ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ಕೈದಿಗಳಿಂದ ಮಾಸ್ಕ್‌ ತಯಾರಿಕೆ

ಒಂದು ತಿಂಗಳಿಂದ ನಡೆಯುತ್ತಿರುವ ಕಾರ್ಯ; 22 ಸಾವಿರ ಮಾಸ್ಕ್ ಪೂರೈಕೆ
Last Updated 23 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಲು ಎಲ್ಲೆಡೆ ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧಾರವಾಡದ ಕೇಂದ್ರ ಕಾರಾಗೃಹದ ಕೈದಿಗಳು ನಿತ್ಯ ಮಾಸ್ಕ್‌ ತಯಾರಿಕೆಯಲ್ಲಿ ತೊಡಗಿದ್ದಾರೆ.

ಕೇಂದ್ರ ಕಾರಾಗೃಹದಲ್ಲಿ ಸದ್ಯ 26 ಮಹಿಳಾ ಕೈದಿಗಳು ಸೇರಿದಂತೆ ಒಟ್ಟು 535 ಕೈದಿಗಳಿದ್ದಾರೆ. ಇವರೆಲ್ಲ ಒಂದು ತಿಂಗಳಿಂದ ಮಾಸ್ಕ್‌ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಕೊರೊನಾ ಪ್ರಕರಣಗಳು ಪತ್ತೆಯಾದ ಆರಂಭದಲ್ಲಿ ಹೊರಗಡೆ ಹೋಗುವಾಗ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿರಲಿಲ್ಲ. ಆದರೆ, ಈಗ ಸರ್ಕಾರವೇ ಮಾಸ್ಕ್‌ ಹಾಕಿಕೊಳ್ಳುವುದನ್ನು ಕಡ್ಡಾಯಗೊಳಿಸಿದೆ. ಇಲ್ಲವಾದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.

ಜೊತೆಗೆ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಮುಖಂಡರು ಮತ್ತು ದಾನಿಗಳು ನಿತ್ಯ ಅಲ್ಲಲ್ಲಿ ಮಾಸ್ಕ್‌ಗಳನ್ನು ಉಚಿತವಾಗಿ ಹಂಚುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಆದ್ದರಿಂದ ಕೈದಿಗಳು ವೇಗವಾಗಿ ಮಾಸ್ಕ್‌ ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

‘ಬೆಳಗಾವಿಯಿಂದ ಕಚ್ಚಾ ವಸ್ತುಗಳನ್ನು ತರಿಸಿ ಒಂದು ತಿಂಗಳ ಹಿಂದೆಯೇ ಮಾಸ್ಕ್‌ ತಯಾರಿಕೆ ಆರಂಭಿಸಲಾಗಿದೆ. ನಾಲ್ಕು ಯಂತ್ರಗಳು ಇದ್ದು, ವಿವಿಧ ಕೈದಿಗಳು ಬೇರೆ, ಬೇರೆ ಹಂತಗಳಲ್ಲಿ ಮಾಸ್ಕ್‌ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಕೈದಿಗಳು ಆರಂಭದಲ್ಲಿ ನಿತ್ಯ 100ರಿಂದ 150 ಮಾಸ್ಕ್‌ಗಳನ್ನು ಮಾತ್ರ ತಯಾರಿಸುತ್ತಿದ್ದರು. ಈಗ ದಿನಕ್ಕೆ ಒಂದು ಸಾವಿರ ಬಟ್ಟೆಯ ಮಾಸ್ಕ್‌ಗಳನ್ನು ಹೊಲಿಯುತ್ತಿದ್ದಾರೆ’ ಎಂದು ಕಾರಾಗೃಹದ ಅಧೀಕ್ಷಕಿ ಡಾ. ಆರ್‌. ಅನಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೈದಿಗಳು ಹೊಲಿಯುವ ಮಾಸ್ಕ್‌ಗಳನ್ನು ತೊಳೆದು ಮತ್ತೆ ಬಳಸಲು ಬರುತ್ತವೆ. ನೀಲಿ ಮತ್ತು ಹಸಿರು ಬಣ್ಣದ ಮಾಸ್ಕ್‌ಗಳನ್ನು ತಯಾರಿಸಲಾಗುತ್ತಿದ್ದು, ತಯಾರಿಸಿದ ದಿನವೇ ಖಾಲಿಯಾಗುತ್ತಿವೆ. ಸದ್ಯಕ್ಕೆ ನಮ್ಮಲ್ಲಿ ಒಂದೂ ಮಾಸ್ಕ್‌ ಇಲ್ಲ. ಕೈದಿಗಳಿಗೆ ಒಂದೇ ದಿನ 1,500 ಮಾಸ್ಕ್‌ ತಯಾರಿಸುವ ಗುರಿ ನೀಡಲಾಗಿತ್ತು. ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಕೈದಿಗಳ ಕೆಲಸವೂ ವೇಗ ಪಡೆದುಕೊಳ್ಳುತ್ತಿದೆ’ ಎಂದು ಅವರು ವಿವರಿಸಿದರು.

‘ಕೇಂದ್ರ ಕಾರಾಗೃಹದಲ್ಲಿ ತಯಾರಾಗುತ್ತಿರುವ ಮಾಸ್ಕ್‌ಗಳನ್ನು ಜನಪ್ರತಿನಿಧಿಗಳು, ಕೆಎಂಎಫ್‌, ಬ್ಯಾಂಕ್‌ ಪ್ರತಿನಿಧಿಗಳು ಹಾಗೂ ಸಂಘ–ಸಂಸ್ಥೆಗಳು ಖರೀದಿಸುತ್ತಿವೆ. ಅಂತರ ಕಾಯ್ದುಕೊಂಡು ಕೈದಿಗಳು ಮಾಸ್ಕ್‌ಗಳನ್ನು ತಯಾರಿಸು ತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT