ಶನಿವಾರ, ಜನವರಿ 28, 2023
18 °C

ಮಂಟೂರ: ಧಾರಾಕಾರ ಮಳೆ; ಮನೆಗಳಿಗೆ ನುಗ್ಗಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ತಾಲ್ಲೂಕಿನ ಮಂಟೂರ ಗ್ರಾಮದ ಬೆಣ್ಣೆಹಳ್ಳ ಹಾಗೂ ಕೆರೆಗೆ ಕೋಡಿ ಬಿದ್ದಿದ್ದು, ಈ ಭಾಗದ ಹಲವು ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಬಸ್‌ ನಿಲ್ದಾಣ, ಶಾಲೆ ಹಾಗೂ ಗ್ರಂಥಾಲಯಗಳಿಗೂ ನೀರು ಸೇರಿದೆ.

ಗುರುವಾರ ಸಂಜೆ ಸುರಿದ ಧಾರಾಕಾರ ಮಳೆಗೆ ಬೆಣ್ಣೆ ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಕೆರೆ ತುಂಬಿದೆ. ಇದರಿಂದ ಗ್ರಾಮದ ತಗ್ಗು ಪ್ರದೇಶವಾದ ಅಂಬೇಡ್ಕರ್ ನಗರ ವ್ಯಾಪ್ತಿಯಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಮಳೆಯಿಂದಾಗಿ ಸಾಕು ಪ್ರಾಣಿಗಳಿಗೂ ಸಂಕಷ್ಟ ಎದುರಾಗಿದ್ದು, ಗ್ರಾಮಸ್ಥರು ಜಾನುವಾರು ಹಾಗೂ ಸಾಕು ಪ್ರಾಣಿಗಳನ್ನು ಬೇರೆಡೆ ಸ್ಥಳಾಂತರಿಸಿದ್ದಾರೆ. 

ಗ್ರಾಮದ ಬಸವರಾಜ ಸುಂಕದ ಸೇರಿದಂತೆ ಹಲವರ ಮನೆಗಳು ಧರೆಗುರಳಿವೆ. ‘ಪ್ರತಿ ಬಾರಿ ಮಳೆಯಾದಾಗಲೂ ಇದೇ ಸಮಸ್ಯೆ ಉಂಟಾಗುತ್ತಿದ್ದು, ಸರ್ಕಾರ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಗ್ರಾಮದ ಪ್ರಭಾವತಿ ಇರತಗೌಡರ ಒತ್ತಾಯಿಸಿದ್ದಾರೆ.

ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು, ‘ಮಳೆಯಿಂದ ಗ್ರಾಮದ ಕೆರೆ  ಒಡೆಯಬಾರದೆಂದು ಗ್ರಾಮಸ್ಥರು ಕೆರೆಗೆ ಸೇರುವ ನೀರಿಗೆ ಒಡ್ಡು ಕಟ್ಟಿದ್ದಾರೆ. ಇದರಿಂದ ನೀರು ಹರಿಯುವ ಮಾರ್ಗ ಬದಲಾಗಿ ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಜೆಸಿಬಿ ಮೂಲಕ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.