ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸಚಿವರಿಂದ ಪ್ರಚೋದನೆಗೆ ಯತ್ನ: ಶೆಟ್ಟರ್

Last Updated 3 ಡಿಸೆಂಬರ್ 2022, 15:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಚುನಾವಣೆ ಸಂದರ್ಭದಲ್ಲಿ ಕನ್ನಡಿಗರು ಮತ್ತು ಮರಾಠಿಗರನ್ನು ಪ್ರಚೋದಿಸಲು ಮಹಾರಾಷ್ಟ್ರದ ಸಚಿವರು ಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ, ಬೆಳಗಾವಿಗೆ ಬರುವುದಾಗಿ ಸವಾಲು ಹಾಕಿದ್ದಾರೆ. ಈ ರೀತಿ ಕಿಡಿ ಹಚ್ಚುವ ಕೆಲಸ ಮಾಡುವ ಬದಲು, ಗಡಿ ವಿವಾದ ಕುರಿತ ತಮ್ಮ ಅಹವಾಲನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸೌಹಾರ್ದದಿಂದ ಬದುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಲಿನ ಸಚಿವರು ಬೆಳಗಾವಿಗೆ ಬಂದು ಸೌಹಾರ್ದ ಕಲಕಬಾರದು. ಬೇರೆ ಏನಾದರೂ ಉದ್ದೇಶವಿದ್ದರೆ ಭೇಟಿ ನೀಡಲಿ’ ಎಂದರು.

‘ಎರಡೂ ಕಡೆ ಬಿಜೆಪಿ ಸರ್ಕಾರವಿದ್ದರೂ ಗಡಿ ವಿಷಯ ಯಾಕೆ ಉಲ್ಬಣಗೊಂಡಿದೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ‘ಗಡಿ ವಿಷಯವು ಪಕ್ಷಾತೀತ ವಿವಾದವಾಗಿದೆ. ಯಾವುದೇ ಪಕ್ಷದ ಸರ್ಕಾರವಿದ್ದರೂ, ಮಹಾರಾಷ್ಟ್ರದವರು ಗಡಿ ವಿವಾದವನ್ನು ಕೆದಕುತ್ತಲೇ ಬಂದಿದ್ದಾರೆ’ ಎಂದು ತಿಳಿಸಿದರು.

ಸಮೀಕ್ಷೆ ಸಾಮಾನ್ಯ: ‘ಚುನಾವಣೆ ಸಂದರ್ಭದಲ್ಲಿ ಸಮೀಕ್ಷೆ ನಡೆಯುವುದು ಸಾಮಾನ್ಯ. ನಿಜವಾಗಿಯೂ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಬಿಟ್ಟು ಹೋಗಿದ್ದರೆ, ಅದನ್ನು ದಾಖಲೆ ಸಮೇತ ನೀಡಲಿ. ಅದು ಬಿಟ್ಟು ರಾಜಕೀಯ ಕಾರಣಕ್ಕಾಗಿ, ಕಾಂಗ್ರೆಸ್‌ನವರು ತಳಬುಡವಿಲ್ಲದ ಆರೋಪಗಳನ್ನು ಮಾಡುವುದನ್ನು ಬಿಡಬೇಕು. ಇಷ್ಟಕ್ಕೂ ಯಾರದ್ದಾದರೂ ಹೆಸರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದರೆ, ಅದಕ್ಕೆ ಅಧಿಕಾರಿಗಳು ಹೊಣೆಯೇ ಹೊರತು ನಮ್ಮ ಪಕ್ಷವಲ್ಲ’ ಎಂದು ಹೇಳಿದರು.

‘ನಮ್ಮ ಪಕ್ಷದಲ್ಲಿ ರೌಡಿಗಳಿಗೆ ಅವಕಾಶವಿಲ್ಲ. ಈ ಬಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ಸ್ಪಷ್ಟವಾಗಿ ಹೇಳಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಅಚಾತುರ್ಯದಿಂದಾಗಿ ಒಬ್ಬರನ್ನು ನಾಮನಿರ್ದೇಶನ ಮಾಡಲಾಗಿದೆ. ಅದನ್ನು ಸರಿಪಡಿಸಲಾಗುತ್ತದೆ. ಹಾಗೆ ನೋಡಿದರೆ, ಕಾಂಗ್ರೆಸ್‌ನಲ್ಲೇ ಹೆಚ್ಚಿನ ರೌಡಿಗಳಿದ್ದಾರೆ. ಆ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರ ಚಾರಿತ್ರ್ಯ ಎಂತಹದ್ದು ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT