ಗುರುವಾರ , ಜೂನ್ 17, 2021
22 °C
ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಹಸೆಮಣೆಗೆ: ಸೀಮಿತ ಜನರಷ್ಟೇ ಭಾಗಿ

ಧಾರವಾಡ| ವಿವಾಹಕ್ಕೆ ಅನುಮತಿ ಕೋರಿ 10 ದಿನಗಳಲ್ಲಿ 1,508 ಅರ್ಜಿ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್‌–19 ಎರಡನೇ ಅಲೆಯ ಕಾರಣದಿಂದಾಗಿ ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಹಸೆಮಣೆ ಏರುವವರ ಸಂಖ್ಯೆ ಮಾತ್ರ ತಗ್ಗಿಲ್ಲ. ಜಿಲ್ಲೆಯಲ್ಲಿ ಹತ್ತು ದಿನಗಳ ಅವಧಿಯಲ್ಲಿ ಮದುವೆಗೆ ಅನುಮತಿ ಕೋರಿ ಬರೋಬ್ಬರಿ 1,508 ಅರ್ಜಿಗಳು ಸಲ್ಲಿಕೆಯಾಗಿವೆ.

ಸದ್ಯ ಮದುವೆಯ ಋತು ಆಗಿರುವುದರಿಂದ ಈಗಾಗಲೇ ನಿಶ್ಚಯವಾಗಿರುವ ಮದುವೆಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. www.supportdharwad.in ವೆಬ್‌ಸೈಟ್‌ನಲ್ಲಿ ಅರ್ಜಿ ಸ್ವೀಕರಿಸಿ, ಇ– ಪಾಸ್ ವಿತರಿಸಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿತ್ತು.

584 ಮದುವೆಗೆ ಅನುಮತಿ

‘ಕರ್ಫ್ಯೂ ಅವಧಿಯಷ್ಟೇ ಅಲ್ಲದೆ ನವೆಂಬರ್‌ ತಿಂಗಳಲ್ಲಿ ನಿಗದಿಯಾಗಿರುವ ಮದುವೆಗಳಿಗೂ ಅನುಮತಿ ಕೋರಿ ಒಟ್ಟು 1,508 ಅರ್ಜಿಗಳು ಬಂದಿದ್ದವು. ಈ ಪೈಕಿ, ಮನೆಯಲ್ಲೇ ನಿಗದಿಪಡಿಸಿದ್ದ 584 ಮದುವೆಗಳಿಗೆ ಅನುಮತಿ ನೀಡಲಾಗಿದೆ. ವಿವಾಹ ಸ್ಥಳ ಕಲ್ಯಾಣ ಮಂಟಪದಲ್ಲಿರುವ ಅರ್ಜಿಗಳಿಗೆ ಅನುಮತಿ ನಿರಾಕರಿಸಲಾಗಿದೆ’ ಮದುವೆ ಇ–ಪಾಸ್ ವಿತರಣೆ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೇ 6ರಿಂದ ಮದುವೆಗೆ ಆನ್‌ಲೈನ್‌ನಲ್ಲಿ ಪಾಸ್ ವಿತರಿಸಲಾಗುತ್ತಿದೆ. ಇದಕ್ಕೂ ಮುಂಚೆ ಗ್ರಾಮೀಣ ಭಾಗದಲ್ಲಿ ತಹಶೀಲ್ದಾರ್‌ ಕಚೇರಿ ಹಾಗೂ ಅವಳಿ ನಗರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆಯ ವಲಯ ಕಚೇರಿಗಳು ಅರ್ಜಿಗಳನ್ನು ಸ್ವೀಕರಿಸಿ ಪಾಸ್ ವಿತರಿಸಲಾಗುತ್ತಿತ್ತು’ ಎಂದು ಹೇಳಿದರು.

‘ಕಟ್ಟುನಿಟ್ಟಿನ ಲಾಕ್‌ಡೌನ್ ಆರಂಭವಾಗಿದ್ದರಿಂದ ಮುಂಚೆ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಲು ಇದ್ದ ಅನುಮತಿ ರದ್ದುಗೊಳಿಸಿ, ಮನೆಯಲ್ಲೇ 40 ಮಂದಿ ಸಮ್ಮುಖದಲ್ಲಿ ವಿವಾಹ ನೆರವೇರಿಸಲು ಅವಕಾಶ ಕಲ್ಪಿಸಲಾಗಿತ್ತು. ಪಾಸ್ ಜತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕೈಗೆ ಧರಿಸಲು ಬ್ಯಾಂಡ್‌ ನೀಡಲಾಗುತ್ತಿತ್ತು’ ಎಂದರು.

24ರವರೆಗೆ ಮದುವೆಗಿಲ್ಲ ಅನುಮತಿ

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಮದುವೆಗಳಿಗೆ ಮೇ 17ರಿಂದ 24ರವರೆಗೆ ಮದುವೆಗಳಿಗೆ ಅನುಮತಿ ನೀಡುವುದನ್ನು ಜಿಲ್ಲಾಡಳಿತ ತಡೆ ಹಿಡಿದಿದೆ.

ಈಗಾಗಲೇ ಅನುಮತಿ ಪಡೆದವರು 40 ಮಂದಿಯ ಸಮ್ಮುಖದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸಿ ಮದುವೆ ಮಾಡಿಕೊಳ್ಳಬಹುದು. ಆದರೆ, ಇನ್ಮುಂದೆ ಹೊಸದಾಗಿ ಅನುಮತಿ ನೀಡುವುದಿಲ್ಲ. ಇದಕ್ಕಾಗಿ ಆರಂಭಿಸಿದ್ದ ವೆಬ್‌ಸೈಟ್ ಅನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದೇಶ ಉಲ್ಲಂಘಿಸಿ ಮದುವೆ ಮಾಡುವವರ ವಿರುಧ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ– 1987 ಮತ್ತು ವಿಪತ್ತು ನಿರ್ವಹಣಾ ಕಾಯ್ದೆ –2005ರ ಪ್ರಕಾರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು