ಭಾನುವಾರ, ಫೆಬ್ರವರಿ 28, 2021
31 °C
ಸಂಕಷ್ಟದಲ್ಲಿ ಖಾದಿ ಗ್ರಾಮೋದ್ಯೋಗ; ಸರ್ಕಾರದಿಂದ ಬಿಡುಗಡೆಯಾಗದ ಪ್ರೋತ್ಸಾಹಧನ

ಧ್ವಜಕ್ಕೆ ಬೇಡಿಕೆ ಕುಸಿತ; ಸಂಬಳಕ್ಕೂ ಪರದಾಟ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ತ್ರಿವರ್ಣ ಧ್ವಜ ತಯಾರಿಸುವ ಇಲ್ಲಿನ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ರಾಷ್ಟ್ರಧ್ವಜಗಳ ಮಾರಾಟ ತೀವ್ರ ಕುಸಿದಿದೆ. ಕಾರ್ಮಿಕರಿಗೆ ಸಂಬಳ ನೀಡುವುದಕ್ಕೂ ಪರದಾಡುವಂತಹ ಸ್ಥಿತಿಗೆ ಕೇಂದ್ರ ತಲುಪಿದೆ.

ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇಂದ್ರಕ್ಕೆ ಪ್ರತಿ ವರ್ಷ ಬರುತ್ತಿದ್ದ ಬೇಡಿಕೆಗಿಂತ ಈ ಬಾರಿ ಶೇ 60ರಷ್ಟು ಕುಸಿತ ಕಂಡಿದೆ. ಇತ್ತ ಬೇಡಿಕೆಯೂ ಇಲ್ಲದೆ, ಅತ್ತ ಸರ್ಕಾರದಿಂದ ಬರಬೇಕಾದ ಪ್ರೋತ್ಸಾಹಧನವೂ ಬಿಡುಗಡೆಯಾಗದೆ ಗ್ರಾಮೋದ್ಯೊಗ ಉದ್ಯಮ ಸಂಕಷ್ಟದಕ್ಕೆ ಸಿಲುಕಿದೆ

‘2020ರಲ್ಲಿ ಗಣರಾಜ್ಯೋತ್ಸವದಂದು ₹1.85 ಕೋಟಿ ಮೊತ್ತದ ಧ್ವಜಗಳು ಮಾರಾಟವಾಗಿದ್ದವು. ಈ ಸಲ ಕೇವಲ ₹87 ಲಕ್ಷದ ಉತ್ಪನ್ನಗಳಷ್ಟೇ ಮಾರಾಟವಾಗಿವೆ. ಕೊರೊನಾದಿಂದಾಗಿ ದೇಶದಾದ್ಯಂತ ಶಾಲಾ–ಕಾಲೇಜುಗಳು ಬಂದ್ ಆಗಿದ್ದರಿಂದ ಹಾಗೂ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರೀಯ ಹಬ್ಬಗಳ ಸರಳ ಆಚರಣೆಗೆ ಒತ್ತು ನೀಡುತ್ತಿರುವುದರಿಂದ ಬೇಡಿಕೆ ತಗ್ಗಿದೆ’ ಎಂದು ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಸ್ಥೆಯ ಕಾರ್ಯದರ್ಶಿ ಶಿವಾನಂದ ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಾರಾಟದ ಹಣದಿಂದಲೇ ಇಲ್ಲಿ ಕೆಲಸ ಮಾಡುವ ಹೊಲಿಗೆ ಕಾರ್ಮಿಕರಿಗೆ ಸಂಬಳ ನೀಡಬೇಕಿದೆ. ಬೇಡಿಕೆ ಕುಸಿದಿದ್ದರಿಂದ ನಿಗದಿತ ಅವಧಿಯಲ್ಲಿ ಕಾರ್ಮಿಕರಿಗೆ ಸಂಬಳ ನೀಡುವುದು ಕಷ್ಟವಾಗಿದೆ. ವಾರಕ್ಕೊಮ್ಮೆ ನೀಡುವ ಸಂಬಳವನ್ನೂ ತಿಂಗಳವರೆಗೆ ಬಾಕಿ ಉಳಿಸಿಕೊಳ್ಳುವ ಸ್ಥಿತಿ ಬಂದಿದೆ’ ಎಂದು ಪರಿಸ್ಥಿತಿಯನ್ನು ವಿವರಿಸಿದರು.

ಹಿಂದೆಂದೂ ವಿಳಂಬವಾಗಿರಲಿಲ್ಲ: ‘ಇಲ್ಲಿರುವ ಕಾರ್ಮಿಕರಲ್ಲಿ ಮಹಿಳೆಯರೇ ಹೆಚ್ಚು. ಎಲ್ಲರೂ ಕನಿಷ್ಠ ಹದಿನೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಈ ಅವಧಿಯಲ್ಲಿ ಒಮ್ಮೆಯೂ ಸಂಬಳ ಪಾವತಿ ವಿಳಂಬವಾಗಿರಲಿಲ್ಲ’ ಎಂದು ಹೊಲಿಗೆ ಕಾರ್ಮಿಕರಾದ ರಿಯಾನ ಬಳ್ಳಾರಿ ಹೇಳಿದರು.

‘ಪೀಸ್ ಆಧಾರದ ಮೇಲೆ ಕೆಲಸ ಮಾಡುವ ನಾವು ದಿನಕ್ಕೆ ₹300ರಿಂದ ₹350ರವರೆಗೆ ಸಂಪಾದಿಸುತ್ತೇವೆ. ವಾರಕ್ಕೊಮ್ಮೆ ನಮ್ಮ ಬ್ಯಾಂಕ್ ಖಾತೆಗೆ ಸಂಬಳ ಪಾವತಿಯಾಗುತ್ತದೆ. ಬೇಡಿಕೆ ಕುಸಿತದಿಂದಾಗಿ ಉದ್ಯಮ ಸಂಕಷ್ಟದಲ್ಲಿದೆ. ಮುಂದೆ ಎಲ್ಲವೂ ಸರಿ ಹೋಗಲಿದೆ ಎಂಬ ನಂಬಿಕೆಯಿಂದ ಸಂಬಳ ತಡವಾದರೂ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ’ ಎಂದು ರಾಜೇಶ್ವರಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಡುಗಡೆಯಾಗದ ಪ್ರೋತ್ಸಾಹ ಧನ: ‘‌ನಮ್ಮ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಮೂರು ವರ್ಷವಾದರೂ ಎಂಡಿಎ (ಮ್ಯಾನ್ಯುಫ್ಯಾಕ್ಚರರ್ಸ್ ಡೆವಲ್‌ಮೆಂಟ್ ಅಸಿಸ್ಟೆನ್ಸ್‌) ಮತ್ತು ನೂಲು ಉತ್ಪಾದಕರ ಪ್ರೋತ್ಸಾಹಧನ ₹3 ಕೋಟಿ ಬಂದಿಲ್ಲ. ಇಡೀ ಜಿಲ್ಲೆಗೆ ಬರಬೇಕಾದ ಮೊತ್ತ ಅಂದಾಜು ₹10 ಕೋಟಿ ಇದೆ. ಕೊರೊನಾದಿಂದಾಗಿ ಲಾಕ್‌ಡೌನ್ ಘೋಷಣೆಯಾಗಿದ್ದಾಗಲೂ ಖಾದಿ ಗ್ರಾಮೋದ್ಯೋಗದ ನೇಕಾರರ ನೆರವಿಗೆ ಸರ್ಕಾರ ಬರಲಿಲ್ಲ. ಈಗಲಾದರೂ ಬಾಕಿ ಮೊತ್ತ ಬಿಡುಗಡೆ ಮಾಡಿದರೆ, ಸಂಕಷ್ಟದಲ್ಲಿರುವ ಉದ್ಯಮ ಚೇತರಿಸಿಕೊಳ್ಳುತ್ತದೆ’ ಎಂದು ಶಿವಾನಂದ ಮಠಪತಿ ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು