನಿಕರು ವಿನಂತಿಸಿದರು.

ಹುಬ್ಬಳ್ಳಿ ಆಟೊ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ‘ಮೇಲ್ಸೇತುವೆ ಕಾಮಗಾರಿಯನ್ನು ಹಂತ ಹಂತವಾಗಿ ನಡೆಸದೇ ಇರುವುದರಿಂದ, ಸಾರ್ವಜನಿಕರಿಗೆ ಓಡಾಡಲು ರಸ್ತೆಯೇ ಇಲ್ಲದಂತಾಗಿದೆ. ತಾತ್ಕಾಲಿಕವಾಗಿಯಾದರೂ ಪ್ರತ್ಯೇಕ ರಸ್ತೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು. ಸೂಕ್ತ ಸ್ಥಳಗಳಲ್ಲಿ ಆಟೊ ನಿಲ್ದಾಣ ನಿರ್ಮಿಸಿಕೊಡಬೇಕು’ ಎಂದು ವಿನಂತಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್‌ ಲಾಭೂರಾಮ್‌, ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೇಲ್ಸೇತುವೆ ಕಾಮಗಾರಿ ನಡೆಸಲು ಸಂಬಂಧಿಸಿದವರಿಗೆ ತಿಳಿಸಲಾಗುವುದು. ಆಟೊ ಚಾಲಕರು ಗ್ರಾಹಕರಿಂದ ಹೆಚ್ಚಿಗೆ ಹಣ ಪಡೆಯುತ್ತಿರುವ ಮಾಹಿತಿಯಿದ್ದು, ಮೀಟರ್‌ ಅಳವಡಿಸಿಕೊಳ್ಳಲು ಮುಂದಾಗಬೇಕು’ ಎಂದು ಸೂಚಿಸಿದರು.

ಮುರಳಿ ಇಂಗಳಹಳ್ಳಿ, ಗಂಗಾಧರ ಹಳ್ಳಿ, ಗೋಪಾಲ ಸಿಂಗಳಹಳ್ಳಿ, ದಾವಲಸಾಬ್‌ ಕುರಹಟ್ಟಿ ಇದ್ದರು.

‘ಪ್ರತಿ ತಿಂಗಳು 2ನೇ ಶನಿವಾರ ಕಾರ್ಯಕ್ರಮ’:

‘ಹು–ಧಾ ಕಮಿಷನರೇಟ್‌ನಲ್ಲಿ ಮೊದಲ ಬಾರಿಗೆ ಸಂಚಾರ ಸಂಪರ್ಕ ದಿವಸ ಆಯೋಜಿಸಿದ್ದು, ಸಾರ್ವಜನಿಕರ ಕುಂದು–ಕೊರತೆ ಆಲಿಸಿ, ಪರಿಹಾರ ನೀಡಬಹುದಾದ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲಾಗಿದೆ. ಸಾರ್ವಜನಿಕರು ಸಹ ಸಾಕಷ್ಟು ಸಲಹೆ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಅಳವಡಿಸಿಕೊಂಡಿರುವ ಈ ಕಾರ್ಯಕ್ರಮವನ್ನು ಇಲ್ಲಿಯೂ ಪ್ರತಿ ತಿಂಗಳು ಎರಡನೇ ಶನಿವಾರ ನಡೆಸಲಾಗುವುದು’ ಎಂದು ಪೊಲೀಸ್‌ ಕಮಿಷನರ್‌ ಲಾಭೂರಾಮ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT