ಶನಿವಾರ, ನವೆಂಬರ್ 26, 2022
19 °C
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ: ಬಾಯಿಮಾತಿಗಷ್ಟೇ ಸೀಮಿತವಾದ ದುಂದುವೆಚ್ಚದ ಕಡಿವಾಣ

ಹುಬ್ಬಳ್ಳಿ: ಮೇಯರ್ ಕಾರು: 5 ತಿಂಗಳಿಗೆ ₹3.89 ಲಕ್ಷ ಬಾಡಿಗೆ

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಹಾನಗರದ ಪ್ರಥಮ ಪ್ರಜೆ ಮೇಯರ್ ಈರೇಶ ಅಂಚಟಗೇರಿ ಅವರು ಬಳಸುವ ಐಷಾರಾಮಿ ಇನ್ನೋವಾ ಕ್ರಿಸ್ಟಾ ಕಾರಿನ ಕಳೆದ ಐದು ತಿಂಗಳ ಬಾಡಿಗೆ ಮೊತ್ತ ಬರೋಬ್ಬರಿ ₹3.89 ಲಕ್ಷ!. ಮಹಾನಗರ ಪಾಲಿಕೆಯು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವಾಗಲೇ, ಮೇಯರ್ ಅವರು ತಮ್ಮ ಕಾರಿಗಾಗಿ ಇಷ್ಟು ಹಣ ವೆಚ್ಚ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಮೇಯರ್ ಮತ್ತು ಉಪ ಮೇಯರ್‌ ಅವರಿಗಾಗಿ ಪಾಲಿಕೆಯಲ್ಲೇ ಸ್ವಂತ ಕಾರುಗಳಿವೆ. ಹಿಂದಿನವರು ಆ ಕಾರುಗಳನ್ನೇ ಬಳಸುತ್ತಿದ್ದರು. ಆದರೆ, ಆರು ತಿಂಗಳ ಹಿಂದೆ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾದ ಈರೇಶ ಅವರು, ತಮಗೆ ಮೀಸಲಾಗಿದ್ದ ಕಾರಿನ ಬದಲಿಗೆ ಜೂನ್‌ ತಿಂಗಳಿಂದ ಇನ್ನೋವಾ ಬಾಡಿಗೆ ಕಾರಿನಲ್ಲಿ ಓಡಾಡುತ್ತಿದ್ದಾರೆ.

ತಿಂಗಳಿಗೆ ₹52 ಸಾವಿರ: ಮೇಯರ್ ಅವರ ಕಾರಿನ ಮಾಸಿಕ ಬಾಡಿಗೆ ಮೊತ್ತ ₹52 ಸಾವಿರವಾಗಿದ್ದು, ತಿಂಗಳಿಗೆ 2 ಸಾವಿರ ಕಿ.ಮೀ.ವರೆಗೆ ಕಾರಿನಲ್ಲಿ ಸಂಚರಿಸಬಹುದು. ಮಿತಿ ಮೀರಿದರೆ, ಪ್ರತಿ ಕಿ.ಮೀ.ಗೆ ₹15ರಂತೆ ಮಾಲೀಕರಿಗೆ ಹೆಚ್ಚುವರಿಯಾಗಿ ಪಾವತಿಸಬೇಕು. ನಿಗದಿಯಂತೆ ಕಳೆದ ಐದು ತಿಂಗಳ ಕಾರಿನ ಬಾಡಿಗೆ ₹2.60 ಲಕ್ಷ ಆಗಿದೆ. ಮೇಯರ್ ಅವರು ನಿಗದಿತ ಕಿ.ಮೀ ಗಿಂತ ಹೆಚ್ಚು ಓಡಾಡಿದ್ದು, ಬಾಡಿಗೆ ಮೊತ್ತ ₹1,29,480  ಹೆಚ್ಚುವರಿಯಾಗಿದೆ. ‌

‘ಮೇಯರ್‌ ಅವರು ಬಾಡಿಗೆ ಕಾರು ಪಡೆದ ಬಳಿಕ, ಅವರು ಬಳಸುತ್ತಿದ್ದ ಎರ್ಟಿಗಾ ಕಾರನ್ನು ಉಪ ಮೇಯರ್ ಉಮಾ ಮುಕುಂದ ಅವರಿಗೆ ನೀಡಲಾಗಿದೆ. ಉಪ ಮೇಯರ್ ಅವರ ಕಾರನ್ನು ಪಾಲಿಕೆಯ ಎಂಜಿನಿಯರೊಬ್ಬರು ಬಳಸುತ್ತಿದ್ದಾರೆ’ ಎಂದು ಪಾಲಿಕೆಯ ಪರಿಷತ್ ಕಾರ್ಯದರ್ಶಿ ಜಿ.ಬಿ. ಡಂಬಳ ‘ಪ್ರಜಾವಾಣಿ’ಗೆ ತಿಳಿಸಿದರು.

ಆಕ್ಷೇಪಿಸಿದ್ದ ಕಾಂಗ್ರೆಸ್: ಸ್ವಂತ ಕಾರಿದ್ದರೂ ಬಾಡಿಗೆ ಕಾರು ಪಡೆದಿರುವ ಮೇಯರ್, ಪಾಲಿಕೆ ಹಣವನ್ನು ದುಂದುವೆಚ್ಚ ಮಾಡುತ್ತಿದ್ದಾರೆ ಎಂದು, ವಿರೋಧ ಪಕ್ಷವಾದ ಕಾಂಗ್ರೆಸ್ ಆಕ್ಷೇಪಿಸಿತ್ತು. ಮೇಯರ್ ಅವರ ಕಾರಿನ ಬಾಡಿಗೆ ಹಣವನ್ನು ಇಎಂಐ ಕಟ್ಟಿ, ಸ್ವಂತ ಕಾರನ್ನೇ ಖರೀದಿಸಬಹುದಿತ್ತು. ಇದರಲ್ಲೂ ಮೇಯರ್ ಶೇ 40ರಷ್ಟು ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಆರೋಪಿಸಿತ್ತು.

‘ಮೇಯರ್ ಅವರಿಗೆ ಹೊಸ ಕಾರು ಖರೀದಿ ಮಾಡಲಾಗದಷ್ಟು ಆರ್ಥಿಕ ಸಂಕಷ್ಟದಲ್ಲಿ ಮಹಾನಗರ ಪಾಲಿಕೆ ಇಲ್ಲ. ಈ ರೀತಿ ಕಾರಿನ ಬಾಡಿಗೆಗೆ ಹಣ ವ್ಯಯಿಸುವ ಬದಲು, ಹೊಸ ಕಾರು ಖರೀದಿಸುವುದು ಉತ್ತಮ’ ಎಂದು ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಸಲಹೆ ನೀಡಿದರು.

‘ಆಯುಕ್ತರ ಕಾರಿಗಿಂತ ಕಡಿಮೆ’

‘ಆಯುಕ್ತರ ಕಾರಿನ ವೆಚ್ಚಕ್ಕೆ ಹೋಲಿಸಿದರೆ, ನನ್ನ ಕಾರಿನ ವೆಚ್ಚ ತೀರಾ ಕಡಿಮೆ. ಇಷ್ಟಕ್ಕೂ ನಾನೊಬ್ಬನೇ ಕಾರನ್ನು ಬಾಡಿಗೆಗೆ ಪಡೆದಿಲ್ಲ. ಹೆಚ್ಚುವರಿ ಆಯುಕ್ತರು ಸೇರಿದಂತೆ ಆರು ಮಂದಿಗೆ ಇನ್ನೋವಾ ಕಾರುಗಳನ್ನು ಬಾಡಿಗೆಗೆ ಪಡೆಯಲಾಗಿದೆ’ ಎಂದು ಮೇಯರ್ ಈರೇಶ ಅಂಚಟಗೇರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಾರಿಗೆ ₹42 ಸಾವಿರ ಬಾಡಿಗೆ ಮತ್ತು ಜಿಎಸ್‌ಟಿ ಸೇರಿಸಿ ಮಾಸಿಕ ಒಟ್ಟು ₹52 ಸಾವಿರ ನಿಗದಿಯಾಗಿದೆ. ಡೀಸೆಲ್, ಚಾಲಕನ ಸಂಬಳ ಹಾಗೂ ನಿರ್ವಹಣಾ ವೆಚ್ಚವೂ ಇದರಲ್ಲೇ ಸೇರಿದೆ. ಹುಬ್ಬಳ್ಳಿ–ಧಾರವಾಡ ಹೊರತುಪಡಿಸಿದರೆ ಬೇರೆಲ್ಲೂ ನಾನು ಓಡಾಡುವುದಿಲ್ಲ. ಒಮ್ಮೆಯೂ ಕಾರಿನಲ್ಲಿ ಬೆಂಗಳೂರಿಗೆ ಹೋಗಿಲ್ಲ’ ಎಂದರು.

   ಅವಳಿನಗರದ ಪ್ರಥಮ ಪ್ರಜೆ ಮೇಯರ್ ಬಾಡಿಗೆ ಕಾರು ಬಳಸುತ್ತಿರುವುದನ್ನು ಮನಗಂಡು ಆಯುಕ್ತರೇ ಹೊಸ ಕಾರು ಖರೀದಿಸಲು ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವ ಕಳಿಸಬೇಕು

– ಈರೇಶ ಅಂಚಟಗೇರಿ, ಮೇಯರ್, ಮಹಾನಗರ ಪಾಲಿಕೆ

   ಮೇಯರ್ ಅವರಿಗೆ ಹೊಸ ಕಾರನ್ನು ₹7 ಲಕ್ಷದ ಮಿತಿಯಲ್ಲಿ ಖರೀದಿಸಲು ಅವಕಾಶವಿದೆ. ಆ ಮೊತ್ತ ಸಾಕಾಗದು. ಮೊತ್ತ ಹೆಚ್ಚಿಸುವಂತೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗುವುದು

– ಡಾ. ಗೋಪಾಲಕೃಷ್ಣ ಬಿ., ಆಯುಕ್ತ, ಮಹಾನಗರ ಪಾಲಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು