ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮರ ಕಲೆ ಕಲಿತು ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಯುವತಿಯರು

Last Updated 30 ಅಕ್ಟೋಬರ್ 2018, 11:14 IST
ಅಕ್ಷರ ಗಾತ್ರ

ಧಾರವಾಡ: ಯುವತಿಯರು ಬರಿಗೈಯಲ್ಲಿ ಹೆಂಚು ಒಡೆದರು, ದೃಢವಾಗಿ ನಿಂತಿದ್ದ ಯುವತಿಯರ ಮೈಗೆ ಅಪ್ಪಳಿಸಿದ ಟ್ಯೂಬ್‌ಲೈಟ್‌ಗಳು ಪುಡಿಯಾಗಿ ಚಲ್ಲಾಪಿಲ್ಲಿಯಾದವು. ತಮ್ಮ ಮೈಮುಟ್ಟಲು ಬರುವವರಿಗೆ ತಕ್ಕಶಾಸ್ತಿ ಮಾಡುವುದನ್ನು ಯುವತಿಯರು ಅಭ್ಯಾಸ ಮಾಡಿದರೆ, ಯುವಕರು ಬೆರಗುಗಣ್ಣಿನಿಂದ ನೋಡುತ್ತಿದ್ದ ದೃಶ್ಯ ಇಲ್ಲಿ ಕರ್ನಾಟಕ ಕಾಲೇಜು ಮೈದಾನದಲ್ಲಿ ಮಂಗಳವಾರ ಕಂಡುಬಂತು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಆಯೋಜಿಸಿದ್ದ ‘ಮಿಷನ್ ಸಾಹಸಿ’ ಸಾಮೂಹಿಕ ಸಾಹಸ ಪ್ರದರ್ಶನದಲ್ಲಿ ನಗರದ ಆರ್‌ಎಲ್‌ಎಸ್‌ ಕಾಲೇಜು, ಅಣ್ಣಿಗೇರಿ ಪಿಯು ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿಯರು ಬಿಸಿಲನ್ನೂ ಲೆಕ್ಕಿಸದೆ ಆತ್ಮರಕ್ಷಣೆಯ ಕಲೆಯನ್ನು ಕಲಿತರು.

ತಮ್ಮ ಮೇಲೆ ಎರಗುವವರನ್ನು ಮಣ್ಣುಮುಕ್ಕಿಸುವುದು ಹೇಗೆ ಎಂಬುದನ್ನು ಈ ಶಿಬಿರದಲ್ಲಿ ಕಲಿಸಲಾಯಿತು. ಸಮರ ಕಲೆ ಕಲಿತಿದ್ದ ಕೆಲ ಯುವತಿಯರು ವೇದಿಕೆ ಮೇಲೆ ಪ್ರಾತ್ಯಕ್ಷಿಕೆ ನೀಡುತ್ತಿದ್ದರೆ, ಮೈದಾನದಲ್ಲಿದ್ದ ನೂರಾರು ವಿದ್ಯಾರ್ಥಿನಿಯರು ಅದನ್ನು ಅಭ್ಯಸಿಸುತ್ತಿದ್ದರು. ಒಂದೊಂದು ಪಟ್ಟು ಹಾಕಿದಾಗಲೂ ಕರಾಟೆಯ ಕೂಗು ಮುಗಿಲು ಮುಟ್ಟುವಂತಿತ್ತು.

ಪೆನ್ನು, ಪೆನ್ಸಿಲ್‌, ಬ್ಯಾಗ್‌ಗಳನ್ನು ಬಳಸಿ ಹೇಗೆ ಸ್ವಯಂ ರಕ್ಷಣೆ ಮಾಡಿಕೊಳ್ಳಬಹುದು. ಏನೂ ಇಲ್ಲದಿರುವಾಗ ಹಿಂದಿನಿಂದ ಬಂದು ಹಿಡಿದರೆ ಅಥವಾ ಮುಂದಿನಿಂದ ಬಂದು ಎರಗಿದರೆ ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಮತ್ತು ರಕ್ಷಣಾತ್ಮವಾಗಿ ಎದುರಾಳಿಯನ್ನು ಮೇಲೇಳದಂತೆ ಮಾಡುವುದು ಹೇಗೆ ಎಂಬಿತ್ಯಾದಿ ತಂತ್ರಗಳನ್ನು ನವನಗರದ ಅರುಣ ಕುಮಾರ್‌ ಹೇಳಿಕೊಟ್ಟರು.

‘ಮಿಷನ್‌ ಸಾಹಸಿ’ಗೆ ಚಾಲನೆ ನೀಡಿದ ಮನೋವೈದ್ಯ ಡಾ. ಆನಂದ ಪಾಂಡುರಂಗಿ ಮಾತನಾಡಿ, ‘ಗೌರವವಿಲ್ಲದ ಸಮಾಜ ಸ್ವಾಸ್ಥ್ಯ ಸಮಾಜವಲ್ಲ. ಶೇ 50ರಷ್ಟು ಯುವತಿಯರಾದರೂ ಈ ಸಮರ ಕಲೆಯನ್ನು ಕಲಿತಿದ್ದೇ ಆದಲ್ಲಿ ಮಾದರಿ ಸಮಾಜ ನಿರ್ಮಾಣ ಸಾಧ್ಯ’ ಎಂದರು.

ಕಾರ್ಯಕ್ರಮದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡ ಚಲನಚಿತ್ರ ನಟಿ ಮಯೂರಿ ಕ್ಯಾತರಿ ಯುವತಿಯರ ಸಾಹಸವನ್ನು ತಮ್ಮ ಮೊಬೈಲ್‌ನಲ್ಲಿ ದಾಖಲಿಸಿಕೊಂಡರು. ನಂತರ ಮಾತನಾಡಿ, ‘ತಂದೆ ತಾಯಿ ಹೇಳಿದ ಅಂಶಗಳನ್ನು ಯುವತಿಯರು ಮರೆಯಬಾರದು. ಅವರನ್ನು ಎಂದಿಗೂ ತಲೆತಗ್ಗಿಸುವಂತ ಕೆಲಸವನ್ನು ಮಾಡಬಾರದು. ಮಾನಸಿಕವಾಗಿ ನಾವು ಸದೃಢರಾಗಿರಬೇಕು. ನಮ್ಮ ಕನಸನ್ನು ಬೆನ್ನತ್ತಬೇಕು. ತಂದೆತಾಯಿಯರನ್ನೂ ಚೆನ್ನಾಗಿ ನೋಡಿಕೊಳ್ಳಬೇಕು’ ಎಂದರು.

ಹುಬ್ಬಳ್ಳಿಯ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕಿ ಸಾಧನಾ ಪೋಟೆ, ‘ಯುವತಿಯರು ತೊಡುವ ಉಡುಪು ಗೌರವ ನೀಡುವಂತಿರಬೇಕು. ಮಹಿಳೆ ಇಂದು ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರೂ ಅವರ ಸಬಲೀಕರಣವಾಗಿಲ್ಲ. ಇದಕ್ಕೆ ಕಾರಣ ಹುಡುಕಬೇಕಾದ್ದು ಇಂದಿನ ಅಗತ್ಯ. ಅತ್ಮಾಭಿಮಾನ, ಸಕಾರಾತ್ಮಕ ಧೋರಣೆ ಇದ್ದಲ್ಲಿ ಯಾರೂ ನಮ್ಮನ್ನು ಹಿಡಿಯಲು ಸಾಧ್ಯವಿಲ್ಲ. ಮೌಲ್ಯಗಳನ್ನು ಇಟ್ಟುಕೊಂಡು ಮುನ್ನಡೆದರೆ ಎಲ್ಲಿಯೂ ಸೋಲು ಕಾಣದು’ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಚೈತ್ರಾ ಶಿರೂರ,ಕೇಂದ್ರ ಕಾರಾಗೃಹ ಸೂಪರಿಂಟೆಂಡೆಂಟ್‌ ಡಾ. ಆರ್‌.ಅನಿತಾ, ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ರಾಜೇಶ್ವರಿ ಮಹೇಶ್ವರಯ್ಯ, ಎನ್‌ಎಸ್‌ಎಸ್ ಅಧಿಕಾರಿ ಎಂ.ಬಿ.ದಳಪತಿ, ಮಹಾಲಕ್ಷ್ಮಿ ಭೂಸಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT