ಮೇಯರ್‌ ಅಧಿಕಾರವಧಿ ಐದು ವರ್ಷ ನಿಗದಿಗೆ ಆಗ್ರಹ

7
ಅಖಿಲ ಕರ್ನಾಟಕ ಮಹಾಪೌರರ ಸಮಾವೇಶದಲ್ಲಿ ನಿರ್ಣಯ

ಮೇಯರ್‌ ಅಧಿಕಾರವಧಿ ಐದು ವರ್ಷ ನಿಗದಿಗೆ ಆಗ್ರಹ

Published:
Updated:
ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಮಹಾಪೌರರ ಸಮಾವೇಶವನ್ನು ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಉದ್ಘಾಟಿಸಿದರು

ಹುಬ್ಬಳ್ಳಿ: ಮೇಯರ್‌ ಅಧಿಕಾರವಧಿ ಐದು ವರ್ಷ ನಿಗದಿಪಡಿಸಬೇಕು, ಪಾಲಿಕೆ ಸಾಮಾನ್ಯಸಭೆಯ ಎಲ್ಲ ನಿರ್ಣಯಗಳ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು ಎಂಬುದು ಸೇರಿದಂತೆ ಪ್ರಮುಖ ನಿರ್ಣಯಗಳನ್ನು ಪ್ರಥಮ ಬಾರಿಗೆ ಶನಿವಾರ ಇಲ್ಲಿ ನಡೆದ ಅಖಿಲ ಕರ್ನಾಟಕ ಮಹಾಪೌರರ ಸಮಾವೇಶದಲ್ಲಿ ಕೈಗೊಳ್ಳಲಾಯಿತು.  ನಿರ್ಣಯಗಳನ್ನು ಆದ್ಯತೆ ಮೇರೆಗೆ ಜಾರಿಗೊಳಿಸಲು ಕ್ರಮಕೈಗೊಳ್ಳುವಂತೆ ಶೀಘ್ರದಲ್ಲೇ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರ ಬಳಿಕ ನಿಯೋಗ ಕೊಂಡೊಯ್ದು, ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.

ಪ್ರಮುಖ ನಿರ್ಣಯಗಳು:

ಮೇಯರ್‌ ಅವರ ಒಂದು ವರ್ಷದ ಅಧಿಕಾರವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗದ ಕಾರಣ ಈಗಿರುವ ಅಧಿಕಾರವಧಿಯನ್ನು ಕನಿಷ್ಠ 20 ತಿಂಗಳು ನಿಗದಿ ಮಾಡಬೇಕು ಅಥವಾ ಇತರೆ ರಾಜ್ಯಗಳ ಮಾದರಿಯಂತೆ 5 ವರ್ಷಗಳ ಅವಧಿಗೆ ಜನರಿಂದಲೇ ನೇರವಾಗಿ ಆಯ್ಕೆ ಮಾಡುವ ಕಾಯ್ದೆ ಜಾರಿಗೆ ತರಬೇಕು.

ಬಹಳ ವರ್ಷಗಳಿಂದ ಬಾಕಿ ಇರುವ ಆಸ್ತಿ ಮತ್ತು ನೀರಿನ ಕರ ಮತ್ತು ಬಡ್ಡಿಯನ್ನು ಸಾರ್ವಜನಿಕರು ಪಾವತಿಸಲು ಸಾಧ್ಯವಾಗದೇ ಇರುವುದರಿಂದ ಒಂದಾವರ್ತಿ (ಒಟಿಎಸ್‌) ಯೋಜನೆಯಡಿಯಲ್ಲಿ ಬಡ್ಡಿ ಮನ್ನಾ ಮಾಡಲು ಕ್ರಮಕೈಗೊಳ್ಳಬೇಕು.

ಮಹಾನಗರ ಪಾಲಿಕೆಗಳಲ್ಲಿ ಖಾಲಿ ಇರುವ ಸಿಬ್ಬಂದಿ ನೇಮಕಕ್ಕೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಅವಕಾಶ ಮಾಡಿಕೊಡಬೇಕು.

ಮಹಾನಗರ ವ್ಯಾಪ್ತಿಯಲ್ಲಿ ಆಸ್ತಿ ಕರ ವ್ಯಾಪ್ತಿಯಿಂದ ಹೊರಗಿರುವ ಆಸ್ತಿಗಳನ್ನು ಆಸ್ತಿಕರ ವ್ಯಾಪ್ತಿಗೆ ಅಳವಡಿಸಲು ಜಿಐಎಸ್‌ ಸರ್ವೆ ಮಾಡಲು ಅನುಮತಿ ನೀಡಬೇಕು.

ಪಾಲಿಕೆಗಳಿಗೆ ನಗರೋತ್ಥಾನ ಯೋಜನೆಯಡಿಯಲ್ಲಿ ಅಥವಾ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ತಲಾ ₹ 100 ಕೋಟಿ ಬಿಡುಗಡೆ ಮಾಡಬೇಕು.

ನಗರಾಭಿವೃದ್ಧಿ ಇಲಾಖೆಯ 2003ರ ಸುತ್ತೋಲೆ ಅನ್ವಯ ನಗರ ಪಾಲಿಕೆ ಒಡೆತನದ ಜಾಗಗಳನ್ನು ಹರಾಜು ಮೂಲಕ ಹಂಚಿಕೆ ಮಾಡಲು ಅಥವಾ ಹಿಂಪಡೆಯಲು ಸಾಧ್ಯವಾಗದೇ ಇರುವುದರಿಂದ ಈಗಿನ ಮಾರುಕಟ್ಟೆ ದರದಂತೆ ಹಾಲಿ ಭೂಬಾಡಿಗೆದಾರರಿಗೆ ಖರೀದಿಗೆ ಕೊಡಲು ಅಥವಾ ಭೂ ಬಾಡಿಗೆ ವಸೂಲು ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು.

ಪಾಲಿಕೆಗಳ ಎಲ್ಲ ಕಡತಗಳು ಪೌರಾಡಳಿತ ನಿರ್ದೇಶನಾಲಯದ ಮೂಲಕ ನಗರಾಭಿವೃದ್ಧಿ ಇಲಾಖೆಯ ಅನುಮೋದನೆ ಪಡೆದುಕೊಳ್ಳುತ್ತಿರುವುದರಿಂದ ಕಡಿತಗಳ ವಿಲೇವಾರಿಗೆ ವಿಳಂಬವಾಗುತ್ತಿರುವುದರಿಂದ ಪಾಲಿಕೆಯ ಎಲ್ಲ ಕಡಿತಗಳು ನಗರಾಭಿವೃದ್ಧಿ ಇಲಾಖೆಯಲ್ಲಿಯೇ ಅನುಮೋದನೆ ಪಡೆಯಲು ಮತ್ತು ಒಂದು ತಿಂಗಳ ಒಳಗಾಗಿ ಎಲ್ಲ ಕಡತ ವಿಲೇವಾರಿಗೆ ಕ್ರಮಕೈಗೊಳ್ಳಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ಉದ್ಘಾಟನೆ:  ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಸಮ್ಮೇಳನ ಉದ್ಘಾಟಿಸಿದರು. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಸುಧೀರ ಸರಾಫ್‌, ಮೈಸೂರು ಮೇಯರ್‌ ಬಿ. ಭಾಗ್ಯವತಿ, ಕಲಬುರ್ಗಿ ಮೇಯರ್‌ ಶರಣಕುಮಾರ ಮೋದಿ, ವಿಜಯಪುರ ಮೇಯರ್‌ ಸಂಗೀತ ಪೋಳ, ಬೆಳಗಾವಿ ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !