ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೋಟದ ಶಬ್ದ ಮಾರ್ದನಿಸುತ್ತಿದೆ: ಉಕ್ರೇನ್‌ನ ಅನುಭವ ಹಂಚಿಕೊಂಡ ವಿದ್ಯಾರ್ಥಿಗಳು

ಯುದ್ಧ ಪೀಡಿತ ಉಕ್ರೇನ್‌ನ ಅನುಭವ ಹಂಚಿಕೊಂಡ ವಿದ್ಯಾರ್ಥಿಗಳು
Last Updated 8 ಮಾರ್ಚ್ 2022, 5:19 IST
ಅಕ್ಷರ ಗಾತ್ರ

ಹುಬ್ಬಳ್ಳಿ:‘ಪ್ರಾರಂಭದಲ್ಲಿ ಯುದ್ಧದ ಭೀತಿ ಇರಲಿಲ್ಲ. ಕ್ರಮೇಣ ಬಾಂಬ್‌ ದಾಳಿ ಪ್ರಾರಂಭವಾದ ಮೇಲೆ ಭಾರತಕ್ಕೆ ಹಿಂದಿರುಗುತ್ತೇವೆ ಎನ್ನುವ ಭರವಸೆಯೇ ಇರಲಿಲ್ಲ. ಯುದ್ಧದ ಭೀಕರತೆ ತೀವ್ರವಾಗಿದ್ದ ಪ್ರದೇಶದಲ್ಲೇ ಇದ್ದೆವು. ಭಾರತೀಯ ಸರ್ಕಾರ ನಮ್ಮನ್ನು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸಿದೆ’

ಹೀಗೆಂದು ಯುದ್ಧಪೀಡಿತ ಉಕ್ರೇನ್‌ನಿಂದ ಮುಂಬೈ ಮೂಲಕ ಹುಬ್ಬಳ್ಳಿಗೆ ವಿಮಾನ ನಿಲ್ದಾಣಕ್ಕೆ ಸೋಮವಾರ ಬಂದಿಳಿದ ವಿದ್ಯಾರ್ಥಿಗಳಾದ ಹುಬ್ಬಳ್ಳಿಯ ನಾಜಿಲ್ಲಾ ಗಾಜಿಪುರ, ಧಾರವಾಡದ ದೇವಮಾನೆ ಮಿಲನ್, ಬಾಗಲಕೋಟೆಯ ಸಹನಾ ಪಾಟೀಲ, ಬೆಳಗಾವಿಯ ವಿನಾಯಕ ನ್ಯಾಮಗೌಡತಮ್ಮ ಅನುಭವಗಳನ್ನು ಬಿಚ್ಚಿಟ್ಟರು.

ಸಹನಾ ಪಾಟೀಲ ಮಾತನಾಡಿ, ‘ಉಕ್ರೇನ್‌ನ ಕಾರ್ಕಿವ್‌ನಲ್ಲಿ ಯುದ್ಧದ ತೀವ್ರತೆ ಹೆಚ್ಚಾಗಿತ್ತು. ಆಹಾರ ಮತ್ತು ನೀರಿಗೆ ಸಂಕಷ್ಟ ಎದುರಿಸಬೇಕಾಯಿತು. ಕುಡಿಯಲು ನೀರು ಸಿಗುತ್ತಿರಲಿಲ್ಲ. ಬಂಕರ್‌ನಲ್ಲಿಯೇ ಆರು ದಿನ ಕಳೆಯಬೇಕಾಯಿತು. ಯುದ್ಧಪೀಡಿತ ಪ್ರದೇಶದಿಂದ ಹಂಗೇರಿಗೆ ಬಂದೆ, ಅ‌ಲ್ಲಿಂದ ಭಾರತೀಯ ರಾಯಭಾರಿಯ ಅಧಿಕಾರಿಗಳು ಸಹಾಯ ಮಾಡಿದರು’ ಎಂದರು.

‘ಹಾವೇರಿಯ ನವೀನ್ ಗ್ಯಾನಗೌಡರ್ ಮತ್ತು ನಾನು ಇಬ್ಬರೂ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಒಟ್ಟಿಗೆ ಹೋಗಿದ್ದೆವು. ನವೀನ್‌ ಪ್ರಥಮ ವರ್ಷದಲ್ಲಿ ಕ್ಲಾಸ್‌ಮೆಟ್‌ ಸಹ ಆಗಿದ್ದ. ನಗರದ ಮುಖ್ಯ ಪ್ರದೇಶದಲ್ಲಿದ್ದರಿಂದ ದಾಳಿಗೆ ಬಲಿಯಾಗಿದ್ದು, ನವೀನ್‌ ಕಳೆದುಕೊಂಡಿರುವುದಕ್ಕೆ ದುಃಖವಾಗುತ್ತಿದೆ’ ಎಂದು ಹೇಳಿದರು.

ಹುಬ್ಬಳ್ಳಿಯ ನಾಜಿಲ್ಲಾ ಗಾಜಿಪುರ ಮಾತನಾಡಿ, ‘ಎಂಟು ದಿನಗಳ ಕಾಲ ಬಂಕರ್‌ನಲ್ಲಿದ್ದೆ. ಅಲ್ಲಿ ಪರಿಸ್ಥಿತಿ ಗಂಭೀರವಾಗಿತ್ತು. ವಾಪಸ್‌ ಬರಲು ಸಹಾಯ ಮಾಡಿರುವ ಸರ್ಕಾರ, ವೈದ್ಯಕೀಯ ಶಿಕ್ಷಣ ಮುಂದುವರಿಸಲೂ ಸಹಾಯ ಮಾಡಬೇಕು. ಭವಿಷ್ಯದ ಬಗ್ಗೆ ಆತಂಕ ಸೃಷ್ಟಿಯಾಗಿದ್ದು, ವಿದ್ಯಾಭ್ಯಾಸ ಮುಂದುವರಿಸುವುದಕ್ಕೆ ದಾರಿ ತಿಳಿಯುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ವಿನಾಯಕ ನ್ಯಾಮಗೌಡ ಮಾತನಾಡಿ, ‘ಉಕ್ರೇನ್‌ನ ಸದ್ಯದ ಪರಿಸ್ಥಿತಿ ಗಂಭೀರವಾಗಿದೆ. ಸಾವು ಸಂಭವಿಸುತ್ತಿವೆ. ಅಕ್ಷರಶಃ ಜನ ನರಳಾಡುತ್ತಿದ್ದಾರೆ. ಅಲ್ಲಿದ್ದರೆ ಬದುಕಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಎರಡು ವಾರದ ಮುನ್ನವೇ ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆಯ ಸಂದೇಶ ಬಂದಿತ್ತು. ಆದರೆ, ನಾವು ನಿರ್ಲಕ್ಷ್ಯ ಮಾಡಿದೆವು. ನಮಗೆ ಆನ್‌ಲೈನ್‌ ತರಗತಿಗಳು ನಡೆಯುತ್ತಿದ್ದವು. ಕಾಲೇಜಿನಿಂದ ಯಾವುದೇ ಮಾಹಿತಿ ಲಭ್ಯವಿರಲಿಲ್ಲ’ ಎಂದು ಹೇಳಿದರು.

ದೇವಮಾನೆ ಮಿಲನ್, ‘ನಾವಿದ್ದ 12 ಕಿ.ಮೀ ಅಂತರದಲ್ಲಿ ಬಾಂಬ್‌ ಸ್ಫೋಟವಾಗಿತ್ತು.. ಬಾಂಬ್‌ ಸ್ಫೋಟದ ಶಬ್ದ ಗಾಬರಿ ಹುಟ್ಟಿಸಿತ್ತು. ಈಗಲೂ ಬಾಂಬ್‌ ಸ್ಫೋಟದ ನೆನಪು ಮಾಡಿಕೊಂಡರೆ ಮೈಜುಮ್‌ ಎನ್ನುತ್ತದೆ. ಬಾಂಬ್‌ ಸ್ಫೋಟದ ಶಬ್ದ ಕಿವಿಯಲ್ಲಿ ಮಾರ್ಧನಿಸುತ್ತಿದೆ’ ಎಂದರು.

‘ಇಲ್ಲಿಗೆ ಬರುವ ಕೊನೆ ದಿನಗಳಲ್ಲಿ ಕಿ.ಮೀ. ಅಂತದಲ್ಲಿ ಬಾಂಬ್‌ ಸ್ಫೋಟವಾಗುತ್ತಿತ್ತು. ನರಕದಿಂದ ಹಿಂದಿರುಗಂತಾಗಿದೆ’ ಎಂದು ಕರಾಳ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT