ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷ ಸಂಘಟನೆಗೆ ಮಮತಾ ಬ್ಯಾನರ್ಜಿಯೇ ಸ್ಫೂರ್ತಿ: ಎಚ್‌.ಡಿ. ಕುಮಾರಸ್ವಾಮಿ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ
Last Updated 23 ಆಗಸ್ಟ್ 2021, 6:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ರಾಜ್ಯದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ನನಗೆ ಸ್ಫೂರ್ತಿ’ ಎಂದುಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಟಿಎಂಸಿಯ ಸುಮಾರು 60ರಿಂದ 70 ಶಾಸಕರನ್ನುಬಿಜೆಪಿ ತನ್ನತ್ತ ಸೆಳೆಯಿತು. ಆದರೂ, ಮಮತಾ ಅವರು ಏಕಾಂಗಿಯಾಗಿ ಹೋರಾಡಿ ಚುನಾವಣೆಯಲ್ಲಿ ಮತ್ತೆ ಗೆದ್ದು ಬಂದರು. ಪಕ್ಷ ಕಟ್ಟಲು ಅವರಿಗಿಂತ ಸ್ಫೂರ್ತಿ ಬೇಕೇ’ ಎಂದರು.

‘ಜೆಡಿಎಸ್ ಅಡಿಪಾಯ ಗಟ್ಟಿಯಾಗಿದೆ. ಯಾರೇ ಬಂದರೂ, ಹೋದರೂ ಪಕ್ಷದ ಬೇರುಗಳು ಅಲುಗಾಡುವುದಿಲ್ಲ. ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷ ತೊರೆಯುವುದು ಎಲ್ಲರಿಗೂ ಗೊತ್ತಿರುವ ಹಳೇ ಕಥೆ. ದೇವೇಗೌಡರು ಮತ್ತೊಮ್ಮೆ ಅವರಿಗೆ ಕರೆ ಮಾಡಿ ಒಟ್ಟಾಗಿ ಕೆಲಸ ಮಾಡೋಣ ಬಾ ಎಂದು ಕರೆದರೂ, ಈಗಾಗಲೇ ನಿರ್ಧರಿಸಿರುವುದಾಗಿ ಹೇಳಿದರು. ಹೀಗಿರುವಾಗ ನಾವೇನು ಮಾಡಲು ಸಾಧ್ಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ಮಾಡಿರುವ ನನಗೆ, ಕೆಟ್ಟ ಅನುಭವವಾಗಿದೆ. ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ರಾಜ್ಯದಾದ್ಯಂತ ಯುವಜನರನ್ನು ಒಳಗೊಂಡು ಪಕ್ಷವನ್ನು ಸಂಘಟಿಸಲು ಮುಂದಾಗಿದ್ದೇನೆ. ಕೆಲಸ ಮಾಡುವವರಿಗೆ ಶಕ್ತಿ ತುಂಬುವ ಕೆಲಸ ಮಾಡುವೆ’ ಎಂದರು.

‘ಅನುಭವ ಬೇಕು’
‘ಯುವ ಮುಖಂಡರಾದ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರಜ್ವಲ್ ರೇವಣ್ಣ ಅವರಿಗೆ ರಾಜಕೀಯದಲ್ಲಿ ಇನ್ನೂ ಅನುಭವ ಬೇಕು. ನನಗೇ ಹಲವು ವರ್ಷಗಳು ಬೇಕಾಯಿತು. ಹೋರಾಟ ಮತ್ತು ಪಾದಯಾತ್ರೆಗಳನ್ನು ಕೈಗೊಳ್ಳಲು ಅವರಿನ್ನೂ ಪಳಗಬೇಕು’ ಎಂದುಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಬಸವರಾಜ ಬೊಮ್ಮಾಯಿ ಅವರು, ಮುಖ್ಯಮಂತ್ರಿಯಾದ ಬಳಿಕವೂ ನಾನು ಜನತಾ ಪರಿವಾರದವನು ಎಂದು ನೆನೆಪಿಸಿಕೊಂಡಿದ್ದಾರೆ. ಹಾಗಾಗಿಯೇ, ಎಚ್‌.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗ, ಎಂದಿಗೂ ಜನತಾ ಪರಿವಾರದವನು ಎನ್ನಲಿಲ್ಲ. ಅವರ ಮೊದಲ ಅಜೆಂಡಾ ಜೆಡಿಎಸ್ಮುಗಿಸುವುದೇ ಆಗಿತ್ತು’ ಎಂದರು.

‘ಬಂದೂಕಿನಿಂದ ಕ್ರಾಂತಿಯಾಗದು’
‘ಕ್ರಾಂತಿಕಾರಿ ಬದಲಾವಣೆಗಳು ಉತ್ತಮ ಆಡಳಿತದಿಂದ ಸಾಧ್ಯವೇ ಹೊರತು ಬಂದೂಕಿನಿಂದಲ್ಲ. ನಟ ಚೇತನ್‌ ಅವರಿಗೆ ಕ್ಯಾಮೆರಾ ಮುಂದೆ ನಿಂತು ಮಾತನಾಡುವುದನ್ನು ಬಿಟ್ಟರೆ,ರಾಜಕೀಯ ಗೊತ್ತಿಲ್ಲ. ನಾನೂ ಸಿನಿಮಾ ಹಲವು ಸಿನಿಮಾಗಳನ್ನು ನಿರ್ಮಿಸಿದ್ದೇನೆ’ ಎಂದು ತಮ್ಮ ಟ್ವೀಟ್ ಟೀಕಿಸಿದ್ದ ನಟ ಚೇತನ್ ಅವರಿಗೆ ಎಚ್‌.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.

‘ಆರೋಗ್ಯ, ಶಿಕ್ಷಣ, ರೈತನ ಬದುಕು ಸುಧಾರಣೆ, ವಸತಿ ಹಾಗೂ ಯುವಜನರಿಗೆ ಉದ್ಯೋಗ ನೀಡುವುದರಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ. ಅದಕ್ಕೆ ಸ್ವತಂತ್ರ ಅಧಿಕಾರ ಬೇಕಿರುವುದಿಂದ, ಮುಂದಿನ ಬಾರಿ ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತ ಕೊಡಿ ಎಂದು ಜನರನ್ನು ಕೇಳಿದ್ದೇನೆ. ಇದನ್ನು ಸರಿಯಾಗಿ ಗ್ರಹಿಸದ ಚೇತನ್ ಅವರಿಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT