ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸಂಭ್ರಮದ ಶಿವರಾತ್ರಿ ಆಚರಣೆ; ರಾತ್ರಿಯಿಡೀ ಜಾಗರಣೆ

ಶಿವ ಮೂರ್ತಿ, ಶಿವಲಿಂಗಕ್ಕೆ ವಿಶೇಷ ಪೂಜೆ ಅಭಿಷೇಕ; ಭಕ್ತರಿಂದ ಪ್ರಸಾದ ವಿತರಣೆ
Last Updated 11 ಮಾರ್ಚ್ 2021, 17:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಶಿವ ಸ್ಮರಣೆಯ ಮಹಾಶಿವರಾತ್ರಿ ಹಬ್ಬವನ್ನು ಗುರುವಾರ ನಗರದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಭಕ್ತರು ಬೆಳಿಗ್ಗೆಯಿಂದ ರಾತ್ರಿವರೆಗೆ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ರಾತ್ರಿ ಶಿವನಾಮ ಸ್ಮರಿಸುತ್ತಾ ಜಾಗರಣೆ ಮಾಡಿ ಭಕ್ತಿ ಮೆರೆದರು. ಓಂ ನಮಃ ಶಿವಾಯ ಎಲ್ಲೆಡೆ ಅನುರಣಿಸುತ್ತಿತ್ತು.

ಸ್ಟೇಷನ್‌ ರಸ್ತೆಯ ಈಶ್ವರ ದೇವಸ್ಥಾನ, ಗೋಕುಲ ರಸ್ತೆಯ ಶಿವಪುರ ಕಾಲೊನಿಯ ಬೃಹತ್ ಶಿವನ ಮೂರ್ತಿ, ವಿಶ್ವೇಶ್ವರನಗರದ ವಿಶ್ವನಾಥ ದೇವಸ್ಥಾನ, ಉಣಕಲ್‌ನ ಬಸವೇಶ್ವರ ದೇಗುಲ, ಹಳೇ ಕೋರ್ಟ್ ವೃತ್ತದ ಸಾಯಿಮಂದಿರ ಸೇರಿದಂತೆ ನಗರದ ಎಲ್ಲಾ ದೇವಸ್ಥಾನಗಳಲ್ಲಿ ಶಿವರಾತ್ರಿಯ ವಿಶೇಷ ಪೂಜೆ ಜರುಗಿತು. ದೇವರ ಮೂರ್ತಿ ಹಾಗೂ ಶಿವಲಿಂಗಕ್ಕೆ ಅಭಿಷೇಕ ಮಾಡಲಾಯಿತು. ಹಬ್ಬದ ನಿಮಿತ್ತ ಮೂರ್ತಿಗಳಿಗೆ ಮಾಡಿದ ವಿಶೇಷ ಅಲಂಕಾರ ಗಮನ ಸೆಳೆಯಿತು.

ಭಕ್ತರು ದೇವಸ್ಥಾನಗಳಿಗೆ ಕುಟುಂಬದೊಂದಿಗೆ ತೆರಳಿ, ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಶಿವನ ಸ್ಮರಿಸುವ ಭಕ್ತಿಗೀತೆಗಳು, ಭಜನೆಗಳು ಹಾಗೂ ಹಾಡುಗಳು ಎಲ್ಲೆಡೆ ಕೇಳಿ ಬರುತ್ತಿತ್ತು. ಕೆಲ ದೇವಸ್ಥಾನದ ಆಡಳಿತ ಮಂಡಳಿಗಳು ಭಕ್ತರಿಗೆ ಪ್ರಸಾದ ವ್ಯವಸ್ಥೆ ಕೂಡ ಮಾಡಿದ್ದವು. ಸಂಜೆ ಭಕ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಶಿವಪುರ ಕಾಲೊನಿಯ ಈಶ್ವರ ದೇವಸ್ಥಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಗಣ್ಯರು ಭೇಟಿ ನೀಡಿ ದರ್ಶನ ಪಡೆದರು.

ಉಚಿತ ಚಿಕಿತ್ಸಾ ಶಿಬಿರ:ಶಿವರಾತ್ರಿ ಅಂಗವಾಗಿ ಸಿದ್ಧಾರೂಢ ಜಾತ್ರೆಗೆ ಬರುವ ಭಕ್ತರಿಗೆ ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಿಂದ ಉಚಿತ ಚಿಕಿತ್ಸಾ ಶಿಬಿರವನ್ನು ಗುರುವಾರ ಬೆಳಿಗ್ಗೆ ಮಠದ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಿ.ಡಿ. ಮಾಳಗಿ ಹಾಗೂ ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ಉಪಾಧ್ಯಕ್ಷರಾದ ಡಾ. ಗೋವಿಂದ ಮಣ್ಣೂರ ಉದ್ಘಾಟಿಸಿದರು.

ಸಂಸ್ಥೆಯ ಪ್ರಾಚಾರ್ಯರಾದ ಡಾ. ಪ್ರಶಾಂತ ಎ.ಎಸ್., ಹಿರಿಯ ಚಿಕಿತ್ಸಕರಾದ ಡಾ.ಆರ್.ಎಂ. ಗ್ರಾಮಪುರೋಹಿತ, ಕಾಯಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಜಿ. ಚವ್ಹಾಣ್, ಡಾ. ಮಧುಸೂಧನ್ ಕುಲಕರ್ಣಿ, ಡಾ. ಮಂಜುಳಾ ಕಾರಲ್ವಾಡ್ , ಡಾ. ರವೀಂದ್ರ ವರ್ಮಾ ಇದ್ದರು. ಶಿಬಿರ ಮಾ. 13 ಇರಲಿದೆ ಎಂದು ಪ್ರಕಟಣೆ ತಿಳಿಸಿದರು.

ಹಣ್ಣು ವಿತರಣೆ:ಸಿದ್ದಾರೂಢ ಸೇವಾ ಬಗದ ವತಿಯಿಂದ ಬಿಜೆಪಿ ಮುಖಂಡ ರವಿ ನಾಯಕ ನೇತೃತ್ವದಲ್ಲಿ ಭಕ್ತರಿಗೆ ಬಾಳೆಹಣ್ಣು, ದ್ರಾಕ್ಷಿ ಹಾಗೂ ಖರ್ಜೂರಗಳನ್ನು ಭಕ್ತರಿಗೆ ವಿತರಿಸಲಾಯಿತು. ಮಠದ ಭಕ್ತರಾದ ರಾಮಣ್ಣ ಗಾರವಾಡ, ಕಲ್ಪನಾ ರವಿ ನಾಯಕ, ಮಂಜು ಅಬಿಗೇರಿ, ಆಕಾಶ ಗಾರವಾಡ, ಧ್ರುವಿ ಹಾಗೂ ಬಳಗದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT