‘ಮಹಾ’ ಸಂಭ್ರಮ ಸಾಗರ ಉಕ್ಕಿ ಹರಿಯಿತು

7
ಹೋರಾಟದ ನೋವು ತೂರಿದ ಬಣ್ಣದಲ್ಲಿ ಲೀನ: ‘ನಮ್ಮ ನೀರು ನಮ್ಮ ಹಕ್ಕು’ ಘೋಷಣೆ ಅನುರಣನ

‘ಮಹಾ’ ಸಂಭ್ರಮ ಸಾಗರ ಉಕ್ಕಿ ಹರಿಯಿತು

Published:
Updated:
Deccan Herald

ಹುಬ್ಬಳ್ಳಿ: ಹಕ್ಕಿನ ನೀರನ್ನು ಪಡೆದೇ ತೀರುವ ಛಲದೊಂದಿಗೆ ನಿರಂತರ ಸಾವಿರಕ್ಕೂ ಹೆಚ್ಚು ದಿನಗಳ ಕಾಲ ಹೋರಾಟ ನಡೆಸಿದ ರೈತರು ನ್ಯಾಯಮಂಡಳಿ ತೀರ್ಪನ್ನು ಸ್ವಾಗತಿಸಿ, ಸಂಭ್ರಮಿಸಿದರು. ನಿಗದಿತ ದಿನಾಂಕದ ಮೊದಲೇ ಬಂದ, ಸಿಹಿ ತಂದ ತೀರ್ಪು ರೈತರ ಮೊಗದಲ್ಲಿ ಬೆಳ್ಳಿ ಗೆರೆ ಮೂಡಿಸಿತು. ಹೋರಾಟದ ದಿನಗಳಲ್ಲಿ ಅನುಭವಿಸಿದ ಕಷ್ಟ–ನಷ್ಟಗಳ ನೆನಪು ಆಕಾಶಕ್ಕೆ ತೂರಿದ ಬಣ್ಣಗಳಲ್ಲಿ ಲೀನವಾಯಿತು. ‘ನಮ್ಮ ನೀರು ನಮಗೆ ಬಂತು’ ಘೋಷಣೆ ಅನುರಣಿಸಿತು.

ನ್ಯಾಯಮಂಡಳಿ ಅವಧಿ ಇದೇ ಆಗಸ್ಟ್ 20ಕ್ಕೆ ಕೊನೆಯಾಗಲಿದ್ದು, ಅಂದೇ ತೀರ್ಪು ಹೊರಬೀಳಬಹುದೆಂಬ ನಿರೀಕ್ಷೆ ಇತ್ತು. ಬೆವರು– ರಕ್ತದ ಹೋರಾಟ, ಲಾಠಿ ಏಟಿಗೆ ಮೈಯೊಡ್ಡಿದ ಸಮರ್ಪಣೆಗೆ ಫಲ ಬೇಡುವ ದಿನ ಹತ್ತಿರವಾಗುತ್ತಿದ್ದಂತೆ ಮಹದಾಯಿ, ಕಳಸಾ ಬಂಡೂರಿ ಯೋಜನಾ ವ್ಯಾಪ್ತಿಯ ಹೋರಾಟಗಾರರಲ್ಲಿ ತಳಮಳ ಆರಂಭವಾಗಿತ್ತು. ಪರವಾಗಿ ಬಂದರೆ ಏನು ಮಾಡಬೇಕು, ಒಂದು ವೇಳೆ ವ್ಯತಿರಿಕ್ತ ಬಂದರೆ ಮುಂದಿನ ಹಾದಿ ಏನು ಎಂಬ ಲೆಕ್ಕಚಾರದಲ್ಲಿ ಮುಳುಗಿದ್ದ ಹೊತ್ತಿನಲ್ಲಿಯೇ ಬಹು ದಿನದ ಕನಸೊಂದು ನನಸಾಗಿ ಕಣ್ಮುಂದೆ ಬಂದಂತಾಯಿತು.

ಸಂಜೆ ನಾಲ್ಕು ಗಂಟೆ ಹೊತ್ತಿಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ರೈತರ ಹೋರಾಟಗಾರರ ಉತ್ಸಾಹ ಮೇರೆ ಮೀರಿತು. ಹುಬ್ಬಳ್ಳಿಯ ಪ್ರವಾಸಿ ಮಂದಿರದಲ್ಲಿ ಬುಧವಾರ ಬೆಳಿಗ್ಗೆ ಸಭೆ ಸೇರಿದ್ದ ಹೋರಾಟಗಾರರು ಸಾಧಕ– ಬಾಧಕದ ಬಗ್ಗೆ ಚರ್ಚೆ ನಡೆಸಿ, ಇದೇ 16ರಂದು ಬೃಹತ್ ಸಮಾವೇಶ ನಡೆಸಲು ನಿರ್ಧರಿಸಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ನೀರಿನ ಹಂಚಿಕೆ ಮಾಹಿತಿ ಸಿಗುತ್ತಿದ್ದಂತೆ ಹೊರಗೆ ಬಂದು ಕುಣಿದು ಕುಪ್ಪಳಿಸಿದರು.

ಆ ನಂತರ ಸಂಭ್ರಮಾಚರಣೆ ಚನ್ನಮ್ಮ ವೃತ್ತಕ್ಕೆ ವರ್ಗಾವಣೆಯಾಯಿತು. ಹತ್ತಾರು ಸಂಘಟನೆಗಳ ನೂರಾರು ಮಂದಿ ಜಮಾಯಿಸಿದ್ದರು. ‘ನ್ಯಾಯ ನೀಡಿದ ನ್ಯಾಯಾಧೀಶರಿಗೆ ಜಯವಾಗಲಿ’ ಘೋಷಣೆ ಮುಗಿಮು ಮುಟ್ಟಿತು. ಮುಖಂಡರನ್ನು ಹೆಗಲ ಮೇಲೆ ಹೊತ್ತುಕೊಂಡು ವೃತ್ತವನ್ನು ಒಂದು ಸುತ್ತು ಹಾಕಿದರು. ಸಿಡಿದ ಪಟಾಕಿ ಸದ್ದು ಕಿವಿಗಡಚಿಕ್ಕುವಂತಿತ್ತು. ಲಾಠಿ ಬೀಸಿ ಬಾಸುಂಡೆ ಮೂಡಿಸಿದ ‍ಪೊಲೀಸರಿಗೆ ಸಿಹಿ ತಿನಿಸುವಷ್ಟು ಅವರು ಮೈಮರೆತಿದ್ದರು!

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !