ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆ ಸ್ವೀಕರಿಸದ್ದಕ್ಕೆ ವಿಷ ಕುಡಿದ ಪ್ರೇಯಸಿ; ನೇಣು ಹಾಕಿಕೊಂಡ ಪ್ರಿಯಕರ

ವಿವಾಹದಲ್ಲಿ ಒಂದಾಗಬೇಕಿದ್ದ ಪ್ರೇಮಿಗಳು ಸಾವಿನ ಮನೆ ಸೇರಿದರು
Last Updated 28 ನವೆಂಬರ್ 2019, 9:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೇವಲ ಐದು ತಿಂಗಳ ಹಿಂದೆಯಷ್ಟೇ ಅವರಿಬ್ಬರಿಗೂ ವಿವಾಹ ನಿಶ್ಚಿತಾರ್ಥವಾಗಿತ್ತು. ಸುಂದರ ಬದುಕಿನ ಕನಸು ಹೊತ್ತಿದ್ದ ಆ ಜೋಡಿ, ವಿವಾಹ ಬಂಧನಕ್ಕೆ ಒಳಗಾಗುವ ಮುಂಚೆಯೇ ಸಾವಿನ ಮನೆ ಸೇರಿದ್ದಾರೆ. ಇಷ್ಟಕ್ಕೂ ಅವರಿಬ್ಬರ ಆತ್ಮಹತ್ಯೆಗೆ ಕಾರಣವಾಗಿದ್ದು, ಮೊಬೈಲ್ ಕರೆ ಸ್ವೀಕರಿಸಲಿಲ್ಲ ಎಂಬ ಸಣ್ಣ ವಿಚಾರ.

ನಗರದ ಬಂಡಿ ಮಹಾಕಾಳಿನಗರದ ರೇಖಾ ಪೂಜಾರ (19) ಹಾಗೂ ಕರ್ಕಿ ಬಸವೇಶ್ವರನಗರದ ವಿಷ್ಣು ಪಗಲಾಪುರ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು.

ಅಕ್ಕಪಕ್ಕದ ಬಡಾವಣೆಗಳ ವಾಸಿಸುತ್ತಿದ್ದ ಇಬ್ಬರೂ, ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಎರಡೂ ಕುಟುಂಬದ ಹಿರಿಯರು ಮೂರು ತಿಂಗಳ ಹಿಂದೆಯಷ್ಟೇ ಇಬ್ಬರಿಗೂ ಮದುವೆ ನಿಶ್ಚಿತಾರ್ಥ ಮಾಡಿದ್ದರು. ಜನವರಿಯಲ್ಲಿ ಮದುವೆ ದಿನಾಂಕ ನಿಗದಿಪಡಿಸಲು ನಿರ್ಧರಿಸಿದ್ದರು.‌

ಇಬ್ಬರೂ ನಿತ್ಯ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರು. ನ. 27ರಂದು ಮಧ್ಯಾಹ್ನ ರೇಖಾ ಅವರು, ವಿಷ್ಣುವಿಗೆ ಮೂರ್ನಾಲ್ಕು ಸಲ ಕರೆ ಮಾಡಿದ್ದಾರೆ. ಆದರೆ, ಆತ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಬೇಸತ್ತ ರೇಖಾ, ವಿಷ ಕುಡಿದಿದ್ದಾರೆ. ಕೂಡಲೇ ಮನೆಯವರು ಆಕೆಯನ್ನು ಕಿಮ್ಸ್‌ಗೆ ಕರೆ ತಂದಿದ್ದಾರೆ ಎಂದು ಬೆಂಡಿಗೇರಿ ಠಾಣೆ ಪೊಲೀಸರು ತಿಳಿಸಿದರು.

‘ವಿಷಯ ತಿಳಿದು ಆಸ್ಪತ್ರೆಗೆ ಬಂದ ವಿಷ್ಣು, ರಾತ್ರಿಯಿಡೀ ಆಕೆಯ ಜತೆಗಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದ ರೇಖಾ ಗುರುವಾರ ಬೆಳಿಗ್ಗೆ 5.40ಕ್ಕೆ ಕೊನೆಯುಸಿರೆಳೆದಿದ್ದಾರೆ. ಮೃತದೇಹವನ್ನು ಶವಾಗಾರಕ್ಕೆ ಸಾಗಿಸುವವರೆಗೆ ಅಲ್ಲೇ ಇದ್ದ ವಿಷ್ಣು, 6.30ರ ಹೊತ್ತಿಗೆ ಅಜ್ಜಿ ಮನೆಗೆ ಬಂದಿದ್ದಾರೆ. ಬಳಿಕ, ತನ್ನ ಮನೆಗೆ ಹೋಗಿ ತಾಯಿ ಮತ್ತು ಅಕ್ಕ–ತಂಗಿಯರನ್ನು ಮಾತನಾಡಿಸಿದ್ದಾರೆ’ ಎಂದು ಹೇಳಿದರು.

ಎಲ್ಲರೂ ಹೊರಗಡೆ ಇದ್ದಾಗ ಚಿಲಕ ಹಾಕಿಕೊಂಡು ಗಂಟೆ ಸುಮಾರಿಗೆ ನೇಣಿಗೆ ಶರಣಾಗಿದ್ದಾನೆ. ಇದೇ ವೇಳೆ, ಮನೆಗೆ ಬಂದ ತಮ್ಮ ಸಾಗರ ಪಗಲಾಪುರ, ಮನೆ ಬಾಗಿಲು ಬಡಿದರೂ ಯಾರೂ ತೆಗೆದಿಲ್ಲ. ಬಳಿಕ, ಮನೆಯೊಳಗೆ ಯಾರಿದ್ದಾರೆ ಕಿಟಕಿ ಮೂಲಕ ಇಣುಕು ನೋಡಿದ್ದಾಗ, ಅಣ್ಣ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆತ, ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾನೆ ಎಂದು ಮಾಹಿತಿ ನೀಡಿದರು.ಸೆಟ್ಲ್‌ಮೆಂಟ್ ಪ್ರದೇಶದಲ್ಲಿರುವ ಸ್ಮಶಾನದಲ್ಲಿ ಇಬ್ಬರ ಅಂತ್ಯಕ್ರಿಯೆ ಒಟ್ಟಿಗೆ ನೆರವೇರಿತು.

ದುಃಖದ ಮಡುವಿನಲ್ಲಿ ಕುಟುಂಬ

ಕಿಮ್ಸ್‌ ಶವಾಗಾರದ ಬಳಿ ವಿಷ್ಣು ಮತ್ತು ರೇಖಾ ಕುಟುಂಬದವರ ರೋದನ ಮುಗಿಲು ಮುಟ್ಟಿತ್ತು. ಆಸ್ಪತ್ರೆ ಬಳಿ ಎರಡೂ ಮನೆಯವರ ಸಂಬಂಧಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಸುರೇಶ ಪಗಲಾಪುರ ಹಾಗೂ ದೇವಕ್ಕ ಪಗಲಾಪುರ ಅವರ ನಾಲ್ವರು ಮಕ್ಕಳ ಪೈಕಿ, ವಿಷ್ಣು ಹಿರಿಯನಾಗಿದ್ದ. ತಂದೆ–ತಾಯಿ ಇಬ್ಬರೂ ಕೂಲಿ ಮಾಡುತ್ತಾರೆ. ಮಹಾನಗರ ಪಾಲಿಕೆಯ ತ್ಯಾಜ್ಯ ಸಾಗಿಸುವ ವಾಹನದ ಗುತ್ತಿಗೆ ಚಾಲಕನಾಗಿ, ನಾಲ್ಕು ವರ್ಷದಿಂದ ಕೆಲಸ ಮಾಡುತ್ತಿದ್ದ ಆತ, ಕುಟುಂಬಕ್ಕೆ ಆಧಾರವಾಗಿದ್ದ. ಶಾರದಾ ಪೂಜಾರ ಅವರ ಇಬ್ಬರು ಪುತ್ರಿಯರ ಪೈಕಿ ಹಿರಿಯವರಾದ ರೇಖಾ, ನಿಶ್ಚಿತಾರ್ಥವಾದ ಬಳಿಕ ಮನೆಯಲ್ಲೇ ಇದ್ದರು.

‘ಆಸ್ಪತ್ರೆಯಿಂದ ಬೆಳಿಗ್ಗೆ ಮನೆಗೆ ಬಂದ ವಿಷ್ಣು, ರೇಖಾ ತೀರಿಕೊಂಡಿರುವ ವಿಷಯ ತಿಳಿಸಿದ. ತುಂಬಾ ದುಃಖದಲ್ಲಿದ್ದ ಆತನನ್ನು ಸಮಾಧಾನಪಡಿಸಿದ್ದೆವು. ಬಳಿಕ, ತಾಯಿ ಹಾಗೂ ಅಕ್ಕ–ತಂಗಿಯರ ಜತೆಗೂ ಮಾತನಾಡಿದ್ದ. ಇದಾದ ಕೆಲ ಹೊತ್ತಿನಲ್ಲೇ, ಆತ ನೇಣು ಹಾಕಿಕೊಂಡಿರುವ ವಿಷಯ ಕೇಳಿ ಶಾಕ್ ಆದೆವು. ಈಗಿನ ಕಾಲದ ಮಕ್ಕಳು, ಸಣ್ಣ ವಿಷಯಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದರೆ ಭಯವಾಗುತ್ತದೆ’ ಎಂದು ವಿಷ್ಣು ಅಜ್ಜ ಬಸಪ್ಪ ಮಾದಾರ ಹಾಗೂ ಚಿಕ್ಕಪ್ಪ ಸಿದ್ದಪ್ಪ ಕಣ್ಣೀರಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT