ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ : ಮಳೆ ಹಾನಿ ಪ್ರದೇಶಗಳಿಗೆ ಮೇಯರ್ ಭೇಟಿ; ಪರಿಶೀಲನೆ

Published 25 ಮೇ 2023, 5:22 IST
Last Updated 25 ಮೇ 2023, 5:22 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಮಂಗಳವಾರ ಸುರಿದ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಮೇಯರ್‌ ಈರೇಶ ಅಂಚಟಗೇರಿ ಅವರು ಬುಧವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.

ಹಳೆ ಹುಬ್ಬಳ್ಳಿಯ ಚನ್ನಪೇಟ, ತೊರವಿ ಹಕ್ಕಲ, ಖರಾದಿ ಓಣಿ, ಮೊಯಿನ್ ಪ್ಲಾಟ್ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಹಾನಿಯಾದ ಬಗ್ಗೆ ನಿವಾಸಿಗಳಿಂದ ಮಾಹಿತಿ ಪಡೆದರು. ಸಾರ್ವಜನಿಕರ ಆಸ್ತಿ, ಮನೆಗಳಿಗೆ ಹಾನಿಯುಂಟಾಗಿರುವ ಬಗ್ಗೆ ನಾಗರಿಕ ಮಾಹಿತಿ ಪಡೆದ ಅವರು, ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ  ಅಧಿಕಾರಿಗಳಿಗೆ ಸೂಚಿಸಿದರು.

ತೊರವಿಹಕ್ಕಲದಲ್ಲಿ ಮೂರ್ನಾಲ್ಕು ನಾಲೆಗಳ ನೀರು ಒಂದೇ ಕಡೆ ಸೇರಿ ಹರಿಯುವುದರಿಂದ ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿದೆ. ಇಲ್ಲಿ ಹಲವು  ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ರಾತ್ರಿ ಇಡೀ ತೊಂದರೆ ಅನುಭವಿಸಿದರು. ಇಲ್ಲಿ ನಾಲೆ ಮೇಲೆ ಕಟ್ಟಿದ್ದ ಮನೆಯನ್ನು ತೆರವು ಗೊಳಿಸಲಾಗಿದೆ ಎಂದು ಮೇಯರ್‌ ಹೇಳಿದರು.

ನಾಲಾ ಹಾಗೂ ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸಬೇಕು ಮತ್ತು ಹೂಳು ತೆಗೆಯಬೇಕು. ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಯಾವ ಒತ್ತಡಕ್ಕೂ ಒಳಗಾಗಬಾರದು. ಒತ್ತುವರಿ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಏನಾದರೂ ಹಾನಿಯಾದರೆ ವಲಯ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದರು.

ಗುಜರಾತ್‌ ಭವನ ಬಳಿ ನಾಲಾದಲ್ಲಿ ಬಿಎಸ್‌ಎನ್‌ಎಲ್‌ನ ಕೇಬಲ್‌ ಹಾಕಿರುವ ಪೈಪ್‌ಗಳು ಹಾದು ಹೋಗಿವೆ. ಇದರಿಂದ ನಾಲಾದಲ್ಲಿ ಕಸ ಕಟ್ಟಿಕೊಂಡು ನೀರು ಸರಾಗವಾಗಿ ಹರಿದು ಹೋಗುವುದಿಲ್ಲ. ಹೀಗಾಗಿ ಹಳೆ ಕಾಟನ್ ಮಾರ್ಕೆಟ್‌ನಲ್ಲಿ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಈ ಬಗ್ಗೆ ಬಿಎಸ್‌ಎನ್‌ಎಲ್‌ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಚಂದ್ರಿಕಾ ಮೇಸ್ತ್ರಿ, ಮಾಜಿ ಮೇಯರ್‌ ವೆಂಕಟೇಶ ಮೇಸ್ತ್ರಿ, ಪಾಲಿಕೆ ವಲಯ ಸಹಾಯಕ ಆಯುಕ್ತ ಆನಂದ ಕಾಂಬ್ಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT