ಮಂಗಳವಾರ, ಆಗಸ್ಟ್ 9, 2022
20 °C
ಹೆಗ್ಗೇರಿಯಲ್ಲಿ ಕಸ ಎಸೆಯಲು ಹೋದಾಗ ಘಟನೆ

ನಾಲೆಗೆ ಬಿದ್ದು ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದ ಹೆಗ್ಗೇರಿ ಕಾಲೊನಿಯಲ್ಲಿರುವ ನಾಲೆಗೆ ಬುಧವಾರ ಕಸ ಎಸೆಯಲು ಹೋಗಿದ್ದ ವ್ಯಕ್ತಿಯೊಬ್ಬರು ಕಾಲು ಜಾರಿ ನಾಲೆಗೆ ಬಿದ್ದು ಮೃತಪಟ್ಟಿದ್ದಾರೆ. ಜಗದೀಶ ನಗರದ ಶಂಕರಪ್ಪ ಕಟ್ಟಿಮನಿ (45) ಮೃತರು.

ಕೂಲಿ ಕಾರ್ಮಿಕರಾಗಿದ್ದ ಶಂಕರಪ್ಪ ಅವರು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆ ಸಮೀಪದ ರೇಣುಕಾ ದೇವಸ್ಥಾನ ಎದುರಿಗೆ ಇರುವ ನಾಲೆಗೆ ಕಸ ಎಸೆಯಲು ಹೋಗಿದ್ದಾರೆ. ಈ ವೇಳೆ ಕಾಲುಜಾರಿ ಆಯತಪ್ಪಿ ನಾಲೆಗೆ ಬಿದ್ದ ಅವರು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಠಾಣೆಗೆ ಕರೆ ಮಾಡಿ ತಿಳಿಸಿದರು ಎಂದು ಪೊಲೀಸರು ಹೇಳಿದರು.

ಕೂಡಲೇ ಸ್ಥಳಕ್ಕೆ ಹೋಗಿ ಸ್ಥಳೀಯರ ನೆರವಿನಿಂದ ಶೋಧ ಕಾರ್ಯಾಚರಣೆ ಕೈಗೊಳ್ಳಲಾಯಿತು. 3 ಗಂಟೆ ಸುಮಾರಿಗೆ ಹೆಗ್ಗೇರಿ ಸ್ಮಶಾನದ ಬಳಿ ಇರುವ ರಸ್ತೆ ಸೇತುವೆ ಬಳಿ  ಮೃತ ಸ್ಥಿತಿಯಲ್ಲಿ ಶಂಕರಪ್ಪ ಪತ್ತೆಯಾದರು. ಮಳೆಯಿಂದಾಗಿ ನಾಲೆಯಲ್ಲಿ ನೀರಿನ ಹರಿವು ಜೋರಾಗಿದ್ದರಿಂದ ಸೇತುವೆ ತನಕ ಕೊಚ್ಚಿಕೊಂಡು ಬಂದಿದ್ದರು. ಸ್ಥಳೀಯರು ಶಂಕರಪ್ಪ ಅವರನ್ನು ಗುರುತಿಸಿ ಮನೆಯವರಿಗೆ ವಿಷಯ ಮುಟ್ಟಿಸಿದರು. ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಯಿತು ಎಂದು ತಿಳಿಸಿದರು.

ಘಟನೆ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಶಶಿಧರ ಮಾಡ್ಯಾಳ, ‘ಶಂಕರಪ್ಪ ಅವರ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ, ಅವರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ನಿರ್ಧರಿಸಲಾಗುವುದು’ ಎಂದರು. 

ಗಾಂಜಾ ಮಾರಾಟ:

ಆನಂದ ನಗರದ ಸೇತುವೆ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋಪಾಲ ವಾಲ್ಮಿಕಿ, ಮಹಮ್ಮದ್ ಜಾಫರ್ ಹೆಬಸೂರ ಹಾಗೂ ರಬ್ಬಾನಿ ಬಂಧಿತರಾಗಿದ್ದು, 400 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮುಖ್ಯ ಆರೋಪಿ ಗೋಪಾಲ ಅಪರಾಧ ಹಿನ್ನೆಲೆಯ ವ್ಯಕ್ತಿಯಾಗಿದ್ದು, ಈತನ ವಿರುದ್ಧ ವಿವಿಧೆಡೆ ಈಗಾಗಲೇ 8 ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ತಿಳಿಸಿದರು.

ಇಬ್ಬರ ಬಂಧನ:

ವಿಮಾನ ನಿಲ್ದಾಣ ರಸ್ತೆಯ ಜಗದೀಶ ನಗರದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಗೋಕುಲ ರಸ್ತೆ ಠಾಣೆ ಪೊಲೀಸರು ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಕಿರಣ ಮುಳಗುಂದ ಮತ್ತು ಪಾರ್ವತಿ ನಾಯ್ಡು ಬಂಧಿತರು. ಆರೋಪಿಗಳಿಂದ ₹7 ಸಾವಿರ ಮೌಲ್ಯದ ಮದ್ಯದ ಟೆಟ್ರಾ ಪ್ಯಾಕೆಟ್ಗ‌ಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು