ಗುರುವಾರ , ಸೆಪ್ಟೆಂಬರ್ 19, 2019
22 °C

ಮುಂದುವರಿದ ಕಟ್ಟಡ ದುರಂತ ಪ್ರಕರಣ ವಿಚಾರಣೆ

Published:
Updated:
Prajavani

ಧಾರವಾಡ: ಇಲ್ಲಿನ ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ಕುಸಿತ ಪ್ರಕರಣದ ಮ್ಯಾಜಿಸ್ಟ್ರೀಯಲ್‌ ವಿಚಾರಣೆ ಬುಧವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಂಗಣದಲ್ಲಿ ಮುಂದುವರಿಯಿತು. 

ಬೆಳಿಗ್ಗೆ 11 ಕ್ಕೆ ಆರಂಭವಾದ ವಿಚಾರಣೆಯಲ್ಲಿ ಜಿಲ್ಲಾ ಸರ್ಜನ್‌ ಸೇರಿದಂತೆ 16 ಜನ ವೈದ್ಯರ ವಿಚಾರಣೆ ನಡೆಸಿ, ಅವರ ಹೇಳಿಕೆಗಳನ್ನು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್‌ ದಾಖಲಿಸಿಕೊಂಡರು. ಜತೆಗೆ ನರ್ಸ್‌, ಡಿ–ದರ್ಜೆ ಸಿಬ್ಬಂದಿ ಹೇಳಿಕೆಗಳನ್ನು ದಾಖಲಿಸಲಾಯಿತು. ಮಧ್ಯಾಹ್ನದವರೆಗೆ ನಡೆದ ವಿಚಾರಣೆಯಲ್ಲಿ ಒಟ್ಟು 45 ಜನ ಜಿಲ್ಲಾ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು. 

ಹೇಳಿಕೆ ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಸಮರ್ಪಕ ಉತ್ತರ ನೀಡದ ವೈದ್ಯರು ಮತ್ತು ಸಿಬ್ಬಂದಿ ನಡವಳಿಕೆ ಕುರಿತು ಜಿಲ್ಲಾ ದಂಡಾಧಿಕಾರಿಗಳು ಅತೃಪ್ತಿ ವ್ಯಕ್ತಪಡಿಸಿದರು. ಕಳೆದ ಮಾರ್ಚ್ 19 ರಂದು ಘಟನೆ ನಡೆದಿದ್ದು, ಐದು ದಿನಗಳವರೆಗೆ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಆ ದಿನಗಳಲ್ಲಿ ನೀವು ಮಾಡಿದ ಕೆಲಸ, ನೀಡಿದ ಚಿಕಿತ್ಸೆ, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡಿದ್ದರೆ ಆ ಕುರಿತು ನಿಖರ ಮಾಹಿತಿ ಒದಗಿಸಿ, ಮಾಹಿತಿ ಕುರಿತು ಗೊಂದಲವಿದ್ದರೆ ದಾಖಲೆಗಳನ್ನು ಪರಿಶೀಲಿಸಿ ಹೇಳಿಕೆ ನೀಡಿ ಎಂದು ಸೂಚಿಸಿದರು. 

ಹಿಂದಿನ ವಿಚಾರಣೆ ಸಂದರ್ಭದಲ್ಲಿ ಘಟನೆಯಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು, ಗಾಯಗೊಂಡವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿತ್ತು. 

Post Comments (+)