ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ ಪೂರೈಕೆ ವ್ಯತ್ಯಯ: ಹುಬ್ಬಳ್ಳಿ–ಧಾರವಾಡದಲ್ಲಿ ಗ್ರಾಹಕರ ಪರದಾಟ

Last Updated 16 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಳೆ, ಪ್ರವಾಹ ನಿಂತರೂ ಅದರಿಂದ ತಲೆದೋರಿರುವ ಅವಾಂತರಗಳು ಮಾತ್ರ ಇನ್ನೂ ನಿಂತಿಲ್ಲ. ಪ್ರಮುಖ ಹೆದ್ದಾರಿಗಳು ಹದಗೆಟ್ಟಿರುವುದರಿಂದ ಎರಡು ವಾರಗಳಿಂದ ಅಡುಗೆ ಅನಿಲ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಅವಳಿ ನಗರದಲ್ಲಿ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಎಚ್‌ಪಿಸಿಎಲ್‌) ಮತ್ತು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌(ಬಿಪಿಸಿಎಲ್‌)ಗೆ ಸಂಬಂಧಿಸಿದ ಅಡುಗೆ ಅನಿಲ ವಿತರಕರಿಗೆ ಬೆಳಗಾವಿ ಮತ್ತು ಮಂಗಳೂರಿನಿಂದ ಅಗತ್ಯಕ್ಕೆ ತಕ್ಕಷ್ಟು ಸಿಲಿಂಡರ್‌ಗಳು ನಿಗದಿತ ಸಮಯಕ್ಕೆ ಪೂರೈಕೆಯಾಗದೇ ಸಮಸ್ಯೆ ಎದುರಾಗಿದೆ.

ಗ್ರಾಹಕರು ಎನಿ ಟೈಂ ನಂಬರ್‌ಗಳಿಗೆ ಕರೆ ಮಾಡಿ ಅಡುಗೆ ಅನಿಲ ಸಿಲಿಂಡರ್‌ ಬುಕ್‌ ಮಾಡಿ ಎರಡು, ಮೂರು ವಾರವಾದರೂ ಸಿಲಿಂಡರ್‌ ಪೂರೈಕೆಯಾಗದೇ ಇರುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಬುಕ್‌ ಮಾಡಿರುವ ಗ್ರಾಹಕರು ಎನಿ ಟೈಂ ನಂಬರ್‌ಗೆ ಕರೆ ಮಾಡಿ ವಿಚಾರಿಸಿದರೆ ಶೀಘ್ರದಲ್ಲೇ ಪೂರೈಕೆ ಮಾಡಲಾಗುವುದು ಎಂಬ ಸಂದೇಶ ಬರುತ್ತಿದೆ. ಈ ಕುರಿತು ವಿಚಾರಿಸಲು ಗ್ಯಾಸ್‌ ಏಜೆನ್ಸಿಗಳ ಸ್ಥಿರ ದೂರವಾಣಿಗೆ ಗ್ರಾಹಕರು ಕರೆ ಮಾಡಿದರೆ ಯಾರೊಬ್ಬರೂ ಸ್ವೀಕರಿಸುತ್ತಿಲ್ಲ. ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

‘ಭಾರೀ ಮಳೆ ಮತ್ತು ನೆರೆಯಿಂದ ಪ್ರಮುಖ ರಸ್ತೆಗಳ ಸಂಪರ್ಕ ಕಡಿತವಾಗಿರುವುದರಿಂದ ನಗರಕ್ಕೆ ಅಡುಗೆ ಅನಿಲ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ. ಒಂದೊಂದು ಏಜೆನ್ಸಿಗೆ ಎರಡು, ಮೂರು ದಿನಕ್ಕೊಂದು ಲೋಡ್‌ ಮಾತ್ರ ಪೂರೈಕೆಯಾಗುತ್ತಿದೆ. ಹೀಗಾಗಿ ಗ್ರಾಹಕರಿಗೆ ನಿಗದಿತ ಅವಧಿಯಲ್ಲಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಹೊಸೂರಿನಲ್ಲಿರುವ ರೇಣುಕಾ ಎಚ್‌ಪಿ ಗ್ಯಾಸ್‌ ಏಜೆನ್ಸಿ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ವಾರದಲ್ಲಿ ಸಮಸ್ಯೆ ನಿವಾರಣೆ:‌ಮಳೆ, ಪ್ರವಾಹದಿಂದ ಬೆಳಗಾವಿ ಮತ್ತು ಮಂಗಳೂರು ರಸ್ತೆ ಸಂಪರ್ಕ ಕಡಿತವಾಗಿರುವುದರಿಂದ ಟ್ರಕ್ಕುಗಳ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಾಗಿ ಅಡುಗೆ ಅನಿಲ ಪೂರೈಕೆಯಲ್ಲಿ ತೊಂದರೆಯಾಗಿದೆ. ಇನ್ನೊಂದು ವಾರದಲ್ಲಿ ಸಮಸ್ಯೆ ನಿವಾರಣೆಯಾಗಲಿದೆ ಎಂದು ಎಚ್‌ಪಿಸಿಎಲ್‌ನ ಮಾರಾಟ ಅಧಿಕಾರಿ ಸುಬ್ರಹ್ಮಣ್ಯ ತಿಳಿಸಿದ್ದಾರೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಸದಾಶಿವ ಮಿರ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವಾರ ಭಾರೀ ಮಳೆ ಸುರಿದು ರಸ್ತೆ ಸಂಪರ್ಕ ಕಡಿತವಾದಾಗ ಪೆಟ್ರೋಲಿಯಂ ಉತ್ಪನ್ನಗಳ ಕೊರತೆಯಾಗಲಿದೆ ಎಂಬ ಸುದ್ದಿ ಹರಡಿದ ಕಾರಣ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಒಮ್ಮೆಲೆ ಬುಕ್‌ ಮಾಡಿದ್ದರು. ಹೀಗಾಗಿ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT