ಧಾರವಾಡ: ‘ಬೆಳೆ ಹಾನಿಯಾದಲ್ಲಿ ಸರ್ಕಾರಿ ವಿಮಾ ಕಂಪನಿಗಳಿಂದಲೇ ಪರಿಹಾರ ನೀಡಲು ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲಾಗುವುದು’ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳೆ ವಿಮೆ ಕುರಿತು ರೈತ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಬೆಳೆ ಕಟಾವು ಮಾದರಿಗಳನ್ನು ಎರಡು ಮೂರು ಪಟ್ಟು ಹೆಚ್ಚಿಸುವಲ್ಲಿ ಕ್ರಮಕೈಗೊಳ್ಳಲು ಸರ್ಕಾರಮಟ್ಟದಲ್ಲಿ ಚರ್ಚಿಸಲಾಗುವುದು. ಲಾಭದ ದೃಷ್ಟಿಯಿಂದ ಅಸ್ತಿತ್ವದಲ್ಲಿರುವ ವಿಮಾ ಕಂಪನಿಗಳು ರೈತರ ಹಿತಕಾಯುತ್ತಿಲ್ಲ’ ಎಂದರು.
‘ವಿಮಾ ಕಂಪನಿ ಬದಲಾವಣೆ ಮಾಡಬೇಕು. ರೈತರು ಸಹ ಇದಕ್ಕೆ ಪೂರಕವಾಗಿ ಒತ್ತಾಯ ಹಾಕಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೇ ವಿಮಾ ಕಂಪನಿಯನ್ನು ಆರಂಭಿಸಿ ಪಾರದರ್ಶಕ ಸಹಕಾರಿ ಸೊಸೈಟಿ ಮಾದರಿಯಲ್ಲಿ ವಿಮಾ ಸೊಸೈಟಿ ಆರಂಭಿಸಿ ಪರಿಹಾರ ನೀಡುವ ಕುರಿತು ಚರ್ಚೆ ನಡೆಯಬೇಕು’ ಎಂದರು.
ಕೆಲ ಪ್ರದೇಶಗಳಲ್ಲಿ ಒಂದೇ ತೆರನಾದ ಬೆಳೆ ಬೆಳೆಯುವಂತೆ ಹಾಗೂ ವಿಮೆ ಮಾಡಿಸುವಂತೆ ಕೆಲ ವ್ಯಕ್ತಿಗಳು ವಿಮಾ ಕಂಪನಿಗಳ ಜೊತೆಗೂಡಿ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ರೈತರು ಸಭೆಯ ಗಮನಕ್ಕೆ ತಂದರು.
ಇಂಥವರ ಬಗ್ಗೆ ನಿಗಾ ವಹಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಲಾಡ್ ತಿಳಿಸಿದರು. ಶಾಸಕ ಎನ್.ಎಚ್.ಕೋನರೆಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಪಾಲ್ಗೊಂಡಿದ್ದರು.